Advertisement

ಅರಮನೆಯಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನ

01:42 PM Oct 16, 2021 | Team Udayavani |

ಮೈಸೂರು: ವಿಜಯದಶಮಿ ಅಂಗವಾಗಿ ಅರಮನೆ ಯೊಳಗೆ ಮುಂಜಾನೆ 4.40ರಿಂದ 10.30ರವರೆಗೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ಮುಂಜಾನೆ ನಡೆದ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು, 5.45ರ ನಂತರ ಪಟ್ಟದ ಆನೆ, ಕುದುರೆ, ಒಂಟೆ, ಹಸುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ 6.13 ರಿಂದ 6.32ರವರೆಗೆ ವಿವಿಧ ಪೂಜಾ ಕೈಂಕರ್ಯದಲ್ಲಿ ತೊಡಗಿದರು.

Advertisement

ಬಳಿಕ ಅರಮನೆಯ ಚಾಮುಂಡಿ ದೇವಿಯ ವಿಗ್ರಹವನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಯಿತು. ನಂತರ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಿ 7.20 ರಿಂದ 7.40ರವರೆಗೆ ವಿಜಯ ಯಾತ್ರೆ ಆರಂಭವಾಯಿತು.

ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್‌ ಕುಳಿತು ವಿಜಯಯಾತ್ರೆ ಕೈಗೊಂಡು ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನೆರವೇರಿಸಿದರು. ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಪೂಜೆ ಸಲ್ಲಿಸಿದರು.

ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್‌ ಆಗಿ ಕಂಕಣ ವಿಸರ್ಜನೆ ಮಾಡುವ ಮೂಲಕ ಜಂಬೂ ಸವಾರಿಯ ಧಾರ್ಮಿಕ ಕಾರ್ಯ ಸಂಪನ್ನಗೊಂಡವು. ಈ ನಡುವೆ ಜೋಡಿಪಾದರು, ಹೊಗಳುಭಟ್ಟರು ಬಹುಪಾರಕ್‌ ಘೋಷಣೆ ಕೂಗುತ್ತಾ, ದೇವಾಲಯ ಆವರಣದಿಂದ ಯದುವೀರ್‌ ಅವರನ್ನು ಹೊರಗೆ ಕರೆತಂದು ಗಮನ ಸೆಳೆದರು. ಪೊಲೀಸ್‌ ಬ್ಯಾಂಡ್‌ ತಂಡ ಮೈಸೂರು ರಾಜಮನೆತನದ ನಾಡಗೀತೆಯಾದ “ಕಾಯೋ ಶ್ರೀ ಗೌರಿ’ ಗೀತೆ ನುಡಿಸಿದಾಗ ಪಟ್ಟದ ಕತ್ತಿಗೆ ಗೌರವ ಸಲ್ಲಿಸಿದ್ದು ವಿಶೇಷ.

ದರ್ಬಾರ್‌ ಬಳಿಕ ಸಿಂಹಾಸನದಿಂದ ಸಿಂಹ ವಿಸರ್ಜನೆ

Advertisement

ಸಂಜೆ 7ಕ್ಕೆ ಖಾಸಗಿ ದರ್ಬಾರ್‌ ನಡೆದ ಬಳಿಕ ದರ್ಬಾರ್‌ ಹಾಲ್‌ನಲ್ಲಿ ಸಿಂಹಾಸನದಿಂದ ಸಿಂಹದ ತಲೆಯನ್ನು ವಿಸರ್ಜಿಸಲಾಯಿತು. ದೇವರ ಮನೆ ಯದುವೀರ್‌ ಕಂಕಣ ವಿಸರ್ಜಿಸಿದರೆ, ವಾಣಿ ವಿಲಾಸ ದೇವರ ಅರಮನೆ ಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್‌ ಕಂಕಣ ವಿಸರ್ಜಿಸಿದರು.

