Advertisement

ಭೂಕಂಪನದ ಹಿಂದೆ ಬೋರ್‌ವೆಲ್‌ ಪಾತ್ರ?

12:28 AM Jul 03, 2022 | Team Udayavani |

ಪುತ್ತೂರು: ಭೂಕಂಪನದ ಹಿಂದೆ ಕೊಳವೆಬಾವಿಗಳ ಪಾತ್ರ ಇರುವ ಬಗ್ಗೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಲಿದೆ. ಸಾರ್ವಜನಿಕರು ಕೂಡ ಕೊಳವೆ ಬಾವಿ ಕೊರೆಯುವ ಸಂದರ್ಭ ಅದರ ಅನಿವಾರ್ಯತೆಯ ಬಗ್ಗೆ ಮೊದಲು ಮನವರಿಕೆ ಮಾಡಿಕೊಳ್ಳಬೇಕು ಎಂದು ಸಚಿವ ಎಸ್‌. ಅಂಗಾರ ಹೇಳಿದ್ದಾರೆ.

Advertisement

ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೊದಲೆಲ್ಲ ನೂರಿನ್ನೂರು ಅಡಿಯಷ್ಟು ಅಳಕ್ಕೆ ಕೊಳವೆ ಬಾವಿ ತೋಡುತ್ತಿದ್ದರು. ಈಗ ಸಾವಿರ ಅಡಿಯವರೆಗೂ ಹೋಗುತ್ತದೆ. 80 ಅಡಿಗಿಂತ ಆಳಕ್ಕೆ ಹೋದರೆ ಅಲ್ಲಿ ಆಮ್ಲಜನಕವಿರುವುದಿಲ್ಲ. ಅಂಥದ್ದರಲ್ಲಿ ಸಾವಿರ ಅಡಿಯಾಳದ ಸ್ಥಿತಿ ಹೇಗಿರಬೇಡ. ಈಗೀಗ ಕೊಳವೆ ಬಾವಿ ಕೊರೆಯುವ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ. ನದಿಯ ಪಕ್ಕದಲ್ಲೂ ಬೋರ್‌ವೆಲ್‌ ಕೊರೆಯುತ್ತಾರೆ. ಅನಿವಾರ್ಯವಾದರೆ ಕೊರೆಸುವುದು ತಪ್ಪಲ್ಲ. ಅಗತ್ಯವಿಲ್ಲದಿದ್ದರೂ ಕೊರೆಯಬೇಕೇ ಎಂಬ ಬಗ್ಗೆ ಯೋಚನೆ ಮಾಡಬೇಕು ಎಂದು ಸಲಹೆ ನೀಡಿದರು.

ಭೂಕಂಪದ ಬಗ್ಗೆ ಕೇಂದ್ರಕ್ಕೆ ವರದಿ
ಸುಳ್ಯ ತಾಲೂಕು ಮತ್ತು ಮಡಿಕೇರಿ ತಾಲೂಕಿನ ಹಲವೆಡೆ ಸಂಭವಿಸಿರುವ ಭೂಕಂಪನಗಳ ಬಗ್ಗೆ ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ಅಧ್ಯಯನ ನಡೆಸಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಅದರ ಆಧಾರದಲ್ಲಿ ಆಳವಾದ ಅಧ್ಯಯನ ನಡೆಯಲಿದ್ದು, ಭವಿಷ್ಯದ ಬಗ್ಗೆ ಯೋಜನೆ ರೂಪಿಸಲು ಇದು ಸಹಕಾರಿಯಾಗಲಿದೆ ಎಂದರು.

ಅಪಾಯ ಸಾಧ್ಯತೆ ಇಲ್ಲ
ವಿಜ್ಞಾನಿಗಳ ಪ್ರಕಾರ ಸುಳ್ಯ, ಕೊಡಗು ಭಾಗದಲ್ಲಿ ಸಂಭವಿಸಿರುವ ಕಂಪನಗಳು ಅಪಾಯಕಾರಿಯಲ್ಲ. ಇನ್ನಷ್ಟು ತೀವ್ರವಾದ ಕಂಪನ ಸಂಭವಿಸುವ ಬಗ್ಗೆ ಯಾವುದೇ ಸೂಚನೆ ಇಲ್ಲ. ಜನ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಈ ಕಂಪನಗಳ ಬಗ್ಗೆ ಸರಕಾರ ತೀವ್ರ ನಿಗಾ ಇರಿಸಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next