ಸಾಗರ: ಸಾಮಾನ್ಯವಾಗಿ ಮಕ್ಕಳಲ್ಲಿ ನಾನು, ನನ್ನಿಂದ ಎಂಬ ಪ್ರಜ್ಞೆ ಇರುವುದಿಲ್ಲ. ಆದರೆ ರಿಯಾಲಿಟಿ ಶೋಗಳು ಅವರಲ್ಲಿ ಈ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದೆ ಎಂದು ಗಾಯಕಿ, ರಂಗನಟಿ ಎಂ.ಡಿ. ಪಲ್ಲವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಎಸ್‌ಪಿಎಂ ರಸ್ತೆಯ ಬಾಪಟ್ ನಿವಾಸದಲ್ಲಿನ ಚರಕ ಅಂಗಡಿಯಲ್ಲಿ ಚರಕ ಹಾಗೂ ಕವಿಕಾವ್ಯ ಟ್ರಸ್ಟ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಕುಶಲೆ’ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ನಡೆದ ಹಾಡು ಹರಟೆ ಸಂವಾದದಲ್ಲಿ ಅವರು ಮಾತನಾಡಿದರು.
ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರು ಮಕ್ಕಳನ್ನು ಉದ್ದೇಶಿಸಿ ಪದೇ ಪದೇ ನೀನು ಹೀಗೆ ಮಾಡಿದೆ, ನೀನು ಈ ರೀತಿ ನಡೆದುಕೊಂಡೆ ಎಂದು ಹೇಳುವುದರಿಂದ ಮಕ್ಕಳಲ್ಲಿ ಸ್ವಪ್ರಜ್ಞೆ ಅಗತ್ಯಕ್ಕಿಂತ ಹೆಚ್ಚಾಗಿ ಬೆಳೆಯುತ್ತಿದೆ. ಇವುಗಳಲ್ಲಿ ಭಾಗವಹಿಸುವ ಮಕ್ಕಳು ಸ್ಪರ್ಧಾರ್ಥಿಗಳಾಗುತ್ತಿದ್ದಾರೆಯೇ ಹೊರತು ಕಲಾವಿದರಾಗುತ್ತಿಲ್ಲ ಎಂದರು.
ಗ್ರಾಮೀಣ ಕರಕುಶಲ ಕಲೆ, ನೇಕಾರಿಕೆ ಮುಂತಾದವುಗಳ ಸಮಸ್ಯೆಗಳ ಬಗ್ಗೆ ಪ್ರಸನ್ನ ಅವರಿಂದಾಗಿ ನನ್ನಂತವರ ಅರಿವಿಗೆ ಬಂದಿದೆ. ಜಿಎಸ್‌ಟಿ ಸಮಸ್ಯೆ ಸೇರಿದಂತೆ ಗ್ರಾಮೀಣ ಕರಕುಶಲ ಕಲೆಗಳ ಸಮಸ್ಯೆ ಮತ್ತು ಸವಾಲುಗಳ ಸಂದರ್ಭ ಪ್ರಸನ್ನ ಸರ್ಕಾರವನ್ನು ಎಚ್ಚರಿಸಿದ್ದಾರೆ. ಪ್ರಸನ್ನರ ಚಳುವಳಿಯ ಪ್ರಭಾವದಿಂದಾಗಿ ನಾನೂ ಸಹ ಕೈ ಜೋಡಿಸಲು ಸಾಧ್ಯವಾಗಿದೆ. ಈಗ ಇಂತಹ ಪ್ರಶಸ್ತಿ ಪ್ರಸನ್ನ ಮತ್ತು ಚರಕದ ಮೂಲಕ ನನಗೆ ದೊರಕುತ್ತಿರುವುದು ಸಂತೋಷದ ಸಂಗತಿ ಎಂದರು.
ಕವಿಕಾವ್ಯ ಟ್ರಸ್ಟ್‌ನ ಕಾರ‍್ಯದರ್ಶಿ ಜಿ.ಇಂದುಕುಮಾರ್ ಮಾತನಾಡಿ, ಗ್ರಾಮಾಂತರದ ಹೆಣ್ಣುಮಕ್ಕಳ ಸಂಸ್ಥೆಯಾಗಿರುವ ಕವಿಕಾವ್ಯ ಟ್ರಸ್ಟ್‌ನ ವತಿಯಿಂದ ಕುಶಲೆ ಪ್ರಶಸ್ತಿ ನೀಡುವ ಕಾರ‍್ಯವನ್ನು 2021-22ನೇ ಸಾಲಿನಲ್ಲಿ ಆರಂಭಿಸಲಾಗಿದೆ. 25 ಸಾವಿರ ರೂಪಾಯಿ ನಗದು, ಫಲಕ ಒಳಗೊಂಡಿರುವ ಈ ಪ್ರಶಸ್ತಿಗೆ ಕುಶಲೆ ಎಂದು ಹೆಸರಿಡಲಾಗಿದೆ. ಮೊದಲ ಪ್ರಶಸ್ತಿಯನ್ನು ಕನ್ನಡದ ಹೆಸರಾಂತ ನಟಿ ಹಾಗೂ ಗಾಯಕಿ ಎಂ.ಡಿ. ಪಲ್ಲವಿಯವರಿಗೆ ಸಂಸ್ಥೆ ನೀಡುತ್ತಿರುವುದು ಹೆಮ್ಮೆ ತಂದಿದೆ. ಸಂಗೀತ, ನಾಟಕ ಕ್ಷೇತ್ರಕ್ಕೆ ಪಲ್ಲವಿಯವರು ನೀಡಿದ ಕೊಡುಗೆ ಹಾಗೂ ಅವರ ಸಹಕಾರಿ ಮನೋಭಾವವನ್ನು ಪರಿಗಣಿಸಿ ಕುಶಲೆ ಪ್ರಶಸ್ತಿ ನೀಡಲಾಗಿದೆ ಎಂದರು.
ಹಾಡು ಹರಟೆ ಕಾರ‍್ಯಕ್ರಮವನ್ನು ಎಂ.ವಿ.ಪ್ರತಿಭಾ ನಿರ್ವಹಿಸಿದರು. ಚರಕ ಸಂಸ್ಥೆಯ ಮಹಾಲಕ್ಷ್ಮಿ, ರಮೇಶ್, ಪೀಟರ್, ಜೀವನ್ಮುಖಿ ಸಂಸ್ಥೆಯ ನಂದಾ ಗೊಜನೂರು, ಗೀತಾ ಶ್ರೀನಾಥ್, ರೋಹಿಣಿ ಶರ್ಮಾ, ಮಂಜುಳಾ, ಚೈತ್ರ ಮುಂತಾದವರು ಹಾಜರಿದ್ದರು.