ಅರಮನೆಯಲ್ಲಿ ನಡೆದ ಆಯುಧಪೂಜೆ ಕೈಂಕರ್ಯವನ್ನು ಯದುವೀರ್‌ ಪುತ್ರ ಆದ್ಯವೀರ್‌ ಕಣ್ತುಂಬಿಕೊಂಡರು. ಯದುವೀರ್‌ ಅವರು ಅರಮನೆಯ ಪಟ್ಟದ ಹಸು, ಕುದುರೆ, ಆನೆ, ಕಾರು ಮೊದಲಾದವುಗಳಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿದ್ದಾಗ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌, ಪತ್ನಿ ತ್ರಿಷಿಕಾಕುಮಾರಿ ಅವರು ಪುತ್ರ ಆದ್ಯವೀರ್‌ನ ಜತೆ ವೀಕ್ಷಿಸಿದರು.

ದಸರಾ ದೀಪಾಲಂಕಾರ 9 ದಿನ ವಿಸ್ತರಣೆ: ಸಿಎಂ

ಮೈಸೂರು: ದಸರಾ ವಿದ್ಯುತ್‌ ದೀಪಾಲಂಕಾರವನ್ನು 9 ದಿನಗಳವರೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ದಸರಾ ಮಹೋತ್ಸವದ ಜಂಬೂ ಸವಾರಿಗೆ ಚಾಲನೆ ನೀಡಿವ ಸಲುವಾಗಿ ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಸುತ್ತೂರು ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾಡಿನ ವಿವಿಧ ಕಡೆಗಳಿಂದ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜನಪ್ರತಿನಿಧಿಗಳು ಮತ್ತು ಜನತೆಯ ಬೇಡಿಕೆಯ ಮೇರೆಗೆ ವಿದ್ಯುತ್‌ ದೀಪಾಲಂಕಾರವನ್ನು ವಿಸ್ತರಿಸುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರನ್ನು ಕುಟುಂಬ ಸಮೇತ ಭೇಟಿ ಮಾಡಿ ಆಶೀರ್ವಾದ ಪಡೆದರು.

ಅರಮನೆಯಲ್ಲಿ ಆಯುಧ ಪೂಜೆ-

ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಗುರುವಾರ ಮುಂಜಾನೆ ರಾಜಮನೆತನದ ಪೂರ್ವಿಕರು ಬಳಸುತ್ತಿದ್ದ ಕತ್ತಿ, ಗುರಾಣಿ, ಈಟಿ, ಪಟ್ಟದ ಆನೆ, ಕುದುರೆ, ಹಸು, ಒಂಟೆ, ಕತ್ತಿ, ಪಲ್ಲಕ್ಕಿ, ವಾಹನ ಸೇರಿದಂತೆ ರಾಜರ ಎಲ್ಲಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್‌ ಪೂಜೆ ಸಲ್ಲಿಸಿದರು. ಧನುರ್‌ ಲಗ್ನದಲ್ಲಿ ಕಲ್ಯಾಣ ಮಂಟಪದ ಪ್ರಾಂಗಣದಲ್ಲಿ ಯದುವೀರ್‌ ಸಂಪ್ರದಾಯದಂತೆ ಆಯುಧಗಳಿಗೆ ಪೂಜೆ ನೆರವೇರಿಸಿದರು. ಪಟ್ಟದ ಕತ್ತಿಗೆ ಪೂಜೆ ನೆರವೇರಿಸಿದ ಬಳಿಕ ಕಲ್ಯಾಣ ಮಂಟಪದ ಪ್ರಾಂಗಣದಲ್ಲಿ ಚಿನ್ನದ ಅಡ್ಡ ಪಲ್ಲಕ್ಕಿ, ವಾಹನಗಳಿಗೆ ಪೂಜೆ ಸಲ್ಲಿಸಿ, ಪಟ್ಟದ ಹಸು, ಕುದುರೆ, ಒಂಟೆಗೆ ಪೂಜೆ ನೆರವೇರಿಸಲಾಯಿತು. ಕೋವಿಡ್‌19 ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next