Advertisement

ಇನ್ನು ಮುಂದೆ ವಿದ್ಯಾರ್ಥಿ ವೇತನಕ್ಕೆ ಒಂದೇ ಅರ್ಜಿ

06:15 AM Jun 26, 2018 | |

ಬೆಂಗಳೂರು: ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಇನ್ಮುಂದೆ ನಾನಾ ಇಲಾಖೆಗಳಿಗೆ ಅಥವಾ ಅಧಿಕಾರಿಗಳ
ಕಚೇರಿಗೆ ಅಲೆಯುವುದನ್ನು ತಪ್ಪಿಸಲು “ಏಕಗವಾಕ್ಷಿ’ ವ್ಯವಸ್ಥೆಯನ್ನು ದೇಶದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರ
ಜಾರಿಗೆ ತಂದಿದೆ. 

Advertisement

ಇದರಿಂದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ , ಬುಡಕಟ್ಟು ಕಲ್ಯಾಣ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ 1ರಿಂದ 10ನೇ ತರಗತಿವರೆಗೆನ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ.

ಶೈಕ್ಷಣಿಕ ವರ್ಷ (2018-19)ದಿಂದಲೇ ಈ ವ್ಯವಸ್ಥೆ ಜಾರಿಯಾಗಲಿದ್ದು ಒಂದೇ ಅರ್ಜಿ ಸಲ್ಲಿಕೆಯಿಂದ ವಿದ್ಯಾರ್ಥಿ ವೇತನ ಪಡೆಯುವಂತೆ ಮಾಡಲು ಇಲಾಖೆ ಸಜ್ಜಾಗಿದೆ. ವಿದ್ಯಾರ್ಥಿ ಸಲ್ಲಿಸುವ ಅರ್ಜಿಯಲ್ಲೇ ಯಾವ ಇಲಾಖೆಯಿಂದ ತಾವು ವಿದ್ಯಾರ್ಥಿ ವೇತನ ಬಯಸುತ್ತಿದ್ದೇನೆ ಎಂಬುದರ ಬಗ್ಗೆ ವಿವರ ನೀಡಬಹುದು.

ಒಂದೊಮ್ಮೆ ಮೂರ್‍ನಾಲ್ಕು ಇಲಾಖೆಗಳಿಂದಲೂ ಒಬ್ಬ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ಸಿಗುತ್ತಿದ್ದರೂ ಅದಕ್ಕೂ ಅದೇ
ಅರ್ಜಿ ಸಾಕಾಗುತ್ತದೆ.

ಈ ವ್ಯವಸ್ಥೆ ಜಾರಿಗೊಳಿಸಲು ಶಿಕ್ಷಣ ಇಲಾಖೆಯು, ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ಸಿಸ್ಟಂ(ಎಸ್‌ಎಟಿಎಸ್‌)ನಲ್ಲಿ ವಿದ್ಯಾರ್ಥಿಗಳ ಜಾತಿ, ಪಾಲಕ ಅಥವಾ ಪೋಷಕರ ಮಾಹಿತಿ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಮಾಹಿತಿ, ಮೊಬೈಲ್‌
ಸಂಖ್ಯೆ(ಪಾಲಕ, ಪೋಷಕ), ಆದಾಯ ಪ್ರಮಾಣ ಪತ್ರ ಸೇರಿ ಎಲ್ಲ ಮಾಹಿತಿ ತುಂಬಲು ಅವಕಾಶ ಕಲ್ಪಿಸಿದೆ. ಇ-ಆಡಳಿತ ಇಲಾಖೆ ಸಿದ್ಧಪಡಿಸಿರುವ ಸ್ಟೇಟ್‌ ಸ್ಕಾಲರ್‌ಶಿಪ್‌ ಪೋರ್ಟಲ್‌ಗೆ ಇಲಾಖೆಯ ಸ್ಕಾಲರ್‌ಶಿಪ್‌ ಲಿಂಕ್‌
ಅಳವಡಿಸಲಾಗಿದೆ.

