Advertisement

ಮುದ್ದೇಬಿಹಾಳದಲ್ಲಿ ಮನೆಯ ಮೇಲ್ಛಾವಣಿ ಕುಸಿತ: ವೃದ್ದೆಗೆ ಗಂಭೀರ ಗಾಯ

07:20 PM Sep 23, 2021 | Ganesh Hiremath |

ಮುದ್ದೇಬಿಹಾಳ: ಎಡೆಬಿಡದೆ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಮುದ್ದೇಬಿಹಾಳ ತಾಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿ ಮನೆಯೊಂದರ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದು ಅದರಡಿ ಮಣ್ಣಿನಲ್ಲಿ ಸಿಲುಕಿದ್ದ ವೃದ್ದೆ ಮಾಂತವ್ವ ರಾಮಲಿಂಗಪ್ಪ ಹೂಗಾರ ಎಂಬಾಕೆಯನ್ನು ಅಕ್ಕಪಕ್ಕದವರು ರಕ್ಷಿಸಿ ಇಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ವೃದ್ದೆ ತುರ್ತು ಚಿಕಿತ್ಸೆ ದೊರಕಿದ್ದರಿಂದ ಸದ್ಯ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನಾ ಸ್ಥಳಕ್ಕೆ ಢವಳಗಿ ಕಂದಾಯ ನಿರೀಕ್ಷಕ, ಗ್ರಾಮಲೆಕ್ಕಾಧಿಕಾರಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದು ಘಟನೆಯ ವಿವರಗಳನ್ನು ಫೋಟೊ ದಾಖಲೆ ಸಮೇತ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆಸ್ಪತ್ರೆಗೂ ತೆರಳಿ ವೃದ್ದೆಯ ಆರೋಗ್ಯ ವಿಚಾರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರು ಮಳೆಯ ಕಾರಣದಿಂದಾಗಿ ಹಳೇಯ ಕಾಲದ ಮನೆಯ ಮಣ್ಣಿನ ಮೇಲ್ಛಾವಣಿ ಕುಸಿದಿರುವ ಬಗ್ಗೆ ಕಂದಾಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ನಾನು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ವೃದ್ದೆಯ ಆರೋಗ್ಯ ವಿಚಾರಿಸುತ್ತೇನೆ. ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ಲಭ್ಯವಾಗುವ ಪರಿಹಾರವನ್ನು ಕೊಡಲು ಕ್ರಮ ಕೈಕೊಳ್ಳಲು ಜಿಲ್ಲಾಧಿಕಾರಿಯವರಿಗೆ ವರದಿ ಕಳಿಸುತ್ತೇನೆ. ಮಳೆಯಿಂದ ಎಲ್ಲೆಲ್ಲಿ ಹಾನಿ ಆಗಿದೆ ಅನ್ನೋ ಮಾಹಿತಿ ಸಂಗ್ರಹಿಸುವಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ನಿರತರಾಗಿದ್ದಾರೆ. ದೇವರ ಹುಲಗಬಾಳ ಘಟನೆ ಹೊರತುಪಡಿಸಿ ಬೇರೆಲ್ಲೂ ಹಾನಿ ಆಗಿರುವ ವರದಿ ಸಧ್ಯಕ್ಕೆ ಲಭ್ಯವಾಗಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next