ಬೆಂಗಳೂರು: ಹೈಕೋರ್ಟ್ ಆದೇಶದ ಬಳಿಕ ಎಚ್ಚೆತ್ತುಕೊಂಡಿರುವ ಸರಕಾರ ರಾಜ್ಯದಲ್ಲಿ ಶ್ಮಶಾನ ಜಾಗಗಳ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಒಂದು ವಾರದ ಗಡುವು ನೀಡಿದೆ.
ನ್ಯಾಯಾಲಯದ ನಿರ್ದೇಶನದಂತೆ ಶ್ಮಶಾನ ಜಮೀನುಗಳ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ ಶ್ಮಶಾನಕ್ಕೆ ಕಾದಿರಿಸಿರುವ ಜಮೀನು ಗಳನ್ನು ಪಹಣಿಯಲ್ಲಿ ಒಂದು ವಾರದೊಳಗೆ ನೋಂದಾಯಿಸಿ ಅವುಗಳ ನಿರ್ವಹಣೆಯನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ವಶಕ್ಕೆ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಜತೆಗೆ ಈವರೆಗೆ ಶವ ಸಂಸ್ಕಾರಕ್ಕೆ ಶ್ಮಶಾನ ಜಾಗ ಇಲ್ಲದ 1,454 ಗ್ರಾಮಗಳಿಗೆ ಜಮೀನು ಕಾದಿರಿಸಿ ಹಾಗೂ ಒತ್ತುವರಿ ತೆರವುಗೊಳಿಸಿರುವ ವರದಿಗಳನ್ನು ವಾರದಲ್ಲಿ ಸಲ್ಲಿಸುವಂತೆ ತಾಕೀತು ಮಾಡಲಾಗಿದ್ದು, ತಪ್ಪಿದ್ದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ವರದಿ ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಶ್ಮಶಾನ ಜಮೀನುಗಳು ಒತ್ತುವರಿ ಆಗಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ವಿಚಾರಣೆಯ ದಿನಾಂಕದೊಳಗೆ ಒತ್ತುವರಿಗಳನ್ನು ತೆರವುಗೊಳಿಸಿದ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಅದರಂತೆ, ಸೆ.6ಕ್ಕೆ ಪ್ರಕರಣ ವಿಚಾರಣೆಗೆ ಬರಲಿದ್ದು. ಆದ್ಯತೆ ಮೇಲೆ ತುರ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಜಾಗ ಇಲ್ಲದ 6 ಸಾವಿರಕ್ಕೂ ಅಧಿಕ ಕಂದಾಯ ಗ್ರಾಮಗಳು, ಜನವಸತಿ ಪ್ರದೇಶಗಳು ಹಾಗೂ 218 ಪಟ್ಟಣ ಪ್ರದೇಶಗಳಲ್ಲಿ ಅಗತ್ಯ ಜಮೀನು ಮಂಜೂರು ಮಾಡಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮೊಹಮ್ಮದ್ ಇಕ್ಬಾಲ್ ಎಂಬವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು 2019ರ ಆ.23ರಂದು ಇತ್ಯರ್ಥಪಡಿಸಿದ್ದ ಹೈಕೋರ್ಟ್, ಶ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು 6 ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿತ್ತು. ಆದರೆ, ನಿಗದಿತ ಸಮಯದಲ್ಲಿ ಆದೇಶ ಪಾಲನೆ ಆಗದ ಕಾರಣ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿತ್ತು.