Advertisement
ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗೊಂಡಿರುವ ಅವರಿಗೆ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ವೈದ್ಯರು ಅವರಿಗೆ ಚಿಕಿತ್ಸೆ ಒದಗಿಸುತ್ತಿದ್ದಾರೆ. ವಿಪರೀತ ರಕ್ತ ಸ್ರಾವ ಆಗಿರುವುದರಿಂದ ಆವರಿಗೆ ನಿರಂತರವಾಗಿ ರಕ್ತ ಪೂರೈಕೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಮಧ್ಯೆ ಅನೇಕ ಮಂದಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಶರತ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ನಾಯಕರಾದ ರಾಜೇಶ್ ನಾಯಕ್, ಜಿತೇಂದ್ರ ಕೊಟ್ಟಾರಿ, ಸುಲೋಚನಾ ಭಟ್, ಸತ್ಯಜಿತ್ ಸುರತ್ಕಲ್, ಡಾ| ಭರತ್ ಶೆಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಪೊಲೀಸ್ ಬಂದೋಬಸ್ತು
ಬಂಟ್ವಾಳ ತಾಲೂಕಿನಾದ್ಯಂತ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮುಂದುವರಿದಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜೂ. 11ರ ವರೆಗೆ ಜಾರಿಯಲ್ಲಿದೆ.
ಪಶ್ಚಿಮ ವಲಯದ ಐಜಿಪಿ ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಬಂಟ್ವಾಳದಲ್ಲಿ ಮೊಕ್ಕಾಂ ಮಾಡಿ ಕಾನೂನು ಸುವ್ಯವಸ್ಥೆ ಪಾಲನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.