Advertisement

ಕೆಪಿಸಿಸಿ ಕಟ್ಟಡ ಉದ್ಘಾಟನೆಗೆ ಹಗ್ಗಜಗ್ಗಾಟ

06:00 AM Jun 28, 2018 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಒಂದು ಕಡೆಯಾದರೆ, ನೂತನ ಕಟ್ಟಡ ಉದ್ಘಾಟನೆಯ ಹಿಂದೆ ಭಾರೀ ಹಗ್ಗಜಗ್ಗಾಟ ನಡೆಯುತ್ತಿದೆ. ಹಾಲಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳ ನಡುವೆ ಆಂತರಿಕ ಸಂಘರ್ಷ ಶುರುವಾಗಿದೆ ಎಂದು ತಿಳಿದು ಬಂದಿದೆ.

Advertisement

ಡಾ.ಜಿ. ಪರಮೇಶ್ವರ್‌ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದು, ಇದೀಗ ತಾವೇ ಉದ್ಘಾಟನೆ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದಾರೆ ಎಂದು ಹೇಳಲಾಗಿದೆ. ಅದಕ್ಕಾಗಿ ಆದಷ್ಟು ಬೇಗ ಕಟ್ಟಡ ಕಾಮಗಾರಿ ಮುಗಿಸಿ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಕರೆಸಲು ಯೋಜನೆ
ಹಾಕಿಕೊಂಡಿದ್ದಾರೆ ಎಂಬ ಮಾತು ಕಾಂಗ್ರೆಸ್‌ ವಲಯದಿಂದಲೇ ಕೇಳಿ ಬರುತ್ತಿದೆ.

ಆದರೆ, ಈಗಾಗಲೇ ಹೊಸ ಅಧ್ಯಕ್ಷರ ನೇಮಕಕ್ಕೆ ಹೈಕಮಾಂಡ್‌ ಮಟ್ಟದಲ್ಲಿ ಪ್ರಕ್ರಿಯೆ ಆರಂಭವಾಗಿದ್ದು  ಶೀಘ್ರವೇ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ. ಹೀಗಾಗಿ, ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ಅಧ್ಯಕ್ಷರಾದ ಬೆನ್ನಲ್ಲೇ ತಾವೇ ಉದ್ಘಾಟಿಸಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಹಾಲಿ ಅಧ್ಯಕ್ಷರ ಅಪೇಕ್ಷೆಗೆ ಅಡ್ಡಗಾಲಿಡುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೂ ಎರಡು ತಿಂಗಳು: ಈಗಾಗಲೇ ಶೇ.90ರಷ್ಟು ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇಂಟೀರಿಯರ್‌ ಡಿಸೈನ್‌, ವಿದ್ಯುದ್ದೀಕರಣ, ಗ್ರಾನೈಟ್‌ ವರ್ಕ್ಸ್, ಆಡಿಟೋರಿಯಂ ಸಿದಟಛಿಗೊಳಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ. ಆದರೆ, ಎಲ್ಲ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 2 ತಿಂಗಳು ಸಮಯ ಹಿಡಿಯುವ ಸಾಧ್ಯತೆ ಇದೆ.

ಹೀಗಾಗಿ, ನೂತನ ಕಟ್ಟಡ ಉದ್ಘಾಟನೆ ಆಗುವವರೆಗಾದರೂ ತಾವು ಅಧ್ಯಕ್ಷ ಗಾದಿಯಲ್ಲಿ ಮುಂದುವರಿಯ ಬೇಕೆಂಬ ಲೆಕ್ಕಾಚಾರವನ್ನು ಪರಮೇಶ್ವರ್‌ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಅವರ ವಿರೋಧಿ ಬಣ ಆದಷ್ಟು ಬೇಗ ನೂತನ ಅಧ್ಯಕ್ಷರ ನೇಮಕ ಮಾಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ವಿಳಂಬಕ್ಕೆ ಹಣಕಾಸಿನ ಸಮಸ್ಯೆ: ರಾಜ್ಯದಲ್ಲಿ ಕಾಂಗ್ರೆಸ್‌ 5 ವರ್ಷ ಪೂರ್ಣ ಅಧಿಕಾರ ನಡೆಸಿ ಮತ್ತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿ ಅಧಿಕಾರ ನಡೆಸುತ್ತಿದೆ.

