Advertisement

ಸವಾರಿಯ ಸುಖಕಷ್ಟ

06:00 AM Nov 26, 2017 | Harsha Rao |

ಸವಾರಿಗಳಲ್ಲಿ ಅನೇಕ ವಿಧಗಳಿವೆ. ಬೈಕ್‌ ಸವಾರಿ, ಸೈಕಲ್‌ ಸವಾರಿ,  ಕುದುರೆ ಸವಾರಿ, ಒಂಟೆ ಸವಾರಿ, ಆನೆ ಸವಾರಿ- ಹೀಗೆ ನಾನಾ ರೀತಿಯ ಸವಾರಿಗಳನ್ನು ಮಾಡಿರುತ್ತೇವೆ ಹಾಗೂ ನೋಡಿರುತ್ತೇವೆ. ಒಂದೊಂದು ಸವಾರಿಯೂ ಒಂದೊಂದು ಅನುಭವ ನೀಡುತ್ತದೆ. ಭಯ, ಆತಂಕ, ಖುಷಿ, ಉÇÉಾಸ, ರೋಮಾಂಚನ, ಹೆಮ್ಮೆ, ಜಂಭ ಒಂದೇ, ಎರಡೇ ಸವಾರಿಯ ಅನುಭವದ ಭಾವನೆಗಳು. 

Advertisement

ಈ ಸವಾರಿ ಬಗ್ಗೆ ಹೇಳುವಾಗ ನನಗೆ ಬಾಲ್ಯದ ಒಂದು ಸವಾರಿ ನೆನಪಿಗೆ ಬರುತ್ತದೆ. ಸಾಮಾನ್ಯವಾಗಿ ಚಿಕ್ಕವರಿರುವಾಗ ಅಪ್ಪನ ಬೆನ್ನ ಮೇಲೆ ಅಥವಾ ತಾತ, ಮಾಮ, ಚಿಕ್ಕಪ್ಪಂದಿರ ಬೆನ್ನಮೇಲೆ ಸವಾರಿ ಮಾಡಿರುವುದು ಸಹಜ. ಆದರೆ, ನಮಗೆ ಅಂಥ ಭಾಗ್ಯವಿರಲಿಲ್ಲ. ಆದರೇನೂ ನಾವು ಬೇಸರಪಟ್ಟುಕೊಂಡಿರಲಿಲ್ಲ. ಮನೆಯಲ್ಲಿ  ನಾನು ಸೇರಿದಂತೆ ಮೂವರು ಸಹೋದರರು ಸೇರಿ ನಾಲ್ಕು ಜನ, ಮನೆ ತುಂಬ ತುಂಬಿ ಹೋಗಿ¨ªೆವು. ಹಾಗಾಗಿ, ನಮ್ಮನ್ನು ಬೆನ್ನಮೇಲೆ ಸವಾರಿ ಮಾಡಿ ಆನಂದ ಪಡುವಷ್ಟು ಹುಚ್ಚು ಪ್ರೀತಿ ನಮ್ಮ ಅಪ್ಪನಿಗೆ ಇರಲಿಲ್ಲ. ಹುಚ್ಚು ಪ್ರೀತಿ ತೋರಿಸಬಹುದಾಗಿದ್ದ ತಾತ ಈ ಭೂಮಿ ಮೇಲೆ ಬದುಕಿರಲಿಲ್ಲ. ಇನ್ನು ಚಿಕ್ಕಪ್ಪ, ದೊಡ್ಡಪ್ಪ, ಮಾಮ ಊರಿನಲ್ಲಿದ್ದರು. ಹಾಗಾಗಿ, ಸವಾರಿಯ ಅದೃಷ್ಟ ನಮಗಿರಲಿಲ್ಲ. ಆದರೇನು, ನಾವು ಯಾವ ರಾಜಕುವರರಿಗೂ ಕಡಿಮೆ ಇಲ್ಲದಂತೆ ಎಲ್ಲ ರೀತಿಯ ಸವಾರಿಗಳನ್ನು ಮಾಡಿ ವಿಜೃಂಭಿಸುತ್ತಿ¨ªೆವು. ನಿಲ್ಲಿಸಿರುವ ಬೈಕ್‌ ಮೇಲೆ ಸವಾರಿ, ತೆಂಗಿನ ಗರಿಯ ಮೇಲೆ ಸವಾರಿ, ಅಜ್ಜನ ಕೋಲಿದು ನನ್ನಯ ಕುದುರೆ ಎನ್ನುವಂತೆ ಕೋಲಿನ ಸವಾರಿ, ಬಾಡಿಗೆಗೆ ಸಿಗುವ ಸೈಕಲ್‌ ಸವಾರಿ- ಒಂದೇ ಎರಡೇ ಎಷ್ಟೊಂದು ಸವಾರಿಗಳು. ಒಂದನ್ನಂತೂ ಹೇಳಲೇ ಬೇಕು.   

