ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದ ವೈಭವದ ಸುವರ್ಣ ಗೋಪುರ ಸಮರ್ಪಣೆಯ ಪುಣ್ಯ ಕಾರ್ಯದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಭಜನಾ ಪ್ರದಕ್ಷಿಣೆ, ಕುಣಿತ ಭಜನೆ ಸಮಯೋಚಿತವಾಗಿದ್ದು ಭಜನೆಯಿಂದ ಭಗವಂತನ ಸಾಕ್ಷಾತ್ಕಾರ ಕಂಡುಕೊಳ್ಳಲು ದೊರೆತಿರುವ ಅವಕಾಶ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಹೋದರ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.
ಉಡುಪಿ ಶ್ರೀಕೃಷ್ಣ ದೇವರಿಗೆ ಸುವರ್ಣ ಗೋಪುರ ಸಮರ್ಪಣೆಯ ಪ್ರಯುಕ್ತ ಜೂ. 6ರಂದು ಮುಂಜಾನೆ ರಥಬೀದಿಯಲ್ಲಿ ನಡೆದ ವಿಶೇಷ ಭಜನ ಪ್ರದಕ್ಷಿಣೆ, ಕುಣಿತ ಭಜನ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಲಿಮಾರು ಶ್ರೀಪಾದರು ತನ್ನ ಪರ್ಯಾಯ ಅವಧಿಯಲ್ಲಿ ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಐತಿಹಾಸಿಕ ಎರಡು ವರ್ಷಗಳ ಪರ್ಯಂತ ಅಖಂಡ ನಿರಂತರ ಭಜನ ಯಜ್ಞ ಹಮ್ಮಿಕೊಂಡಿರುವುದು ಪ್ರಶಂಸನೀಯ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತೀ ವರ್ಷ ಭಜನ ಕಮ್ಮಟ ನಡೆಯುತ್ತಿದ್ದು ಉಡುಪಿಯ ಭಜನಾಸಕ್ತ ಭಕ್ತರು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟ, ದಾಸ ಸಾಹಿತ್ಯ ಪ್ರಾಜೆಕ್ಟ್ ನೇತೃತ್ವದಲ್ಲಿ ರಥಬೀದಿಯ ಸುತ್ತ ಭಜನ ಪ್ರದಕ್ಷಿಣೆ, ಕುಣಿತ ಭಜನಾ ಸೇವೆ ನಡೆಯಿತು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ಶ್ರೀಕೃಷ್ಣ ಮಠದ ಪಿಆರ್‌ಒ ಶ್ರೀಶ ಕಡೆಕಾರ್, ನಿರಂತರ ಭಜನೆಯ ಸಂಚಾಲಕ ಗುರುರಾಜ್ ಆಚಾರ್ಯ ಕಂಪ್ಲಿ, ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕ ಮಂಜುನಾಥ್ ಧರ್ಮಸ್ಥಳ, ಜನಜಾಗೃತಿ ವೇದಿಕೆಯ ಉಡುಪಿ ವಲಯಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಚಂದ್ರಹಾಸ್, ಕಿಶೋರ್ ಕುಮಾರ್, ಅಮಿತಾ ಗಿರೀಶ್, ವಜ್ರಾಕ್ಷಿ, ಭಜನ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.