Advertisement

ಆನ್‌ಲೈನ್‌ ವ್ಯವಸ್ಥೆ: ಇಲಾಖೆ ಅರ್ಜಿ ಆಹ್ವಾನಿಸಿದ ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ತನ್ನ ಎಸ್‌ಎಟಿಎಸ್‌ ನಂಬರ್‌ ನಮೂದಿಸಿದರೆ ಅರ್ಜಿ ತಾನಾಗಿಯೇ ಭರ್ತಿಯಾಗುತ್ತದೆ. ತಿಂಗಳೊಳಗೆ ವಿದ್ಯಾರ್ಥಿಗಳ ಅಥವಾ ಪಾಲಕರ ಖಾತೆಗೆ ಹಣ ಜಮಾ ಆಗುತ್ತದೆ.

ಇದರ ಎಸ್‌ಎಂಎಸ್‌ ಕೂಡ ಕಳುಹಿಸಲಾಗುತ್ತದೆ. ಕಚೇರಿ ಸುತ್ತುವ ಕಷ್ಟವೂ ತಪ್ಪುತ್ತದೆ. ಅನರ್ಹರನ್ನು ಸುಲಭವಾಗಿ ಪತ್ತೆ ಹಚ್ಚಲೂ ಅವಕಾಶವಿದೆ ಎಂದು ಹಿರಿಯ ಕಾರ್ಯಕ್ರಮಾಧಿಕಾರಿ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಮಾಹಿತಿ ಸಂಗ್ರಹ
ರಾಜ್ಯದಲ್ಲಿ ಒಟ್ಟು 1 ಕೋಟಿ ವಿದ್ಯಾರ್ಥಿಗಳಿದ್ದು ಇದರಲ್ಲಿ ಸರ್ಕಾರಿ ಶಾಲೆಯ ಅನುದಾನಿತ, ಅನುದಾನ ರಹಿತ ರಾಜ್ಯಪಠ್ಯಕ್ರಮ, ಸಿಬಿಎಸ್‌ಇ,ಐಸಿಎಸ್‌ಇ ಸೇರಿ ಎಲ್ಲ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಈ ವ್ಯವಸ್ಥೆಅನ್ವಯಿಸುತ್ತದೆ. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದ ಎಸ್‌ಎಟಿಎಸ್‌ ಮೂಲಕ ಒಂದರಿಂದ 10ನೇ ತರಗತಿಯ 80 ಲಕ್ಷ ವಿದ್ಯಾರ್ಥಿಗಳ ಎಲ್ಲ ಮಾಹಿತಿ ಈಗಾಗಲೇ ಕಲೆಹಾಕಲಾಗಿದೆ. ಉಳಿದ 20ರಿಂದ 30 ಸಾವಿರ ವಿದ್ಯಾರ್ಥಿಗಳ ಮಾಹಿತಿಯನ್ನುಹತ್ತು ದಿನದೊಳಗೆ ಸಂಗ್ರಹಿಸಲಾಗುತ್ತದೆ ಎಂದು ಇಲಾಖೆಯ ಹಿರಿಯ ಕಾರ್ಯಕ್ರಮಾಧಿಕಾರಿ ಹೇಳಿದರು.

ಮುಖ್ಯಶಿಕ್ಷಕರಿಗೆ ಜವಾಬ್ದಾರಿ
ಎಸ್‌ಎಟಿಎಸ್‌ನಲ್ಲಿ ದಾಖಲು ಮಾಡುವ ಶಾಲಾ ಮಾಹಿತಿ, ವಿದ್ಯಾರ್ಥಿಗಳ ಮಾಹಿತಿ, ಶಿಕ್ಷಕರಮಾಹಿತಿಯ ಗೌಪ್ಯತೆ, ನೈಜತೆ  ಹಾಗೂ ಪರಿಪೂರ್ಣತೆಯ ಸಂಪೂರ್ಣ ಹೊಣೆ ಶಾಲಾ ಮುಖ್ಯಶಿಕ್ಷಕರದ್ದಾಗಿದೆ. ಪ್ರತಿ ವಿದ್ಯಾರ್ಥಿಯ ಎಸ್‌ಎಟಿಎಸ್‌ ಸಂಖ್ಯೆಯನ್ನು ಆ ವಿದ್ಯಾರ್ಥಿ ಮತ್ತು ಅವರ ಪಾಲಕ, ಪೋಷಕರಿಗೆ ನೀಡುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ಬಿಟ್ಟುಹೋದರೆ ಅಥವಾತಲುಪದೇ ಇದ್ದರೆ ಮುಖ್ಯಶಿಕ್ಷಕರೇ 
ಜವಾಬ್ದಾರರಾಗಿರುತ್ತಾರೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next