ಅದೊಂದು ಭಾನುವಾರ ರಜೆಯ ದಿನ, ನಾವು ನಾಲ್ಕು ಜನವೂ ಬೆಳಗಿನ ತಿಂಡಿ ತಿಂದು ಆಡಲು ಆಟದ ಮೈದಾನಕ್ಕೆ ಓಟಕ್ಕಿತ್ತೆವು. ಆ ಆಟದ ಮೈದಾನದಲ್ಲಿ ನಮ್ಮ ಬಿಟ್ಟರೆ ಬೇರೆ ಯಾವ ಮಕ್ಕಳೂ ಬಂದಿರಲಿಲ್ಲ. ನಾವು ನಾಲ್ಕೇ ಜನ, ಏನು ಆಟವಾಡುವುದು ಯೋಚಿಸಿದೆವು. ಸುತ್ತಲೂ ನೋಡಿದೆವು. ಅಲ್ಲಿ ಹಸು, ಎಮ್ಮೆ, ದನ ಮುಂತಾದವು ಮೇಯಲು ಬಂದಿದ್ದವು. ಮೇಯ್ದು ಕೆಳಗೆ ಕುಳಿತು ಮೆಲುಕು ಹಾಕುತ್ತಿದ್ದ ಎಮ್ಮೆಗಳನ್ನು ಕಂಡು ನಮ್ಮ ಕಪಿ ಸೈನ್ಯಕ್ಕೆ ಡಾಕ್ಟರ್‌ ರಾಜಕುಮಾರರವರ ಎಮ್ಮೆ ಹಾಡು ನೆನಪಿಗೆ ಬಂದು ಸ್ಫೂರ್ತಿ ಬಂದು ಬಿಟ್ಟಿತು. ತಕ್ಷಣವೇ ಅವುಗಳ ಬಳಿ ಓಡಿದ ನಾವು, “ಯಾರೇ ಕೂಗಾಡಲಿ ಊರೇ ಹೋರಾಡಲಿ, ಎಮ್ಮೆ ನಿನಗೆ ಸಾಟಿ ಇಲ್ಲ ಅರೆ ಹೊಯ್‌ ಅರೆ ಹೊಯ್‌’ ಅಂತ ಕೋರಸಿನಲ್ಲಿ ಹಾಡಲು ಶುರು ಮಾಡಿದೆವು. ಆದರೆ, ಎಮ್ಮೆ ಮೇಲೆ ಹತ್ತುವ ಧೈರ್ಯ ನಮಗಾರಿಗೂ ಇರಲಿಲ್ಲ.

