ಬೆಳಗಾವಿ: ವಿದ್ಯಾರ್ಥಿಗಳಿಗೆ ಅಧ್ಯಯನದೊಂದಿಗೆ ಪಠ್ಯೇತರ ಚಟುವಟಿಕೆ ಅತ್ಯಗತ್ಯ. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆಗೆ ಮಹತ್ವದ ಸ್ಥಾನವಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶಿವಾನಂದ ಹೊಸಮನಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಶನಿವಾರ ಆಯೋಜಿಸಲಾಗಿದ್ದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ, ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕ್ರೀಡೆಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಸುಮಾರು 40 ವರ್ಷಗಳಿಂದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಕ್ರೀಡೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ ಆಗಬೇಕು. ಕ್ರೀಡೆಯನ್ನು ಅಭಿಮಾನ, ಪ್ರೀತಿಯಿಂದ ಬಯಸಿದರೆ ಅದು ನಮಗೆ ಶ್ರೇಷ್ಠವಾದ ಜೀವನವನ್ನು ನೀಡುತ್ತದೆ. ಕ್ರೀಡೆಯಲ್ಲಿ ತುಂಬಿದ ಯೌವನ, ತೇಜಸ್ಸು ಮುಪ್ಪಾದರೂ ಮುಗಿಯುವುದಿಲ್ಲ ಎಂದು ಹೇಳಿದರು.
ಸಕಲವಾದ ಕಾಯಕವನ್ನು ಹೊಂದಬೇಕಾದರೆ ಕ್ರೀಡೆ ಅವಶ್ಯ. ಓದಿನ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಭಾರತ ಹೆಸರು ಅಂತರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಬೇಕು. ಮಲಪ್ರಭಾ ಜಾಧವ ಭಾರತ ದೇಶದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಗಿದ್ದಾರೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಪ್ರತಿಯೊಬ್ಬರಲ್ಲಿ ಕ್ರೀಡಾ ಪತ್ರಿಭೆ ಅಡಗಿದ್ದು, ಅಂತಹ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕು ಎಂದರು.
ಕುಲಸಚಿವ ಪ್ರೊ| ಸಿದ್ದು ಅಲಗೂರ, ಡಾ| ಕಾಂತರಾಜು ಕೆ., ಮಂಜುನಾಥ ಕೆ., ನಾಗರತ್ನಾ ಪರಾಂಡ್ಯೆ ಹಾಗೂ ಶಿಕ್ಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.