ಹುಬ್ಬಳ್ಳಿ: ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದ್ದು, ಯುವಕರು ಸಂಘ-ಸಂಸ್ಥೆಗಳ ಮೂಲಕ ನಿಸ್ವಾರ್ಥ ಮನಸ್ಸಿನಿಂದ ರಾಷ್ಟ್ರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಡೆನಿಸನ್ಸ್ ಹೋಟೆಲ್ನಲ್ಲಿ ಸಿಐಐನ ಯಂಗ್ ಇಂಡಿಯಾ ಹು-ಧಾ ಶಾಖೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳ ಕುರಿತು ಜಾಗೃತಿ, ಪರಿಹಾರ ಕಲ್ಪಿಸುವ ಕೆಲಸ ನಡೆಯುತ್ತಿದೆ. ಕೆಲ ಸಣ್ಣ ವಿಚಾರಗಳನ್ನು ಅಭಿಯಾನ ರೂಪ ನೀಡಿ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಅದಕ್ಕೆ ಪರಿಹಾರ ಕಲ್ಪಿಸುವ ಕೆಲಸವನ್ನು ಕೆಲ ಸಂಘ-ಸಂಸ್ಥೆಗಳು ಮಾಡುತ್ತಿವೆ ಎಂದರು.
ಕಂಡ ಕಂಡಲ್ಲಿ ಉಗುಳುವುದು, ಬೇಕಾಬಿಟ್ಟಿ ವಾಹನ ಚಲಾಯಿಸುವುದು, ಸಂಚಾರಿ ನಿಯಮಗಳ ಉಲ್ಲಂಘನೆ, ಸಿಗ್ನಲ್ಗಳಲ್ಲಿ ಗಡಿಬಿಡಿ ಸಣ್ಣ ವಿಷಯಗಳಾದರೂ ದೊಡ್ಡ ಮಟ್ಟದಲ್ಲಿ ಸಮಸ್ಯೆ ಉಂಟುಮಾಡುತ್ತಿವೆ. ಯಂಗ್ ಇಂಡಿಯಾ ಇಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ. ಹು-ಧಾ ಮಹಾನಗರವನ್ನು ಉತ್ತಮ ಸ್ಥಳವನ್ನಾಗಿ ಮಾರ್ಪಾಡು ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಾಮಾಜಿಕ ಕಾರ್ಯಗಳಿಗೆ ಜಿಲ್ಲಾಡಳಿತ ಸದಾ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಮಾತನಾಡಿ, ಸಂಚಾರಿ ನಿಯಮಗಳ ಬಗ್ಗೆ ಸಾಕಷ್ಟು ಜನರಿಗೆ ಅರಿವಿದೆ. ಪೊಲೀಸರು ಇಲ್ಲವಲ್ಲ, ನಿಯಮ ಉಲ್ಲಂಘಿಸಿದರೆ ಕೇಳುವವರು ಯಾರು ಎನ್ನುವ ಮನಸ್ಥಿತಿಯ ಜನರೇ ಹೆಚ್ಚಾಗಿದ್ದಾರೆ. ಇಂತಹ ಭಾವನೆಯಿಂದ ಜನರು ಹೊರ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ಕೊಡಬೇಕು ಎಂದು ಹೇಳಿದರು.
ಸಿಐಐ ಚೇರ್ಮನ್ ಅಮನ್ ಚೌಧರಿ ಮಾತನಾಡಿ, ಅಭಿವೃದ್ಧಿ ಭಾರತ, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು ಯಂಗ್ ಇಂಡಿಯಾ ಪ್ರಮುಖ ಗುರಿಯಾಗಿದೆ. ಯುವಕರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದು ಸಂಸ್ಥೆ ಕೈಗೊಂಡ ಕಾರ್ಯಕ್ರಮಗಳಿಂದ ಸಾಬೀತಾಗಿದೆ. ವಿವಿಧ ನಗರಗಳಲ್ಲಿ ಯಂಗ್ ಇಂಡಿಯಾ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿನ ಶಾಖೆ ಸ್ಥಳೀಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಆಗಬೇಕು ಎಂದರು.
ಹು-ಧಾ ಯಂಗ್ ಇಂಡಿಯಾ ಮೊದಲ ಅಧ್ಯಕ್ಷರಾಗಿ ಡಾ| ಶ್ರೀನಿವಾಸ ಜೋಶಿ, ಉಪಾಧ್ಯಕ್ಷರಾಗಿ ಸಚಿನ್ ಟೆಂಗಿನಕಾಯಿ ಪದಗ್ರಹಣ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿದರು. ಸಿಐಐನ ಮುರಳಿ ಕಾರ್ತಿಕ, ಶ್ರೀಕಾಂತ ಸೂರ್ಯನಾರಾಯಣ, ಅನಿಲ ಸುರಿ, ರೋಹಿತ ಕೌಂಟಿಯಾ ಇನ್ನಿತರರಿದ್ದರು.