ಇದ್ದುದರಲ್ಲಿ ನಮ್ಮ ಅಣ್ಣ ಸ್ವಲ್ಪ ಧೈರ್ಯ ಮಾಡಿ ಕುಳಿತಿದ್ದ. ಎಮ್ಮೆ ಮೇಲೆ ಹತ್ತಿ ಅದರ ಬೆನ್ನಮೇಲೆ ಕುಳಿತು ಜೋರಾಗಿ ಕರ್ಕಶ ಸ್ವರದಲ್ಲಿ “ಎಮ್ಮೆ ಹಾಡು’ ಹಾಡತೊಡಗಿದ. ನಾವೂ ಹಿಮ್ಮೇಳ ನೀಡತೊಡಗಿದೆವು. ಅದುವರೆಗೂ ಎಮ್ಮೆ ತನ್ನ ಪಾಡಿಗೆ ತಾನು ಮೆಲುಕು ಹಾಕುತ್ತಿದ್ದದ್ದು, ಅದೇನಾಯಿತೋ ತಟ್ಟನೆ ಎದ್ದು ನಿಂತು ಬಿಟ್ಟಿತು. ನಮ್ಮ ಗಾರ್ದಭ ಗಾಯನ ಎಮ್ಮೆಯನ್ನು ಗಾಬರಿಗೊಳಿಸಿತ್ತು ಅಂತ ಕಾಣುತ್ತದೆ. ಅದು ಎದ್ದ ರಭಸಕ್ಕೆ  ಅದನ್ನು  ನಿರೀಕ್ಷಿಸದೆ ಇದ್ದ ನಮ್ಮ ಅಣ್ಣ  ಕ್ಷಣದೊಳಗೆ ಧರಾಶಾಯಿಯಾಗಿದ್ದ. ಅವನ ಬಾಯಿಂದ ಎಮ್ಮೆ ಹಾಡು ಹೋಗಿ “ಅಯ್ಯೋ ಅಮ್ಮ’ ಅಂತ ಕಿರುಚ ತೊಡಗಿದ. ನಮಗೆ  ಗಾಬರಿಯಾಗಿ ಏಳಿಸಹೋದರೆ ಅವನಿಗೆ ಏಳಲೇ ಆಗುತ್ತಿಲ್ಲ. ಕಷ್ಟಪಟ್ಟು ಮೂರು ಜನ ಸೇರಿ ಎತ್ತಲು ಹೋದರೆ, “”ಅಯ್ಯೋ  ಕೈ ನೋವು, ಮುಟ್ಟ ಬೇಡ” ಅಂತ ಕಿರುಚಾಡಿದ. ಮುಟ್ಟಲು ಬಿಡದೆ  ನೋವು ಅಂತ ಜೋರಾಗಿ ಕೂಗುತ್ತಾ ಇ¨ªಾನೆ. ನಮಗೆ ಹೆದರಿಕೆಯಾಗಿ ಏನು ಮಾಡುವುದು ಎಂದು ತೋಚದೆ ಸುಮ್ಮನೆ ನಿಂತುಬಿಟ್ಟೆವು. ಕೊನೆಗೆ ಮನೆಗೆ ಓಡಿ ಹೋಗಿ ಅಪ್ಪನಿಗೂ ಅಮ್ಮನಿಗೂ ವಿಷಯ ತಿಳಿಸಿದೆವು. ಅವರು ತತ್‌ಕ್ಷಣವೇ ಆತಂಕದಿಂದ ಧಾವಿಸಿ ಬಂದರು. ನಮ್ಮಣ್ಣನ ಕಿರುಚಾಟ ದೂರದವರೆಗೂ ಕೇಳಿಸುತ್ತಿತ್ತು. ಬಂದವರೇ ಕಿರುಚುತ್ತಿದ್ದ ಅಣ್ಣನನ್ನು ನೋಡಿ, ಹತ್ತಿರ ಬಂದು ಅಪ್ಪ ಅವನನ್ನು  ಎತ್ತಿಕೊಂಡು ಅಮ್ಮನತ್ತ ತಿರುಗಿ, “”ಮಕ್ಕಳನ್ನು ಕರೆದುಕೊಂಡು ಮನೆಗೆ ಹೋಗು, ನಾನು ಇವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ” ಅಂತ ಹೇಳಿದಾಗ ನಮಗೆ ಭಯಂಕರ ನಿರಾಸೆ ಆಯಿತು. ನಮ್ಮನ್ನು ಅಮ್ಮನ ಜೊತೆ ಕಳಿಸಿ ಅಣ್ಣನಿಗೆ ಏನಾಗಿದೆ ಅನ್ನುವುದನ್ನು ಡಾಕ್ಟರರಿಂದ ಕೇಳುವ ಸೌಭಾಗ್ಯದಿಂದ ವಂಚಿಸಿದ ಅಪ್ಪನ ಮೇಲೆ ಕೋಪ ಉಕ್ಕಿದರೂ  ತೋರಿಸಿಕೊಳ್ಳದೆ ಅಪ್ಪ ಆಸ್ಪತ್ರೆಗೆ ಅಣ್ಣನನ್ನು  ಕರೆದುಕೊಂಡು ಹೋಗುವುದನ್ನು ನೋಡುತ್ತ ನಿಂತೆವು.    