Advertisement

ಆದರೆ, ಪಕ್ಷದ ಆಡಳಿತ ನಡೆಸಲು ಹೊಸ ಕಚೇರಿ ನಿರ್ಮಾಣಕ್ಕೆ ಹಣಕಾಸಿನ ತೊಂದರೆ ಉಂಟಾಗಿದೆ. ಎರಡು ಕೆಳ ಮಹಡಿ ಸೇರಿದಂತೆ ಐದು ಅಂತಸ್ತಿನ ಕಟ್ಟಡವನ್ನು ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಕಟ್ಟಡ ಯೋಜನೆಗೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರಿಂದ ತಲಾ ಐದು ಲಕ್ಷ, ಸಂಸದರಿಂದ ಐದು ಲಕ್ಷ, ಶಾಸಕರು, ವಿಧಾನ ಪರಿಷತ್‌ ಸದಸ್ಯರಿಂದ ತಲಾ ಒಂದು ಲಕ್ಷ ದೇಣಿಗೆ ಪಡೆಯಲಾಗಿತ್ತು. ಅಲ್ಲದೆ, ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಗೆ ಟಿಕೆಟ್‌ ಬಯಸಿದ್ದ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಿಂದ ಹತ್ತರಿಂದ ಇಪ್ಪತೈದು ಸಾವಿರವರೆಗೆ ಕಟ್ಟಡ ನಿಧಿ ಹೆಸರಿನಲ್ಲಿ ಹಣ ಸಂಗ್ರಹಿಸಲಾಗಿತ್ತು.

ಆದರೆ, ಕಟ್ಟಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವು ದರಿಂದ ಯೋಜನಾ ವೆಚ್ಚ ಹೆಚ್ಚಾಗುತ್ತಿದೆ. ಅಲ್ಲದೆ, ಈಗಾಗಲೇ ನಡೆದಿರುವ ಕಾಮಗಾರಿಗೂ ಸಂಪೂರ್ಣ ಹಣ ನೀಡದಿರುವುದರಿಂದ ಸುಮಾರು 6 ರಿಂದ 7 ಕೋಟಿ ಹಣ ಬಾಕಿ ಇದೆ ಎಂದು ತಿಳಿದು ಬಂದಿದೆ. ಗುತ್ತಿಗೆದಾರರಿಗೆ ಸರಿಯಾದ ಸಮಯಕ್ಕೆ ಹಣ 
ಪಾವತಿಸದಿರುವುದರಿಂದ ನಿರ್ಮಾಣ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿದೆ ಎನ್ನಲಾಗಿದೆ. ನಾಯಕರ ಹಿಂದೇಟು: ವಿಧಾನಸಭೆ ಚುನಾವಣೆಗೂ ಮೊದಲು ಪಕ್ಷದ ಅಗತ್ಯಕ್ಕೆ ತಕ್ಕಂತೆ ದೇಣಿಗೆ ನೀಡಿದ್ದ ಅನೇಕ ನಾಯಕರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ದೇಣಿಗೆ ನೀಡಲು ಈಗ ಹಿಂದೇಟು
ಹಾಕಿದ್ದಾರೆ ಎನ್ನಲಾಗಿದೆ. ಪಕ್ಷದ ದೈನಂದಿನ ಕಾರ್ಯಚಟುವಟಿಕೆಗಳ ಜೊತೆಗೆ ಹೊಸ ಕಟ್ಟಡ ಕಾಮಗಾರಿಗೆ ಹಣ ಹೊಂದಿಸುವುದು ಕಷ್ಟದ ಕೆಲಸವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

– ಶಂಕರ್‌ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next