ಶಿಕಾಗೋ: ಅಮೆರಿಕ ಅಧ್ಯಕ್ಷರಾಗಿ ಎಂಟು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಬರಾಕ್ ಒಬಾಮಾ, ಬುಧವಾರ ಭಾವನಾತ್ಮಕವಾಗಿ ತಮ್ಮ ಕೊನೆಯ ಭಾಷಣ ಮಾಡಿದ್ದಾರೆ. ಜನಾಂಗೀಯತೆ, ಅಸಮಾನತೆ ಹಾಗೂ ತಾರತಮ್ಯದಿಂದ ಅಮೆರಿಕದ ಪ್ರಜಾಸತ್ತೆಗೆ ಅಪಾಯವಿದೆ ಎನ್ನುವ ಮೂಲಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಟಾಂಗ್ ನೀಡಿದ್ದಾರೆ.
“2008ರಲ್ಲಿ ನಾನು ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾದಾಗ, ಅಮೆರಿಕದಲ್ಲಿ ಇನ್ನು ಮುಂದೆ ಜನಾಂಗೀಯವಾದ ಕೊನೆಗೊಳ್ಳುತ್ತದೆ ಎಂದು ಎಣಿಸಲಾಗಿತ್ತು. ಅದು ಒಳ್ಳೆಯ ಉದ್ದೇಶದ್ದೇ ಆದರೂ ವಾಸ್ತವಕ್ಕೆ ಇಳಿಯಲಿಲ್ಲ’ ಎಂದು ಅಮೆರಿಕ ಕಂಡ ಮೊದಲ ಕಪ್ಪು ವರ್ಣೀಯ ಅಧ್ಯಕ್ಷರೂ ಆಗಿರುವ ಅವರು ಬೇಸರ ತೋಡಿಕೊಂಡಿದ್ದಾರೆ.
ತಮ್ಮ ಮೂಲ ಸ್ಥಳ ಶಿಕಾಗೋದಲ್ಲಿ 20 ಸಾವಿರ ಬೆಂಬಲಿಗ ರನ್ನು ಉದ್ದೇಶಿಸಿ ಮಾತನಾಡಿದ ಅವರು, “ಬದಲಾವಣೆ ತರಲು ನನ್ನ ಸಾಮರ್ಥ್ಯದ ಮೇಲೆ ನೀವು ನಂಬಿಕೆ ಇಡಬೇಕಿಲ್ಲ. ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಇಡಿ’ ಎಂದು ಹುರಿದುಂಬಿಸಿದರು. ನಮ್ಮ ಸಂವಿಧಾನ ಹಾಗೂ ನಮ್ಮ ತತ್ವಗಳಿಗೆ ನಾವು ವಂಚನೆ ಮಾಡದ ಹೊರತು ಅಮೆರಿಕವನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ. ರಷ್ಯಾ ಅಥವಾ ಚೀನಾದಂತಹ ನಮ್ಮ ಪ್ರತಿಸ್ಪರ್ಧಿಗಳು ವಿಶ್ವಾದ್ಯಂತ ನಮಗಿರುವ ಪ್ರಭಾವವನ್ನು ಹೊಂದಿಲ್ಲ ಎಂದು ಹೇಳಿದರು.
ನಾನು ಅಧಿಕಾರ ವಹಿಸಿಕೊಂಡ ಎಂಟು ವರ್ಷಗಳ ಹಿಂದಿನ ಅವಧಿಗೆ ಹೋಲಿಸಿದರೆ ಪ್ರತಿ ವಿಷಯದಲ್ಲೂ ಅಮೆರಿಕ ಉತ್ತಮ ಹಾಗೂ ಬಲಿಷ್ಠವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ತಮ್ಮ ಪತ್ನಿ ಮಿಶೆಲ್ ಅವರಿಗೆ ಧನ್ಯವಾದ ಸಲ್ಲಿಸಿದ ಅವರು, “ನನ್ನ ರಾಜಕೀಯ ಕನಸಿಗಾಗಿ ಆಕೆ ತ್ಯಾಗ ಮಾಡಿದ್ದಾಳೆ. 25 ವರ್ಷಗಳ ಕಾಲ ನನ್ನ ಪತ್ನಿ ಹಾಗೂ ನನ್ನ ಮಕ್ಕಳ ತಾಯಿಯಾಗಿಯಷ್ಟೇ ಇರಲಿಲ್ಲ. ನನ್ನ ಅತ್ಯುತ್ತಮ ಗೆಳತಿಯಾಗಿದ್ದಳು’ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಸಭಿಕರು ಎದ್ದು ನಿಂತು ಮಿಶೆಲ್ ಅವರಿಗೆ ಗೌರವ ಸಲ್ಲಿಸಿದರು.
ಒಬಾಮಾ ಅವರ ಅಧಿಕಾರಾವಧಿ ಜ.20ಕ್ಕೆ ಅಂತ್ಯವಾಗ ಲಿದ್ದು, ಅಂದೇ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.