ಮನೆಯಲ್ಲಿ ಅಮ್ಮ ನಮಗೆ ಹಬ್ಬ ಮಾಡುವ ಸಂದೇಹ ಇದ್ದು, ನಮ್ಮನ್ನು ಕಾಪಾಡುವ ಅಪ್ಪ , ಅಣ್ಣನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದರಿಂದ ನಮಗೆ ಮನೆಗೆ ಹೋಗಲು ಸ್ವಲ್ಪವೂ ಇಷ್ಟವಿರಲಿಲ್ಲ . ಹಾಗಾಗಿ, ನಾವು ಈಗಲೇ ಮನೆಗೆ ಬರಲಾರೆವು, ಅಪ್ಪ ಅಣ್ಣ ಬಂದ ಮೇಲೆ ಬರುವುದಾಗಿ ಹಠ ಹಿಡಿದರೂ ಕೇಳದೆ ಅಮ್ಮ  ನಮ್ಮನ್ನು ದರದರನೆ ಎಳೆದುಕೊಂಡು ಮನೆಯೊಳಗೆ ತಳ್ಳಿದಳು. ಒಳಬಂದವಳೇ ಕೈಗೆ ಸಿಕ್ಕ ಕೋಲಿನಿಂದ ಬಾರಿಸತೊಡಗಿದಳು. “”ರಜೆ ಬಂದರೆ ಸಾಕು, ಕುಣಿಯೋಕೆ ಹೋಗ್ತಿàರಾ, ಮನೆಯಲ್ಲಿ ಕೂತ್ಕೊಂಡು ಓದೊRಳ್ಳೋಕೆ ಆಗಲ್ಲವಾ?  ಕೈಕಾಲು ಮುರ್ಕೊಂಡು ಸಾಯ್ತಿರಾ” ಅಂತ ಚೆನ್ನಾಗಿ ಪೂಜೆ ಮಾಡಿ ನಮ್ಮ ಮೇಲೆ ತನ್ನ ಕೋಪ ತೀರಿಸಿಕೊಂಡಳು. ತಪ್ಪು ನಮ್ಮದಾಗಿದ್ದು ರಕ್ಷಣೆ ಕೊಡುವವರು ಯಾರೂ ಇಲ್ಲದ್ದರಿಂದ ಕೋಲಿನ ಪೆಟ್ಟು ನೋವು ಕೊಡುತ್ತಿದ್ದರೂ ಜೋರಾಗಿ ಅತ್ತರೆ ಮತ್ತಷ್ಟು ಜಾಸ್ತಿ ಒದೆ ಬೀಳುವುದೆಂದು ಅರಿತ ನಾವು ಎಂದಿನ ಶೈಲಿಯಲ್ಲಿ  ಕಿರುಚದೆ, ಕೂಗಾಡದೆ ಮೆಲ್ಲನೆ ಅತ್ತು, “”ತಪ್ಪಾಯ್ತಮ್ಮ, ಇನ್ನು ಮೇಲೆ ಹೋಗಲ್ಲ” ಅಂತ ಬೇಡಿಕೊಂಡ ಮೇಲೆ ಅಮ್ಮನಿಗೆ ಅಯ್ಯೋ ಎನಿಸಿ ಹೊಡೆಯುವುದನ್ನು ನಿಲ್ಲಿಸಿಬಿಟ್ಟಳು. ಆಮೇಲೆ ನಾವು ಜಾಣರಂತೆ ಪುಸ್ತಕ ಹಿಡಿದು ಕುಳಿತುಕೊಂಡು ಓದುವ ನಾಟಕ ಮಾಡತೊಡಗಿದೆವು. 

