ಕುಂದಗೋಳ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಕುಸುಮಾ ಶಿವಳ್ಳಿ ಅವರ ಹೆಸರು ಘೋಷಣೆಯಾದ ಬೆನ್ನಲ್ಲೇ ಪಕ್ಷದಲ್ಲಿ ಬಂಡಾಯದ ಮಾತುಗಳು ಪ್ರತಿಧ್ವನಿಸಿವೆ.
ಪಟ್ಟಣದ ಅರವಿಂದ ಕಟಗಿ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ಸಚಿವ ಸತೀಶ ಜಾರಕಿಹೊಳಿ ಎದುರು ಟಿಕೆಟ್ ಆಕಾಂಕ್ಷಿಗಳು ಅಹವಾಲು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಟಿಕೆಟ್ ಆಕಾಂಕ್ಷಿ ಶಿವಾನಂದ ಬೆಂತೂರ, ಜಗನ್ನಾಥಗೌಡ ಸಿದ್ದನಗೌಡ್ರ, ಚಂದ್ರಶೇಖರ ಜುಟ್ಟಲ, ವಿಶ್ವನಾಥ ಕೂಬಿಹಾಳ, ಸುರೇಶ ಸವಣೂರ ಅವರ ಪರವಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಏಕಪಕ್ಷೀಯವಾಗಿ ಒಂದೇ ಕುಟುಂಬಕ್ಕೆ ಟಿಕೆಟ್ ನೀಡುವುದು ಸರಿಯಲ್ಲ.
ಮಾಜಿ ಸಚಿವರ, ಮಾಜಿ ಶಾಸಕರ ಪುತ್ರರನ್ನು ಕಡೆಗಣಿಸಿದ್ದಲ್ಲದೆ, ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಮ್ಮವರು ಕಣದಲ್ಲಿ ಉಳಿಯುತ್ತಾರೆ ಎಂದು ಶಿವಾನಂದ ಬೆಂತೂರ ಹೇಳಿದರು.
ಬಳಿಕ ಮಾತನಾಡಿದ ಸಚಿವ ಸತೀಶ, ಕ್ಷೇತ್ರದಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಪೂರ್ಣವಾಗಿ ಒಗ್ಗೂಡಿ ಚುನಾವಣೆ ಎದುರಿಸೋಣ. ವರಿಷ್ಠರು ಕುಸುಮಾ ಶಿವಳ್ಳಿ ಅವರಿಗೆ ಅ ಧಿಕೃತವಾಗಿ “ಬಿ’ ಫಾರಂ ನೀಡಿದ್ದಾರೆ.
ಏ.29ರಂದು ಕುಸುಮಾ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸೇರಿದಂತೆ ರಾಜ್ಯದ ಅನೇಕ ಗಣ್ಯರು ಆಗಮಿಸಲಿದ್ದು,
ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಮೆರವಣಿಗೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿ ಕುಸುಮಾ ಶಿವಳ್ಳಿ, ಅರವಿಂದ ಕಟಗಿ, ಎ.ಬಿ.ಉಪ್ಪಿನ, ಅನಿಲಕುಮಾರ ಪಾಟೀಲ, ಟಿ.ಈಶ್ವರ, ಅಜೀಜ ಕ್ಯಾಲ್ಕೊಂಡ ಇನ್ನಿತರರಿದ್ದರು.