ಹೊಸದಿಲ್ಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದ ಜಲಾಶಯಗಳ ನೀರು ಸಂಗ್ರಹವು ಕೊರತೆಯನ್ನು ಎದುರಿಸುತ್ತಿದೆ ಎಂದು ಕೇಂದ್ರ ಜಲ ಆಯೋಗದ ಬುಲೆಟಿನ್ ಹೇಳಿದೆ. ಕಳೆದ 10 ವರ್ಷಗಳ ಸರಾಸರಿಯಲ್ಲೂ ಇದು ಅತೀ ಹೆಚ್ಚು ಕೊರತೆಯಾಗಿದೆ. ಅಲ್ಲದೇ ದೇಶದ ಒಟ್ಟು 150 ಜಲಾಶಯಗಳ ಲೈವ್ ಸ್ಟೋರೇಜ್ ಶೇ.36ಕ್ಕೆ ಇಳಿಕೆಯಾಗಿದೆ ಎಂದು ಆಯೋಗ ಹೇಳಿದೆ.
ಕಳೆದ ವರ್ಷದಲ್ಲಿ ಮಳೆ ಅಭಾವ, ಹೆಚ್ಚುತ್ತಿರುವ ನಗರೀಕರಣದಿಂದಾಗಿ ಕೆರೆಗಳು ನಾಶವಾದ ಪರಿಣಾಮ ಬೆಂಗಳೂರು ನೀರು ಕೊರತೆಯಿಂದ ಭಾರೀ ಸಮಸ್ಯೆ ಎದುರಿಸುತ್ತಿದೆ.
150 ಜಲಾಶಯಗಳ ಒಟ್ಟು ಲೈವ್ ಸ್ಟೋರೇಜ್ ಸಾಮರ್ಥ್ಯವು 178 ಬಿಸಿಎಂ (ಬಿಲಿಯನ್ ಕ್ಯೂಬಿಕ್ ಮೀಟರ್ಸ್) ಆಗಿದ್ದು, ಇದು 257.812 ಬಿಸಿಎಂ ಲೈವ್ ಸ್ಟೋರೇಜ್ ಸಾಮರ್ಥ್ಯದ ಸುಮಾರು ಶೇ.69.35ರಷ್ಟು ಎಂದು ಗುರುವಾರ ಬಿಡುಗಡೆ ಮಾಡಲಾದ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಈ ಜಲಾಶಯಗಳಲ್ಲಿ 64.606 ಬಿಸಿಎಂ ಇದ್ದು, ಅದು ಒಟ್ಟು ಲೈವ್ ಸ್ಟೋರೇಜ್ ಸಾಮರ್ಥ್ಯದ ಶೇ.36ರಷ್ಟಾಗಿದೆ. ಅಂದರೆ ಈ ಜಲಾಶಯಗಳಲ್ಲಿ ಈಗ ಶೇ.36ರಷ್ಟು ನೀರಿದೆ. ಕಳೆದ 10 ವರ್ಷಗಳಲ್ಲಿ ಈ ಲೈವ್ ಸ್ಟೋರೇಜ್ ಸರಾಸರಿ ಸಾಮರ್ಥ್ಯವು 66.644 ಬಿಸಿಎಂ ಎಂದು ತಿಳಿಸಿದೆ.
ವಾರದಿಂದ ವಾರಕ್ಕೆ ಕುಸಿತ
ಬೇಸಗೆ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹವು ವಾರದಿಂದ ವಾರಕ್ಕೆ ಕುಸಿಯುತ್ತಿದೆ. ಈ ಹಿಂದಿನ ವಾರ ಶೇ.38ರಷ್ಟಿತ್ತು, ಅದರ ಹಿಂದಿನ ವಾರ ಅದು ಶೇ.40ರಷ್ಟಿತ್ತು. ಉತ್ತರ ಭಾರತದ ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳ ಲೈವ್ ಸ್ಟೋರೇಜ್ ಕುಸಿತವಾಗುತ್ತಿದೆ.
ಕರ್ನಾಟಕ, ತ.ನಾಡಿನಲ್ಲಿ ಜಲ ಸಂರಕ್ಷಣೆ ಅನಿವಾರ್ಯ!
ಹತ್ತು ವರ್ಷಗಳ ಸರಾಸರಿ ಹಾಗೂ ಕಳೆದ ವರ್ಷಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಭಾರೀ ನೀರು ಸಂಗ್ರಹದಲ್ಲಿ ಕೊರತೆಯನ್ನು ಎದುರಿಸುತ್ತಿವೆ. ದಕ್ಷಿಣ ಭಾರತ ಜಲಾಶಯಗಳ ಒಟ್ಟು ಸಾಮರ್ಥ್ಯಗಳ ಪೈಕಿ ಕೇವಲ ಶೇ.22ರಷ್ಟು ಲೈವ್ ಸ್ಟೋರೇಜ್ ಇದೆ. ಜಲ ಸಂರಕ್ಷಣೆ ಮತ್ತು ಸುಸ್ಥಿರ ವ್ಯವಸ್ಥಾಪನ ಪದ್ಧತಿಗಳನ್ನು ಅಳವಡಿಕೊಳ್ಳುವ ಅಗತ್ಯವನ್ನು ಇದು ಒತ್ತಿ ಹೇಳುತ್ತಿದೆ ಎಂದು ಬಲೆಟಿನ್ ತಿಳಿಸಿದೆ.
ಇನ್ನು ಅಸ್ಸಾಮ್, ಝಾರ್ಖಂಡ್, ಒಡಿಶಾಗಳಲ್ಲಿ ಪರಿಸ್ಥಿತಿ ಸ್ವಲ್ಪ ಆಶಾದಾಯಕವಾಗಿದೆ. ಹಾಗೆಯೇ ಗುಜರಾತ್, ಮಹಾರಾಷ್ಟ್ರದಲ್ಲೂ ಕೊರತೆಯಾಗಿದ್ದು, ಕೇಂದ್ರ ಭಾರತದ ಉತ್ತರ ಪ್ರದೇಶ, ಮಧ್ಯ ಪ್ರದೇಶ ಜಲಾಶಯಗಳು ಕೂಡ ಲೈವ್ ಸ್ಟೋರೇಜ್ ಕೊರತೆಯನ್ನು ಎದುರಿಸುತ್ತಿವೆ.