Advertisement

ಕೈಯಲ್ಲಿ ಪುಸ್ತಕವಿದ್ದರೂ ಕಣ್ಣೆಲ್ಲ ಬಾಗಿಲಿಗೆ ನೆಟ್ಟಿ¨ªೆವು. ಅಪ್ಪ ಯಾವಾಗ ಅಣ್ಣನನ್ನು ಕರೆದುಕೊಂಡು ಬರುತ್ತಾರೊ, ಅಣ್ಣನ ಪರಿಸ್ಥಿತಿ ಈಗ ಹೀಗಿದೆಯೊ ಅನ್ನುವ ಆತಂಕ, ಕುತೂಹಲ, ತಳಮಳ. ಅಮ್ಮನಿಂದ ಒದೆ ತಿಂದ ನೋವು, ಅಪ್ಪ ಬಂದ ಮೇಲೆ ಅಪ್ಪನಿಂದಲೂ ನಮಗೆ ದಂಡನೆ ಕಾದಿದೆಯೇನೊ ಅನ್ನುವ ವಿವಿಧ ಭಾವಗಳ ಸಂಘರ್ಷದಲ್ಲಿ ಹೊಯ್ದಾಡುತ್ತಿ¨ªೆವು. ಅಮ್ಮನ ಪರಿಸ್ಥಿತಿ ಕೂಡ ನಮಗಿಂತ ಭಿನ್ನವಾಗಿಯೇನೂ ಇರಲಿಲ್ಲ. ಅಮ್ಮ ನಮಗಿಂತ ಹೆಚ್ಚಿನ ಚಡಪಡಿಕೆಯಿಂದ ಗಳಿಗೆಗೊಮ್ಮೆ ಹೊರ ಇಣುಕುತ್ತ, ನಮ್ಮ ಕಡೆಗೂ ದುರುಗುಟ್ಟಿ ನೋಡುತ್ತ, “”ಅಪ್ಪ ಇನ್ನೂ ಬರಲಿಲ್ಲವಲ್ಲ” ಅಂತ ಒಳಗೂ ಹೊರಗೂ ಓಡಾಡುತ್ತಿದ್ದಳು. ಅಮ್ಮ ನಮ್ಮನ್ನು ನೋಡಿದ ಕೂಡಲೇ ನಾವು ಥಟ್ಟಂತ ಪುಸ್ತಕದತ್ತ ಕಣ್ಣು ಹೊರಳಿಸಿ ಬಿಡುತ್ತಿ¨ªೆವು. ನಮ್ಮ ಕಳ್ಳಾಟ ಗೊತ್ತಾದರೂ ಅದಕಷ್ಟು ಮಹತ್ವ ಕೊಡದೆ ಅಮ್ಮ, ಅಪ್ಪನ ಹಾದಿ ಕಾಯುತ್ತಿದ್ದಳು.

