Advertisement

ಮಹಿಳಾ ಶಿಕ್ಷಣ ದೀವಿಗೆ ಬೆಳಗುವಲ್ಲಿ ಶಿಕ್ಷಕರ ಪಾತ್ರ ಹಿರಿದು

05:42 PM Mar 26, 2018 | Team Udayavani |

ಕಲಬುರಗಿ: ಮಹಿಳೆಯರ ಶಿಕ್ಷಣ ದೀವಿಗೆ ಬೆಳಗುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್‌ ಪ್ರೇಮಜಿ ಫೌಂಡೇಶನ್‌ ವತಿಯಿಂದ ನಗರದ ಎನ್‌ವಿಎಂ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ದೇಶದಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಕಾಲದಿಂದಲೂ ಹೋರಾಟ ನಡೆಯುತ್ತಿದೆ. ಇಂದು ಆಕೆ ಹಚ್ಚಿದ ಶಿಕ್ಷಣದ ದೀವಿಗೆಯನ್ನು ಶಿಕ್ಷಕರು ಮುಂದಕ್ಕೆ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಅಜೀಂ ಪ್ರೇಮಜಿ ಫೌಂಡೇಶನ್‌ನ ಜಿಲ್ಲಾ ಮುಖ್ಯಸ್ಥ ರುದ್ರೇಶ ಎಸ್‌. ಮಾತನಾಡಿ, ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಮಹಿಳೆಗೆ ಸಮಾನತೆ ನೀಡುತ್ತಿದ್ದ ಕಾಲದಲ್ಲಿ ದೇಶದ ಸಂವಿಧಾನ ಮಹಿಳೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಕ್ಕುಗಳಲ್ಲಿ ಸಮಾನ ಅವಕಾಶ ಕಲ್ಪಿಸಿದ್ದು ನಮ್ಮ ದೇಶದ ಭವಿಷ್ಯದ ಕುರಿತು ಸಂವಿಧಾನ ಕತೃಗಳು ಹೊಂದಿದ್ದ ದೂರದೃಷ್ಟಿ ಬಿಂಬಿಸುತ್ತದೆ ಎಂದರು.

ನಂತರದ ತಲೆಮಾರಾದ ನಾವು ನಮ್ಮ ಸಮಾಜದಲ್ಲಿ ಬೇರೂರಿರುವ ಸಾಮಾಜಿಕ ಅಸಮಾನತೆಗಳನ್ನು ಕಿತ್ತೂಗೆಯುವ ಅದರಲ್ಲೂ ಲಿಂಗಾಧಾರಿತ ಅಸಮಾನತೆ ನಿರ್ಮೂಲನೆ ಮಾಡುವ ಜವಾಬ್ದಾರಿಗೆ ಹೆಗಲನ್ನು ಕೊಡಬೇಕಿದೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಭಾರತದಲ್ಲಿ ಶಿಕ್ಷಕರು ಗಣನೀಯ ಪ್ರಮಾಣದಲ್ಲಿ ದುಡಿಯುತ್ತಿದ್ದು ಅದರ ವೇಗ ಇನ್ನಷ್ಟು ಹೆಚ್ಚಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಯಟ್‌ ಉಪನ್ಯಾಸಕಿ ಶಿಬಾರು ಮಾತನಾಡಿ, ಮಹಿಳೆ ಮತ್ತು ಶಿಕ್ಷಣ ಎನ್ನುವುದು ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿರುವ ಅಂಶಗಳನ್ನು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ರೂಢಿ ಮಾತು ಇದನ್ನು ನಿರೂಪಿಸುತ್ತದೆ. ಮಹಿಳಾ ಸಮಾನತೆಯ ಪ್ರಶ್ನೆಯನ್ನು ನಾವು ನಮ್ಮ ಮನೆಗಳಿಂದಲೇ ಆರಂಭಿಸಬೇಕಿದೆ ಎಂದರು.

Advertisement

200ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಅಜೀಂ ಪ್ರೇಂಜಿ ಫೌಂಡೇಶನ್‌ ಸದಸ್ಯರು ಹಾಜರಿದ್ದರು. ಸರ್ಕಾರಿ ಶಾಲೆ ಶಿಕ್ಷಕಿ ಗಾಯತ್ರಿ ನಿರೂಪಿಸಿದರು. ವಿಜಯಲಕ್ಮೀ ಸ್ವಾಗತಿಸಿದರು, ಸಹ ಶಿಕ್ಷಕಿ ಅಮೀನ ರೂಹಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next