ಚೆನ್ನೈ: ಬೆಳೆ ಹಾನಿ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ತೀವ್ರ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹಣವಿಲ್ಲ ಎಂದು ಹೇಳಿರುವ ತಮಿಳುನಾಡು ಸರಕಾರ ಈಗ ಮುಖ್ಯಮಂತ್ರಿ ಸೇರಿ ಸಚಿವರು, ಶಾಸಕರ ಮಾಸಿಕ ವೇತನ ಹಾಗೂ ಭತ್ಯೆಯನ್ನು ದುಪ್ಪಟ್ಟು ಮಾಡಿದೆ. ಪರಿಣಾಮ ವಿಧಾನ ಸಭೆಯಲ್ಲಿ ಕುಳಿತೆದ್ದು ಬರುವ ಜನಪ್ರತಿನಿಧಿಗಳು ಈಗ ಪ್ರತಿತಿಂಗಳು ಒಂದು ಲಕ್ಷ ರೂ.ನಷ್ಟು ಜೇಬಿಗಿಳಿಸಿ ಕೊಳ್ಳಲಿದ್ದಾರೆ.
ಈ ಹಿಂದೆ ಭರವಸೆ ನೀಡಿದಂತೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಬುಧವಾರ ಪ್ರಕಟಿಸಿದ್ದು, ಈ ಹಿಂದೆ ನೀಡಲಾಗುತ್ತಿದ್ದ 55,000 ರೂ. ಸಂಬಳ ಹಾಗೂ ಭತ್ಯೆಯನ್ನು 1,05,000 ರೂ.ಗೆ ಹೆಚ್ಚಿಸಿದ್ದಾರೆ. ಶೇ.90.91ರಷ್ಟು ಹೆಚ್ಚಳ ಮಾಡಿರುವುದು ಸಹಜವಾಗಿಯೇ ಶಾಸಕರಲ್ಲಿ ಮಂದಹಾಸ ಮೂಡಿಸಿದೆ. ಇದೇ ಪ್ರಕಾರ ಪಿಂಚಣಿ ಕೂಡ ಹೆಚ್ಚಳಗೊಳ್ಳಲಿದೆ.
ಇದೇ ವೇಳೆ, ವಿಧಾನಸಭೆ ಕ್ಷೇತ್ರಾಭಿವೃದ್ಧಿಗೆ ನೀಡಲಾಗುವ ಧನಸಹಾಯವನ್ನೂ 2 ಕೋಟಿ ರೂ.ನಿಂದ 2.50 ಕೋಟಿ ರೂ.ಗೆ ಜಾಸ್ತಿಗೊಳಿಸಿದ್ದಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ತಿಳಿಸಿದ್ದಾರೆ. ಇನ್ನು ಸಿಎಂ, ಸಚಿವರು, ಸ್ಪೀಕರ್‌ಗಳ ಭತ್ಯೆಯಲ್ಲಿಯೂ ಗಣನೀಯ ಹೆಚ್ಚಳವಾಗಿದೆ.
ಮತ್ತೆ ಪ್ರತಿಭಟನೆ: ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಕಳೆದ ಕೆಲ ತಿಂಗಳಿಂದ ಪ್ರತಿಭಟಿ ಸುತ್ತಲೇ ಇರುವ ತಮಿಳುನಾಡು ರೈತರು ರಾಷ್ಟ್ರರಾಜಧಾನಿಯಲ್ಲಿ ಮತ್ತೆ ಧರಣಿ ಆರಂಭಿ ಸಿದ್ದಾರೆ. ಬುಧಾವಾರ ಜಂತರ್‌ಮಂತರ್‌ನಲ್ಲಿ ಅರೆಬೆತ್ತಲಾಗಿ ಪ್ರತಿಭಟಿಸಿರುವ ರೈತರು ಶೀಘ್ರ ತಮಗಾದ ನಷ್ಟಭರಿಸುವಂತೆ ಕೇಂದ್ರ ಸರಕಾರ ವನ್ನು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರೂ ರೈತರ ಪ್ರತಿಭಟನೆ ಸಾಥ್ ನೀಡಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.