ಸಾಗರ: ಒಳ್ಳೆಯ ವಿಚಾರಧಾರೆಗಳನ್ನು ಒಳಗೊಂಡ ಪ್ರವಚನ ಕಾರ್ಯಕ್ರಮಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಾರೆ. ಕೇಳಿದ್ದರಲ್ಲಿಯೂ ಕೆಲವನ್ನು ಅರ್ಥೈಸಿಕೊಳ್ಳುತ್ತಾರೆ. ಆದರೆ ಬಹುಪಾಲು ಅಂಶಗಳನ್ನು ಅಳವಡಿಸಿಕೊಳ್ಳುವುದರಲ್ಲಿ ನಾವು ಹಿಂದೆ ಬೀಳುತ್ತಿದ್ದೇವೆ ಎಂದು ಹಿರಿಯ ಚಲನಚಿತ್ರ ನಟ ಶಿವರಾಂ ತೀವ್ರ ಬೇಸರ ವ್ಯಕ್ತಪಡಿಸಿದರು.
ನಗರದ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ಮಂಗಳವಾರ ಸತ್ಯದರ್ಶನ ಖ್ಯಾತಿಯ ಡಾ| ಪಾವಗಡ ಪ್ರಕಾಶ ರಾವ್ ಅವರ ಸತ್ಯಪ್ರಕಾಶ-2 ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸಂಸ್ಕೃತಿ ಸಂಸ್ಕಾರಗಳನ್ನು ಉಪದೇಶಿಸುವ ಪ್ರವಚನ ಕಾರ್ಯಕ್ರಮಗಳಲ್ಲಿ ಅದೇ ವ್ಯಕ್ತಿಗಳು ಪಾಲ್ಗೊಳ್ಳುವುದು ಮತ್ತು ಅವರೇ ಮತ್ತೆ ಮತ್ತೆ ಟಿಪ್ಪಣಿ ಬರೆದುಕೊಳ್ಳುವುದು
ವಿಫಲತೆಯ ಲಕ್ಷಣ. ಇಂತಹ ಅರಿವನ್ನು ಕಿರಿಯರಿಗೆ ವರ್ಗಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದೇವೆ ಎಂದು ತಿಳಿಸಿದರು.
ವಿದೇಶಿಯರು ನಮ್ಮಲ್ಲಿ ಬಂದು ಇಲ್ಲಿಯೇ ಉಳಿದು ಪ್ರವಚನ, ಸಂಸ್ಕೃತ, ಯೋಗಧ್ಯಾನಗಳನ್ನು ಆಲಿಸಿ, ಗಮನವಿಟ್ಟು ಕೇಳಿ ಮನನ ಮಾಡಿಕೊಳ್ಳುತ್ತಾರೆ. ತಾವು ಕಲಿತಿದ್ದನ್ನು ತಮ್ಮ ದೇಶದಲ್ಲಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ಆದರೆ ಭಾರತೀಯರಾದ ನಾವು ಕೇಳಿದ್ದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಅದನ್ನು ಮರೆತು ಬಿಡುತ್ತೇವೆ. ಇದರಿಂದಾಗಿ ಸಂಸ್ಕೃತಿ, ಸಂಪ್ರದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದರು.
ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವ ಕೆಲವರು ಸಂಶೋಧನೆಯ ಹೆಸರಿನಲ್ಲಿ ಇದೆಯೆನ್ನುವುದನ್ನು ಇಲ್ಲ ಎಂದು ತಿರುಚಿ ಪ್ರತಿಪಾದಿಸುವುದನ್ನೇ ಸಂಶೋಧನೆ ಎಂದುಕೊಳ್ಳುತ್ತಿದ್ದಾರೆ. ಸಂಶೋಧನೆ ಹೆಸರಿನಲ್ಲಿ ಯಾವುದನ್ನು ತಿರುಚುವ ಕೆಲಸ ಮಾಡಬಾರದು. ಇದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಮಾಡಿದ ಅಪಚಾರವಾಗುತ್ತಿದೆ ಎಂದು ಅಭಿಪ್ರಾಯಿಸಿದರು.
ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ. ಆದರೆ ಕನ್ನಡ ಭಾಷೆ ಧಾರಾವಾಹಿ, ಚಲನಚಿತ್ರ, ರಾಜಕಾರಣಿಗಳ ಮಾತಿನಲ್ಲಿ ಅಪಭ್ರಂಶಗೊಳ್ಳುತ್ತಿದೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದ ಬಗ್ಗೆ ಮಾತನಾಡುವವರು ನಂತರ ಮೌನವಾಗಿ
ಬಿಡುತ್ತಾರೆ. ಈಗ ನಡೆಯುತ್ತಿರುವುದು ಕರ್ನಾಟಕದ ರಾಜ್ಯೋತ್ಸವ, ಕನ್ನಡದ್ದಲ್ಲ. ಕನ್ನಡ ಪರರಲ್ಲಿ ಉತ್ಸಾಹವಿದೆ. ಆದರೆ ಕನ್ನಡ ರಾಜ್ಯೋತ್ಸವದ ನಿಜವಾದ ಕಲ್ಪನೆ ಜನರಲ್ಲಿ ಮೂಡಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಂಕರಮಠದ ಅಶ್ವಿನಿಕುಮಾರ್, ಸತ್ಯದರ್ಶನ ಕೃತಿಯ ನಂತರ ಡಾ| ಪಾವಗಡ ಪ್ರಕಾಶರಾವ್ ಅವರ ಪಾಂಡಿತ್ಯದ ನೆರಳಿನಲ್ಲಿ ಹೊರಗೆ ಬಂದ ಸತ್ಯಪ್ರಕಾಶ ಕೃತಿ ಹೆಚ್ಚು ಜನರಿಗೆ ತಲುಪಬೇಕು. ಕೃತಿಯಲ್ಲಿರುವ ಬದುಕಿನ ಸಾರವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡಾಗ ಉತ್ತಮ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸತ್ಯಪ್ರಕಾಶ
ಕೃತಿ ಜ್ಞಾನಸುಧೆ ವಿಸ್ತರಿಸುವ ಒಂದು ದೀವಿಗೆಯಾಗಿದೆ ಎಂದು ಹೇಳಿದರು. ಅಗಡಿ ಆನಂದವನ ಮಠದ ವಿಶ್ವನಾಥ ಸ್ವಾಮೀಜಿ, ಸವದತ್ತಿ ಬಾಬು ಸುಂದರೇಶ್ ದೀಕ್ಷಿತ್ ಇದ್ದರು. ಪ್ರಭಾವತಿ ಎಸ್.ಕೆ. ಪ್ರಾರ್ಥಿಸಿದರು. ರವೀಂದ್ರ ಪುಸ್ತಕಾಲಯದ ವೈ.ಎ. ದಂತಿ ಸ್ವಾಗತಿಸಿದರು. ಬಿ.ಟಿ. ಅರುಣ ಬೆಂಕಟವಳ್ಳಿ ನಿರೂಪಿಸಿದರು.