Advertisement

ಜಯಲಕ್ಷ್ಮೀ ವಿಲಾಸ ಅರಮನೆ ಛಾವಣಿ ಕುಸಿತ

02:47 PM Nov 17, 2021 | Team Udayavani |

ಮೈಸೂರು: ನಗರದ ಮಾನಸ ಗಂಗೋತ್ರಿ ಆವರಣದಲ್ಲಿರುವ ಜಯಲಕ್ಷ್ಮೀ ವಿಲಾಸ ಅರಮನೆಯ ಒಂದು ಪಾರ್ಶ್ವದ ಮೊದಲ ಮಹಡಿಯ ಛಾವಣಿ ಕುಸಿದು ಬಿದ್ದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಮತ್ತಷ್ಟು ಕುಸಿದು ಬೀಳುವ ಆತಂಕ ಎದುರಾಗಿದೆ.

Advertisement

ಏಷ್ಯಾದ ಅತಿ ದೊಡ್ಡ ಜಾನಪದ ವಸ್ತುಸಂಗ್ರಹಾಲಯ ಎಂಬ ಖ್ಯಾತಿಯ ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಅರಮನೆ ಸಮರ್ಪಕ ನಿರ್ವಹಣೆ ಕೊರತೆ ಹಾಗೂ ನಿರ್ಲಕ್ಷದಿಂದ ಶಿಥಿಲಗೊಂಡಿತ್ತು. ಆದರೆ, ಇತ್ತೀಚೆಗೆ ಸುರಿದ ಭಾರೀ ಮಳೆಗೆ ಅರಮನೆಯ ದಕ್ಷಿಣ ಭಾಗಕ್ಕಿರುವ ಕಟ್ಟದ ಮೊದಲ ಮಹಡಿ ಛಾವಣಿ 08ರಿಂದ 10 ಅಡಿ ಯಷ್ಟು ಅಗಲಕ್ಕೆ ಕುಸಿದಿದ್ದು, ಉಳಿದ ಭಾಗಗಳು ಕುಸಿಯುವ ಹಂತಕ್ಕೆ ತಲುಪಿವೆ.

ಅನುದಾನ ಕೊರತೆ: ಅರಮನೆಯ ಹಲವು ಭಾಗಗಳಲ್ಲಿ ನೀರು ಸೋರುತ್ತಿದ್ದು, ಅರಮನೆ ಕುಸಿಯುವ ಭೀತಿ ಎದುರಿಸುತ್ತಿದೆ. ಅರಮನೆ ಛಾವಣಿ ದುರಸ್ತಿಗೆ ಕನಿಷ್ಠ 15 ರಿಂದ 20 ಕೋಟಿ ರೂ. ಅವಶ್ಯಕತೆ ಇದೆ ಎಂದು ಮೈಸೂರು ವಿವಿ ಆಡಳಿತ ಮಂಡಳಿ ಹೇಳುತ್ತಿದ್ದು, ಅನುದಾನ ಕೊರತೆ ನೆಪದಲ್ಲಿ ನವೀಕರಣ ಮಾಡದೆ ಉಳಿದಿರುವುದರಿಂದ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.

ಇದನ್ನೂ ಓದಿ:- ಅನಿಲ್ ಕುಂಬ್ಳೆ ಸ್ಥಾನಕ್ಕೆ ಸೌರವ್ ಗಂಗೂಲಿ ನೇಮಕ

ಪಾರಂಪರಿಕ ಶೈಲಿ: ಈಗಾಗಲೇ ಪಾರಂಪರಿಕ ತಜ್ಞರ ತಂಡ ಕಟ್ಟಡದ ಸ್ಥಿತಿಗತಿಯನ್ನು ಪರಿಶೀಲಿಸಿ ಛಾವಣಿ ದುರಸ್ತಿಗೆ 15 ರಿಂದ 20 ಕೋಟಿ ರೂ.ಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಕಟ್ಟಡದ ಪಾರಂಪರಿಕ ಶೈಲಿಗೆ ಧಕ್ಕೆಯಾಗದ ರೀತಿಯಲ್ಲಿ ಸಂರಕ್ಷಣಾ ಕಾರ್ಯ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ.

Advertisement

6,500ಕ್ಕೂ ಹೆಚ್ಚು ವಸ್ತು ಪ್ರದರ್ಶನ: “ಜಯಲಕ್ಷ್ಮೀ ವಿಲಾಸ ಅರಮನೆಯನ್ನು ಜಾನಪದ ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಿ 6,500ಕ್ಕೂ ಹೆಚ್ಚು ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಜಾನಪದ ವಸ್ತುಸಂಗ್ರಹಾಲಯ ಹಳ್ಳಿಯ ಜೀವನ, ಸಾಂಪ್ರದಾಯಿಕ ಕರಕುಶಲ ಮತ್ತು ಮೈಸೂರು ಸುತ್ತಮುತ್ತಲಿನ ಜನರ ಜೀವನ ಕ್ರಮ ತಿಳಿಸಿಕೊಡುವ ಅಪರೂಪದ ವಸ್ತುಗಳನ್ನು ಸಂಗ್ರಹಿಸಡಲಾಗಿದೆ ಜಯಲಕ್ಷ್ಮೀ ವಿಲಾಸ ಅರಮನೆಯ ಛಾವಣಿಯ ಒಂದು ಭಾಗ ಇತ್ತೀಚೆಗೆ ಸುರಿದ ಮಳೆಯಿಂದ ಕುಸಿದಿದೆ.  ವರ್ಷದ ಹಿಂದೆಯೇ ನವೀಕರಣಕ್ಕಾಗಿ ಅಗತ್ಯ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈಗ ಮಳೆ ನಿಂತಾಕ್ಷಣ ವಿವಿಯಿಂದಲೇ ಹಂತ ಹಂತವಾಗಿ ದುರಸ್ತಿ ಕಾರ್ಯ ನಡೆಸುತ್ತೇವೆ.” – ಪ್ರೊ.ಜಿ. ಹೇಮಂತ್‌ ಕುಮಾರ್‌, ವಿವಿ ಕುಲಪತಿ.

Advertisement

Udayavani is now on Telegram. Click here to join our channel and stay updated with the latest news.

Next