ನಮ್ಮನ್ನು ಸಾಕಷ್ಟು ಕಾಯಿಸಿದ ಮೇಲೆಯೇ ಅಪ್ಪ ಮನೆಗೆ ಬಂದಿದ್ದು. ಅವರು ಬಂದಿದ್ದು ತಿಳಿಯುತ್ತಲೇ ಪುಸ್ತಕ ಎಸೆದು ಹೊರ ಓಡಿದೆವು. ಅಪ್ಪನ ಜೊತೆಗೆ ಅಣ್ಣಾ ಆಟೋರಿûಾದಿಂದ ಇಳಿಯುತ್ತಿದ್ದುದನ್ನು ಕಂಡು ಹತ್ತಿರ ಧಾವಿಸಿದೆವು. ಅಣ್ಣನ ಬಲಗೈಗೆ ಪ್ಲಾಸ್ಟರ್‌ ಹಾಕಿ ಕೈಯನ್ನು ಕೆಳಗೆ ಇಳಿಸದಂತೆ ಬ್ಯಾಂಡೇಜ್‌ ಪಟ್ಟಿಯಿಂದ ಕುತ್ತಿಗೆಗೆ ಕಟ್ಟಿದ್ದರು. ಒಳಬಂದ ಅಪ್ಪ , “”ಇವು ಆಡಿರೊ ಮಂಗಾಟಕ್ಕೆ ನಿನ್ನ ಮಗ ಕೈ ಮುರಿದು ಕೊಂಡಿ¨ªಾನೆ. ಇನ್ನೆರಡು ತಿಂಗಳು ಇವನು ಹೀಗೆ ಇರಬೇಕಂತೆ” ಅಂದರು. ಅಮ್ಮ, “”ಅಯ್ಯೋ ದೇವರೇ , ಕೈಯೇ ಮುರಿದು ಹೋಯ್ತಾ, ಒಳ್ಳೆ ಗ್ರಹಚಾರ ಆಯ್ತಲ್ಲ. ಏನು ಮಕ್ಕಳೊ ಇವು, ಈ ರಜೆ ಯಾಕಾದ್ರೂ ಬರುತ್ತೂ! ಏನಾದ್ರೂ ಒಂದು ಅನಾಹುತ ಮಾಡಿಕೊಂಡು ಬಿಡುತ್ತವೆ” ಅಳು ತುಂಬಿದ ದನಿಯಲ್ಲಿ ಹೇಳುತ್ತ, ಅಣ್ಣನ ಬಳಿ ಬಂದು ಬ್ಯಾಂಡೇಜ್‌ ಹಾಕಿದ್ದ ಅವನ ಕೈ ಸವರುತ್ತ, “”ತುಂಬ ನೋವಾಗ್ತಾ ಇದೆಯೇನೋ, ನೋಡು ಒಂದು ಗಳಿಗೆಯಲ್ಲಿ ಎಂತಹ ಕೆಲಸ ಮಾಡಿಕೊಂಡು ಬಿಟ್ಟೆ. ಬಾ ಮಲಗಿ ರೆಸ್ಟ್‌ ತಗೊ” ಅಂತ ಹೇಳಿ, ಅಪ್ಪನತ್ತ ತಿರುಗಿ, “”ರೀ, ಎಷ್ಟು ದಿನಕ್ಕೆ ವಾಸಿ ಆಗುತ್ತಂತೆ. ಅಲ್ಲಿಯವರೆಗೂ ಇವನ ಸ್ಕೂಲ್‌ ಕಥೆ ಏನು, ಪರೀಕ್ಷೆ ಬೇರೆ ಹತ್ತಿರ ಬರ್ತಾ ಇದೆ” ಪರಿತಪಿಸುತ್ತ ಕೇಳಿದಳು.

