Advertisement

ಮೀನುಗಾರಿಕೆ ಇಲ್ಲದೆ ದಡದಲ್ಲೇ ಉಳಿದ ನಾಡದೋಣಿಗಳು

06:00 AM Jun 30, 2018 | Team Udayavani |

ಮಲ್ಪೆ: ನಾಡದೋಣಿ ಮೀನುಗಾರಿಕೆ ಆರಂಭವಾಗಿ ತಿಂಗಳು ಕಳೆದರೂ ಕರಾವಳಿಯಲ್ಲಿ ಇನ್ನೂ ಸಂಪೂರ್ಣವಾಗಿ ದೋಣಿಗಳು ಸಮುದ್ರಕ್ಕೆ ಇಳಿದಿಲ್ಲ. ಪೂರಕವಾದ ವಾತಾವರಣ ಇಲ್ಲದ್ದರಿಂದ ಮೀನುಗಾರರು ಕೈಚೆಲ್ಲಿ ಕೂತಿದ್ದಾರೆ. ಆರಂಭದ ದಿನದಿಂದಲೂ ಬೀಸುತ್ತಿರುವ ಗಾಳಿ, ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡು, ನಾಡದೋಣಿ ಮೀನುಗಾರರನ್ನು ಕಡಲಿಗಿಳಿಯದಂತೆ ಮಾಡಿದೆ.

Advertisement

ಶೇ. 10ರಷ್ಟೂ ಮೀನುಗಾರಿಕೆ ನಡೆದಿಲ್ಲ
ಜೂನ್‌ ತಿಂಗಳಿನಿಂದ ನಾಡದೋಣಿ ಮೀನು ಗಾರಿಕೆಗೆ ಅವಕಾಶವಿದ್ದರೂ ಒಂದು ತಿಂಗಳು ಪೂರ್ಣ ಕೈ ತಪ್ಪಿದೆ. ಆ. 1ರಿಂದ ಯಾಂತ್ರಿಕ ಬೋಟ್‌ಗಳು ಸಮುದ್ರಕ್ಕೆ ಇಳಿಯಲಿದೆ. 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 10ರಷ್ಟು ಮೀನುಗಾರಿಕೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.  
ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆಯ ನಿಷೇದ ಎರಡು ತಿಂಗಳ ಈ ಅವಧಿಯಲ್ಲಿ ಉತ್ತಮ ಫಸಲು ದೊರೆತರೆ ಬದುಕು ಚೆನ್ನಾಗಿ ಆಗುತ್ತದೆ. ಆದರೆ ಈ ಆಸೆಗೆ ಕಡಲು ಕಲ್ಲುಹಾಕುವ ಲಕ್ಷಣ ಗೋಚರಿಸಿದೆ.
  
ಗಾಳಿಯ ಬದಲಾವಣೆ
ಬೀಸುತ್ತಿರುವ ಗಾಳಿಯಲ್ಲಿ ಬದಲಾವಣೆ ಯಾಗದ್ದರಿಂದಲೂ ಮತ್ಸé ಸಂಪತ್ತಿನ ಲಕ್ಷಣ ಕಂಡುಬರುತ್ತಿಲ್ಲ. ದಕ್ಷಿಣ ದಿಕ್ಕಿನಿಂದ ಒಂದೇ ಸಮನೆ ಗಾಳಿ ಬೀಸುತ್ತಿದೆ. ಆದರೆ ಉತ್ತರ ಮತ್ತು ತೀರದಿಂದ ಗಾಳಿ ಬೀಸಿದರೆ ಮೀನುಗಾರಿಕೆಗೆ ಪೂರಕವಾಗಿರುತ್ತದೆ. ಕರೆಯ ಗಾಳಿ ಸಮುದ್ರದಡೆಗೆ ಬೀಸಿದರೆ ನೀರು ತಂಪಾಗಿ ಅಗಾಧ ಪ್ರಮಾಣದಲ್ಲಿ ಮೀನು ದೊರೆಯುತ್ತದೆ ಎನ್ನುವುದು ಮೀನುಗಾರರ ಲೆಕ್ಕಚಾರ.

ಇನ್ನೂ ಏಳದ ತೂಫಾನ್‌
ಕಡಲಾಳದಲ್ಲಿ ತೂಫಾನ್‌ ಎದ್ದು ನೀರಿನ ಬದಲಾವಣೆಯಿಂದಾಗಿ ವಿವಿಧ ಜಾತಿಯ ಮೀನುಗಳು ಕಡಲತೀರದತ್ತ ಧಾವಿಸುವುದು ವಾಡಿಕೆ. ಈ ಬಾರಿ ಚಂಡ ಮಾರುತದ ಪ್ರಭಾವದಿಂದ ಆಗಿದ್ದು ಬಿಟ್ಟರೆ ಮಳೆಗಾಲದಲ್ಲಿ ಉಂಟಾಗುವ ಅಂತಹ ತೂಫಾನ್‌ ಏಳದೆ ನಾಡದೋಣಿ ಮೀನುಗಾರರಿಗೆ ನಿರಾಶೆ ಮೂಡಿಸಿದೆ. ಶೇ. 25ರಷ್ಟು ದೋಣಿಗಳು ಮಾತ್ರ ಒಂದೆರಡು ಬಾರಿ ಸಮುದ್ರಕ್ಕೆ ತೆರಳಿದ್ದು, ಅಲ್ಪಸ್ವಲ್ಪ ಮೀನು ಲಭಿಸಿದೆ.

