ಕೊಳ್ಳೇಗಾಲ: ತಾಲೂಕಿನ ಹರಳೆ ಗ್ರಾಮದಲ್ಲಿ ಶರಣ ಹರಳಯ್ಯ ಗದ್ದುಗೆ ಹೊಂದಿರುವ ಪವಿತ್ರವಾದ ಗ್ರಾಮದಲ್ಲಿ ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರವೊಂದನ್ನು ತೆರೆಯಲಾಗಿದ್ದು, ಕೇಂದ್ರದ ಮುಂಭಾಗವೇ ಸೆಸ್ಕ್ ನಿಗಮದ ವತಿಯಿಂದ ವಿದ್ಯುತ್ ಪರಿಕರ ಜೋಡಣೆ ಮಾಡಲಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಬೇರೆಡೆಗೆ ಸ್ಥಳಾಂತರಿಸಿ ಪುಟ್ಟ ಮಕ್ಕಳಿಗಾಗುವ ಅಪಾಯ ತಪ್ಪಿಸಬೇಕಿದೆ.
ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ನೋಂದಣಿಗೊಂಡಿರುವ 22 ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಉಚಿತ ಶಿಕ್ಷಣ ಮತ್ತು ಇನ್ನಿತರ ಆಹಾರ ಸಾಮಗ್ರಿಗಳನ್ನು ಪಡೆದು ಆಟೋಟವನ್ನು ಆಡುವ ಹಸುಳೆಗಳಿಗೆ ಕೇಂದ್ರದ ಮುಂಭಾಗ ಇರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಆಡಚಣೆ ಉಂಟಾಗುವ ಪರಿಸ್ಥಿತಿ ಎದುರಾಗಿದ್ದು, ಕೂಡಲೇ ಸೆಸ್ಕ್ ನಿಗಮದ ಅಧಿಕಾರಿಗಳು ಇತ್ತ ಗಮನ ಹರಿಸಿ ಅಪಾಯವಾಗುವ ಮುನ್ನವೇ ಟಾನ್ಸ್‌ಫಾರ್ಮರ್ ಅನ್ನು ಬೇರೆಡೆಗೆ ಸ್ಥಳಾಂತರಿಸಿ ಹಸುಳೆಗಳ ರಕ್ಷಣೆಗೆ ಮುಂದಾಗಬೇಕು.
ಸೆಸ್ಕ್ ಅಧಿಕಾರಿಗಳೇ ಜವಾಬ್ದಾರಿ: ಅಂಗನವಾಡಿ ಕೇಂದ್ರದ ಮುಂಭಾಗವೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು, ಮಕ್ಕಳು ಆಟವಾಡುವ ವೇಳೆ ಯಾವುದಾದರೂ ಅಪಾಯ ಏರ್ಪಟ್ಟ ಸಂದರ್ಭದಲ್ಲಿ ಅದರಿಂದ ಉಂಟಾಗುವ ಅನಾವುತಕ್ಕೆ ನಿಗಮದ ಅಧಿಕಾರಿಗಳೇ ಹೊಣೆಗಾರರು ಆಗಬೇಕಾಗುತ್ತದೆ ಎಂದು ಗ್ರಾಮಸ್ಥರ ಎಚ್ಚರಿಸಿದ್ದಾರೆ.
ಅನಾವುತ ಕಟ್ಟಿಟ್ಟ ಬುತ್ತಿ: ಅಂಗನವಾಡಿ ಕೇಂದ್ರದ ಬಳಿ ಅನಾವುತ ಸಂಭವಿಸುವ ಮೊದಲೇ ಅಧಿಕಾರಿಗಳು ವಿದ್ಯುತ್ ಟ್ರಾನ್ಸ್‌ಫಾರ್ಮರನ್ನು ಬದಲಾಯಿಸುವ ಮೂಲಕ ಮುಂದೊಂದು ದಿನ ಸಂಭವಿಸಬಹುದಾದ ಅನಾವುತವನ್ನು ತಪ್ಪಿಸಬೇಕೆಂದು ಗ್ರಾಮದ ಯುವ ಮುಖಂಡ ಗಣೇಶ್ ಒತ್ತಾಯಿಸಿದ್ಧಾರೆ.
ಅಧಿಕಾರಿಗಳಿಗೆ ಮನವಿ: ಕೇಂದ್ರದ ಮುಂಭಾಗ ವಿದ್ಯುತ್ ನಿಗಮದ ಅಧಿಕಾರಿಗಳು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಿದ್ದು, ಇದರಿಂದ ಮಕ್ಕಳಿಗೆ ಅಪಾಯ ಎದುರಾಗುವುದರಿಂದ ಕೂಡಲೇ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಅಭಿವೃದ್ಧಿ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ತೆರುವುಗೊಳಿಸುವಂತೆ ಮನವಿ ಮಾಡಲಾಗುವುದೆಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಂದ್ರಮ್ಮ
“ಉದಯವಾಣಿ’ಗೆ ತಿಳಿಸಿದ್ದಾರೆ.
ಹರಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಂಗನವಾಡಿ ಕೇಂದ್ರದ ಮುಂಭಾಗ ಅಳವಡಿಸಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಾಯಿಸುವಂತೆ ದೂರು ನೀಡಿದ ಪಕ್ಷದಲ್ಲಿ ಕೂಡಲೇ ಸ್ಥಳಾಂತರ ಮಾಡಲಾಗುವುದು.
-ಲಿಂಗರಾಜು, ಸೆಸ್ಕ್ ನಿಗಮದ ಎಇಇ
* ಡಿ.ನಟರಾಜು