Advertisement

ಇನ್ನೂ ಸರಿಯಾಗಿಲ್ಲ ಸುಡುಗಾಡು ತೋಡು

06:38 PM Jan 08, 2022 | Team Udayavani |

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯ ಸಮೀಪದ ಸುಡುಗಾಡು ತೋಡು ಕೊಳಚೆ, ತ್ಯಾಜ್ಯಗಳಿಂದ ತುಂಬಿದ್ದು ಯಾವುದೇ ಮನವಿ ಬೇಡಿಕೆಗೂ ಸ್ಪಂದನ ದೊರೆಯಲಿಲ್ಲ. ಇಲ್ಲಿನ ನಿವಾಸಿಗಳಿಗೆ ಇದರ ಬದಿ ವಾಸಿಸುವುದೇ ಒಂದು ಶಿಕ್ಷೆಯಂತಾಗಿದ್ದು ಸತ್ತ ಪ್ರಾಣಿಗಳ ಕಳೇಬರ, ಕೊಳೆತು ನಾರುತ್ತಿರುವ ಮಾಂಸದ ತ್ಯಾಜ್ಯ, ಪ್ಲಾಸ್ಟಿಕ್‌ ಇನ್ನಿತರ ವಸ್ತು ಗಳು ಕೊಳಕು ತೋಡಿನಲ್ಲಿ ಹರಿದುಬರುತ್ತಿರುವುದರಿಂದ ಸಹಿಸಲು ಕಷ್ಟವಾಗಿದೆ.

Advertisement

ಉದ್ದನೆಯ ತೋಡು
ಕುಂದಾಪುರ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯಲ್ಲಿ ಹಾದುಹೋಗುವ ಕುಂದಾಪುರದ ರಾಜಕಾಲುವೆ ಎಂದು ಗುರುತಿಸಿಕೊಂಡ ಈ ಸುಡುಗಾಡು ತೋಡಿನ ದಡದಲ್ಲಿ ನೆಲೆಸಿರುವವರ ಬದುಕನ್ನು ನರಕಸದೃಶ ವನ್ನಾಗಿಸಿದೆ. ನಗರದ ತ್ಯಾಜ್ಯ, ಕೊಳಚೆ ನೀರು ಇದೇ ತೋಡಿನ ಮೂಲಕ ಹಾದು ಪಂಚಗಂಗಾವಳಿ ನದಿ ಸೇರುತ್ತಿದೆ. ಅಂದಾಜು 5 ಕಿ. ಮೀ. ಉದ್ದದ ತೋಡಿನ ವ್ಯಾಪ್ತಿಯಲ್ಲಿ ಖಾರ್ವಿಕೇರಿ ಬಹದ್ದೂರ್‌ ಷಾ ವಾರ್ಡ್‌, ಚಿಕ್ಕನ್ಸಾಲ್‌ ಬಲಬದಿ ವಾರ್ಡ್‌ ಹಾಗೂ ಖಾರ್ವಿ ಮೇಲ್ಕೇರಿ ವಠಾರ ಸೇರಿಕೊಂಡಿದೆ.

ಮನೆಗಳ ಸಮೀಪ ರೋಗ ಭೀತಿ
ಇಲ್ಲಿನ ಇಕ್ಕೆಲಗಳಲ್ಲಿ 500ಕ್ಕೂ ಮಿಕ್ಕಿ ಮನೆಗಳಿವೆ. ಹಗಲು ರಾತ್ರಿಯೆನ್ನದೆ ತೆರೆದ ತೋಡಿನಲ್ಲಿ ಸಾಗುವ ಕೊಳಚೆ ನೀರು, ತ್ಯಾಜ್ಯಗಳು ಇಲ್ಲಿನ ಜನರಿಗೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಕಸಕಡ್ಡಿಗಳಿಗೆ ಸಿಲುಕಿ ನಿಂತ ಕೊಳಚೆ ನೀರು ಕಪ್ಪಾಗಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಇದು ನರಕಸದೃಶ ಎನಿಸಿದೆ. ಕುಂದಾಪುರ ಪೇಟೆಯ ಎಲ್ಲ ತ್ಯಾಜ್ಯಗಳು ತೆರೆದ ತೋಡಿನ ಮೂಲಕ ಸಾಗುತ್ತಿದೆ. ಕೊಳಚೆ ನೀರು, ತ್ಯಾಜ್ಯದಿಂದ ದುರ್ನಾತ ಹಬ್ಬಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

ಹೂಳೆತ್ತಬೇಕು
ಇಲ್ಲಿನ ತೋಡಿನಲ್ಲಿ ಕೊಳಚೆ, ಹೂಳು ಆವರಿಸಿದೆ. ದಶಕಗಳಿಂದ ಈ ಸಮಸ್ಯೆ ಬಗೆಹರಿಸುವಂತೆ ಮಾಡಿಕೊಂಡ ಮನವಿಗೆ ಸ್ಥಳೀಯಾಡಳಿತ ಸ್ಪಂದಿಸದೇ ಇರುವುದು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಸ್ಥಳೀಯರು
ನೂರಾರು ವರ್ಷಗಳಿಂದ ಇಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೊಳಚೆ, ದುರ್ವಾಸನೆಯಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ. ತೋಡಿಗೆ ಕೊಳಚೆ ನೀರು ಹರಿಸದಂತೆ ಸ್ಥಳೀಯಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು. ಇದರ ಹೂಳನ್ನು ತೆಗೆಯಬೇಕು. ಪುರಸಭೆ ಆಡಳಿತಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ ಎ ಂದು ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ ತಿಳಿಸಿದ್ದಾರೆ.

ಹೋರಾಟವೆ ದಾರಿ
ಸ್ಥಳೀಯಾಡಳಿತ, ಸಂಬಂಧಿತ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನ ಇಲ್ಲ ನಾವು ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಕಲ್ಪಿಸದೇ ಇದ್ದಲ್ಲಿ ಹೋರಾಟವೇ ನಮಗುಳಿದಿರುವ ದಾರಿ.
-ದಿನೇಶ್‌ ಸಾರಂಗ, ಖಾರ್ವಿಕೇರಿ

Advertisement

ಮನವಿ ನೀಡಲಾಗಿದೆ
ಸುಡುಗಾಡು ತೋಡಿನ ಸಮಸ್ಯೆ ಇಂದು ನಿನ್ನೆಯದಲ್ಲ. ಪರಿಹಾರಕ್ಕೆ ಸಣ್ಣ ಮೊತ್ತ ಸಾಕಾಗುವುದಿಲ್ಲ. ಸ್ಥಳೀಯರ ಬೇಡಿಕೆಯನ್ವಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಶಾಶ್ವತ ಪರಿಹಾರಕ್ಕಾಗಿ ಮನವಿ ನೀಡಲಾಗಿದೆ. ಸಚಿವರ ಜತೆ ಮಾತನಾಡಿ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ಅವರಿಂದ ದೊರೆತಿದೆ.
-ಸಂದೀಪ್‌ ಖಾರ್ವಿ,
ಉಪಾಧ್ಯಕ್ಷರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next