Advertisement

ರಾಜ್ಯದಲ್ಲಿ ಉದ್ಯೋಗ ಖಾತ್ರಿ ಕೆಲಸದ ಅವಧಿ ಕಡಿತ

03:45 AM Mar 06, 2017 | |

ಚಿತ್ರದುರ್ಗ: ಕೆಂಡದಂತಹ ಬಿಸಿಲು ಜನಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದರಿಂದ ರಾಜ್ಯ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ಕಾರ್ಮಿಕರ ಕೂಲಿ ಕೆಲಸದಲ್ಲಿ ಸ್ಪಲ್ಪ ಮಟ್ಟಿನ ರಿಯಾಯಿತಿ ನೀಡಿದೆ.

Advertisement

ರಾಜ್ಯವನ್ನು ಕಾಡುತ್ತಿರುವ ಬರ, ಬಿರುಬಿಸಿಲಿನಿಂದ ಕೂಲಿ ಕಾರ್ಮಿಕರನ್ನು ರಕ್ಷಿಸಲು ಕೆಲಸದ ಅವಧಿಯ ಪ್ರಮಾಣದಲ್ಲಿ ಕಡಿತಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಎಚ್‌.ಕೆ. ಪಾಟೀಲ್‌ ಮಾ. 1ರಂದು ಆದೇಶ ಹೊರಡಿಸಿದ್ದಾರೆ.

ತೆಲಂಗಾಣ ರಾಜ್ಯ ರೂಪಿಸಿರುವ ಹೊಸ ಮಾದರಿ ಅನುಸರಿಸಲು ಕರ್ನಾಟಕವೂ ಮುಂದಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರು, ತಮಗೆ ನಿಗದಿಪಡಿಸಿದ ಕೆಲಸಕ್ಕಿಂತ ಕಡಿಮೆ ಕೆಲಸ ಮಾಡಿದರೂ ಸಾಕೆಂದು ಆದೇಶಿಸಲಾಗಿದೆ.
ರಿಯಾಯಿತಿ ಪ್ರಮಾಣ ನಿಗದಿ:

ಫೆಬ್ರವರಿಯಿಂದ ಜೂನ್‌ವರೆಗೆ ರಿಯಾಯಿತಿ ಪ್ರಮಾಣದಲ್ಲಿ ಕೆಲಸ ಮಾಡುವ ಭಾಗ್ಯವನ್ನು ಕೂಲಿ ಕಾರ್ಮಿಕರು ಪಡೆದಿದ್ದಾರೆ. ಮಾರ್ಚ್‌ನಲ್ಲಿ ಶೇ.25, ಏಪ್ರಿಲ್‌ನಲ್ಲಿ ಶೇ.30, ಮೇನಲ್ಲಿ ಶೇ.30 ಹಾಗೂ ಜೂನ್‌ನಲ್ಲಿ ಶೇ.20ರಷ್ಟು ರಿಯಾಯಿತಿ ಕೂಲಿ ಕೆಲಸಕ್ಕೆ ನೀಡಲಾಗಿದೆ. ಉದಾಹರಣೆಗೆ ದಿನವೊಂದಕ್ಕೆ ಒಬ್ಬ ಕೂಲಿ ಕಾರ್ಮಿಕ 100 ಮೀಟರ್‌ ಉದ್ದದಷ್ಟು ನೆಲ ಅಗೆತದ ಕೆಲಸ ಮಾಡಬೇಕು ಎಂದಿಟ್ಟುಕೊಳ್ಳೋಣ. ಇದಕ್ಕೆ ಮಾರ್ಚ್‌ ತಿಂಗಳ ಶೇ.25ರಷ್ಟು ರಿಯಾಯಿತಿ ಅಂದರೆ 75 ಮೀಟರ್‌ನಷ್ಟು ನೆಲ ಅಗೆದರೂ ಆತನಿಗೆ ಪೂರ್ಣ ಪ್ರಮಾಣದ ಸಂಬಳವಾದ 224 ರೂ. ನೀಡಬೇಕು. ಜೂನ್‌ ತಿಂಗಳವರೆಗೆ ರಿಯಾಯಿತಿ ಸೌಲಭ್ಯ ಮುಂದುವರಿಯಲಿದೆ.

ಎಲ್ಲ ತಾಲೂಕುಗಳಿಗೂ ಅನ್ವಯ
ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ಅವಧಿ ಕಡಿಮೆಗೊಳಿಸಿರುವ ಆದೇಶ, ರಾಜ್ಯ ಸರ್ಕಾರ ಘೋಷಣೆ ಮಾಡಿರುವ 160 ಬರಪೀಡಿತ ತಾಲೂಕುಗಳಲ್ಲಷ್ಟೇ ಅಲ್ಲದೆ ರಾಜ್ಯದ ಎಲ್ಲ ತಾಲೂಕುಗಳಿಗೂ ಅನ್ವಯವಾಗಲಿದೆ.

Advertisement

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರಿಗೆ 150 ಮಾನವ ದಿನಗಳಿಗೆ ಕೂಲಿ ದಿನಗಳನ್ನು ಹೆಚ್ಚಿಸಿ ಸರ್ಕಾರ ಕರುಣೆ ತೋರಿತ್ತು. ಈಗ ಬಿಸಿಲಿನ ತಾಪದಿಂದ ಯಾವುದೇ ಸಾವು-ನೋವು ಸಂಭವಿಸಬಾರದು ಎನ್ನುವ ಮುಂಜಾಗ್ರತೆಯಿಂದ ಕೆಲಸದ ಅವಧಿ ಕಡಿಮೆ ಮಾಡಿರುವುದು ಗಮನಾರ್ಹ.

ಮಾ. 1ರಿಂದ ಅನ್ವಯವಾಗುವಂತೆ ನಿಗದಿತ ಕೂಲಿ ಕೆಲಸದ ಪ್ರಮಾಣ ಶೇ.20ರಿಂದ 30ರ ತನಕ ಕಡಿತ ಮಾಡಿ ಕೂಲಿ ಕಾರ್ಮಿಕರಿಗೆ ರಿಯಾಯಿತಿ ನೀಡಲಾಗಿದೆ. ಉದಾಹರಣೆಗೆ ಒಬ್ಬ ಕೂಲಿ ಕಾರ್ಮಿಕ ದಿನವೊಂದಕ್ಕೆ 100 ಕ್ಯೂಬಿಕ್‌ ಮೀ. ಕೆಲಸ ಮಾಡಬೇಕಿದ್ದರೆ ಮಾರ್ಚ್‌ ತಿಂಗಳಲ್ಲಿ ಶೇ.25ರಷ್ಟು ಕಡಿತ ಮಾಡಿ ಶೇ.75ರಷ್ಟು ಕೆಲಸ ಮಾಡಿದರೂ ಸಾಕು. ಈ ಆದೇಶ ರಾಜ್ಯದ ಎಲ್ಲ ತಾಲೂಕುಗಳಿಗೂ ಅನ್ವಯವಾಗಲಿದೆ. ಜೂನ್‌ ಅಂತ್ಯದವರೆಗೆ ಈ ಸೌಲಭ್ಯ ಇರಲಿದೆ.
– ಟಿ.ಎಂ. ವಿಜಯಭಾಸ್ಕರ್‌, ಸರ್ಕಾರದ ಅಪರ ಮುಖ್ಯ 
ಕಾರ್ಯದರ್ಶಿ.

– ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next