ನೆರೆ ನೀರು ಸಮುದ್ರ ಸೇರಿಲ್ಲ
ಮಳೆ ಸಾಕಷ್ಟು ಬಂದರೂ ನೆರೆ ನೀರು ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಸಮುದ್ರ ಸೇರಿಲ್ಲ. ರಭಸವಾಗಿ ಬರುವ ನೆರೆನೀರಿನೊಂದಿಗೆ ಬಂದ ತ್ಯಾಜ್ಯ ಕಸಗೊಬ್ಬರಗಳು ಸಮುದ್ರ ಸೇರುವಾಗ ಮೀನುಗಳು ಆಹಾರವನ್ನು ಆರಸಿಕೊಂಡು ಬಂದು ಸಮುದ್ರ ತೀರವನ್ನು ಸೇರುತ್ತದೆ. ಈವರೆಗೆ ಅಂತಹ ನೆರೆನೀರು ಬಂದಿಲ್ಲ ಎಂದು ಮೀನುಗಾರರು ಹೇಳುತ್ತಾರೆ.  

Advertisement

40ಕ್ಕೂ ಅಧಿಕ ತಂಡಗಳಿಂದ ನಾಡದೋಣಿ ಮೀನುಗಾರಿಕೆ
ಉಡುಪಿ ತಾಲೂಕಿನಲ್ಲಿ  ನಾಡದೋಣಿ ಮೀನುಗಾರಿಕೆಯನ್ನು ನಡೆಸುವ 40ಕ್ಕೂ ಅಧಿಕ (ಡಿಸ್ಕೋಫಂಡ್‌) ತಂಡಗಳು ಇವೆ.  ಜತೆಗೆ ಕಂತಲೆ, ಪಟ್ಟಬಲೆ, ಟ್ರಾಲ್‌, ಕೈರಂಪಣಿ ವಿಧಾನಗಳ ಮೂಲಕವೂ ನಡೆಯುತ್ತಿದೆ. ಪಡುಬಿದ್ರೆ ಉಚ್ಚಿಲ, ಕಾಪು, ಉದ್ಯಾವರ, ಮಲ್ಪೆ , ತೊಟ್ಟಂ, ಹೂಡೆ ಬೆಂಗ್ರೆ, ಗಂಗೊಳ್ಳಿ ವರೆಗೆ ಹರಡಿಕೊಂಡಿದೆ. ಅರ್ಧ ಶತಮಾನದ ಹಿಂದೆ ಯಾಂತ್ರಿಕ ದೋಣಿಗಳು ಕಾಲಿಡುವ ಮುಂಚೆ ಕರಾವಳಿಯುದ್ದಕ್ಕೂ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಮಾತ್ರ ಅಸ್ತಿತ್ವದಲ್ಲಿತ್ತು.ಈಗ ನಾಡದೋಣಿ ಮೀನುಗಾರಿಕೆ ಯಾಂತ್ರಿಕ ಮೀನುಗಾರಿಕೆಯ ನಿಷೇಧದ ಅವಧಿಯಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಮೀನಿಗೆ ಬಲೆ ಹಾಕುವುದು ಕಷ್ಟ
ಈ ಬಾರಿ ಆರಂಭದಿಂದಲೂ ಸಮುದ್ರ ಬಿರುಸಾಗಿದ್ದು, ಗಾಳಿಯ ಒತ್ತಡ ಜಾಸ್ತಿ ಇರುವುದರಿಂದ ಮೀನುಗಾರಿಕೆಗೆ 
ತೆರಳಲು ಸಾಧ್ಯವಾಗುತ್ತಿಲ್ಲ.ತೆರಳಿದರೂ ಮೀನಿಗೆ ಬಲೆ ಹಾಕುವುದು ಕಷ್ಟ.ಪರಿಸ್ಥಿತಿ ಇನ್ನು ಒಂದೆರಡು ದಿನ ಹೀಗೆ ಇರುವ ಸಾಧ್ಯತೆ ಇದೆ.ಹೀಗಾದರೆ ಮೀನುಗಾರಿಗೆ ಕಷ್ಟಸಾಧ್ಯ.
– ಕೃಷ್ಣ ಸುವರ್ಣ ಕದಿಕೆ, 
ನಾಡದೋಣಿ ಮೀನುಗಾರ

– ನಟರಾಜ್‌ ಮಲ್ಪೆ
ಚಿತ್ರ: ವಾಮನ ಬಂಗೇರ, ಪಡುಕರೆ

Advertisement

Udayavani is now on Telegram. Click here to join our channel and stay updated with the latest news.

Next