“”ಸ್ಕೂಲ್‌ಗೆ ಹೋಗಬಹುದು, ಆದರೆ ಬರೆಯೋಕೆ ಆಗಲ್ಲ, ಕೈನಾ ಅÇÉಾಡಿಸದಂತೆ ನೋಡಿಕೊಳ್ಳಬೇಕು, ಮೊದಲು ಊಟ ಕೊಡು, ಹೊಟ್ಟೆ ಹಸಿದು ಹೋಗ್ತಾ ಇದೆ, ಮಕ್ಕಳದು ಊಟ ಆಯ್ತಾ?” ಅಪ್ಪ ಅಮ್ಮನಿಗೆ ಕೇಳಿದರು. ಅಪ್ಪ ಊಟ ಅಂತ ನೆನಪಿಸಿದ ಮೇಲೆಯೇ ನಾವಿನ್ನೂ ಊಟ ಮಾಡಿಲ್ಲ ಅಂತ ನೆನಪಾಗಿದ್ದು. ತತ್‌ಕ್ಷಣವೇ ಹೊಟ್ಟೆ ಹಸಿವಿನಿಂದ ಚುರುಗುಟ್ಟತೊಡಗಿತು. ಅಮ್ಮ ಆಗ್ಲೆ ಬಿಸಿ ಬಿಸಿ ಕಜ್ಜಾಯ ತಿನ್ನಿಸಿ¨ªಾಳಲ್ಲ ಅಂತ ಮನಸ್ಸಿನಲ್ಲಿಯೇ ಹೇಳಿಕೊಂಡು ಅಪ್ಪನ ಜೊತೆ ಊಟಕ್ಕೆ ಕುಳಿತುಕೊಂಡೆವು. 

ಅಂದಿನಿಂದ ಮನೆಯಲ್ಲಿ ಅಣ್ಣನಿಗೆ ರಾಜೋಪಚಾರ ಶುರುವಾಯಿತು. ಅಂದಿನಿಂದ ಅಣ್ಣನಿಗೆ ಮನೆಯಲ್ಲಿ ವಿಐಪಿ ಟ್ರೀಟ್‌ಮೆಂಟ್‌. ನಮಗಂತೂ ಅವನ ಕೈಗೊಬ್ಬರು, ಕಾಲಿಗೊಬ್ಬರು ಸೇವಕರಂತಾಗಿ ಬಿಡುವ ದಾರುಣ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿತು. ಒಬ್ಬರು ಕೈತೊಳೆದರೆ, ಒಬ್ಬರು ಬಾಯಿ ಒರೆಸಬೇಕು, ಒಬ್ಬರು ಬಟ್ಟೆ ಹಾಕಿದರೆ, ಮತ್ತೂಬ್ಬರು ಶೂ ಹಾಕಬೇಕು. ಬ್ಯಾಗ್‌ ಒಬ್ಬರು ಹಿಡಿದು, ಊಟ ಒಬ್ಬರು ಹಿಡಿದು, ಅಬ್ಬಬ್ಟಾ … ನಮಗೆ ಸಾಕು ಸಾಕಾಗಿ ಹೋಯ್ತು. ಅಣ್ಣನೂ ಈ ಸಂದರ್ಭವನ್ನು  ಸರಿಯಾಗಿ ಉಪಯೋಗಿಸಿಕೊಂಡು ನಮ್ಮಿಂದ ಕತ್ತೆಯಂತೆ ದುಡಿಸಿಕೊಂಡ. ಮೂರು ತಿಂಗಳು ಕಿರೀಟವಿಲ್ಲದ ರಾಜನಂತೆ ಅವನು ಮೆರೆದಾಡಿದ್ದನ್ನು ನೋಡುತ್ತಿದ್ದರೆ, ಅವನ ಬದಲು ನಾವಾದರೂ ಕೈಮುರಿದು ಕೊಳ್ಳಬಾರದಿತ್ತೆ ಅಂತ ಅನ್ನಿಸಿದ್ದೂ ಸುಳ್ಳಲ್ಲ. ಅಂತೂ ಆ ಎಮ್ಮೆ ಸವಾರಿ ನಮಗೆಲ್ಲ ವಿಶಿಷ್ಟವಾದ ಅನುಭವ ಕೊಟ್ಟಿದ್ದಂತೂ ನಾವು ದೊಡ್ಡವರಾದ ಮೇಲೆಯೂ  ಮರೆಯುವಂತೆಯೇ ಇರಲಿಲ್ಲ.  

– ಎನ್‌. ಶೈಲಜಾ ಹಾಸನ

Advertisement

Udayavani is now on Telegram. Click here to join our channel and stay updated with the latest news.

Next