Advertisement

ದಂಡ ತಪ್ಪಿಸಿಕೊಳ್ಳಲು ನಂ.ಪ್ಲೇಟ್‌ಗೆ ಸ್ಟಿಕ್ಕರ್‌ ಹಾಕಿದ್ದ ಸವಾರ ಕಡೆಗೂ ಸಿಕ್ಕಿಬಿದ್ದ

10:20 AM Nov 26, 2023 | Team Udayavani |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನದ ನೋಂದಣಿ ಫಲಕಕ್ಕೆ ಸ್ಟಿಕ್ಕರ್‌ ಅಂಟಿಸಿಕೊಂಡು ಓಡಾಡುತ್ತಿದ್ದ ಖತರ್ನಾಕ್‌ ಸವಾರನನ್ನು ಪತ್ತೆ ಹಚ್ಚಿ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

ನ್ಯೂತಿಪ್ಪಸಂದ್ರದ ಮಲ್ಲೇಶಪಾಳ್ಯ ನಿವಾಸಿ ಎಂ. ಚನ್ನಬಸವ (22) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು 3 ತಿಂಗಳ ಹಿಂದೆ ದ್ವಿಚಕ್ರ ವಾಹನ ಖರೀದಿಸಿದ್ದಾನೆ. ಸಂಚಾರ ನಿಯಮ ಉಲ್ಲಂ ಸುವ ವಾಹನಗಳಿಗೆ ದಂಡ ವಿಧಿಸುವ ಸಲುವಾಗಿ ನಗರ ಸಂಚಾರ ಪೊಲೀಸರು ಪ್ರಮುಖ ಜಂಕ್ಷನ್‌ಗಳು, ಸಿಗ್ನಲ್‌ಗ‌ಳು, ವೃತ್ತಗಳು ಸೇರಿದಂತೆ ನಗರದ ಹಲವೆಡೆ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಈ ಕ್ಯಾಮೆರಾಗಳ ಕಣ್ತಪ್ಪಿಸಿ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆರೋಪಿ ಚನ್ನಬಸವ ತನ್ನ ದ್ವಿಚಕ್ರ ವಾಹನದ ನೋಂದಣಿ ಫಲಕಕ್ಕೆ ಪ್ಲಾಸ್ಟರ್‌ ಅಂಟಿಸಿಕೊಂಡು ಓಡಾಡುತ್ತಿದ್ದ. ಇತ್ತೀಚೆಗೆ ಮಲ್ಲೇಶಪಾಳ್ಯ ಬಸ್‌ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಚನ್ನಬಸವನ ದೋಷಪೂರಿತ ನೋಂದಣಿ ಫಲಕದ ಫೋಟೋ ಕ್ಲಿಕ್ಕಿಸಿ ನಗರದ ಸಂಚಾರ ಪೊಲೀಸರ “ಪಬ್ಲಿಕ್‌ ಐ’ ಅಧಿಕೃತ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಜೀವನಭೀಮಾನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಬಳಿಕ ಮಲ್ಲೇಶ್‌ ಪಾಳ್ಯ ಬಸ್‌ ನಿಲ್ದಾಣ ಹಾಗೂ ಸುತ್ತಮುತ್ತಲ ರಸ್ತೆಗಳ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯ ದ್ವಿಚಕ್ರ ವಾಹನದ ಮೇಲೆ ನಿಗಾವಹಿಸಿದ್ದರು. ನ.24ರಂದು ಮಲ್ಲೇಶ್‌ಪಾಳ್ಯದ ಮುಖ್ಯರಸ್ತೆಯಲ್ಲಿ ಆರೋಪಿ ದ್ವಿಚಕ್ರ ವಾಹನ ಸಹಿತ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ವಶಕ್ಕೆ ಪಡೆದು ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next