Advertisement

ಮಳೆಗಾಲ ಸನ್ನಿಹಿತ; ಪ್ರಗತಿಯ ಕಾಮಗಾರಿ ಆಗಬೇಕಿದೆ ಪೂರ್ಣ

03:39 PM May 22, 2023 | Team Udayavani |

ಮಹಾನಗರ: ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಪ್ರಸ್ತುತ ನಗರದೆಲ್ಲೆಡೆ ರಸ್ತೆ, ಚರಂಡಿ, ಫುಟ್‌ಪಾತ್‌ ಕಾಮಗಾರಿಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಮಳೆಗೆ ಮುನ್ನ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಯಾವುದೇ ಸಮಸ್ಯೆ ಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಬಂಧಪಟ್ಟ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡವರು ಮತ್ತು ಮಹಾನಗರ ಪಾಲಿಕೆಯ ಮೇಲಿದೆ.

Advertisement

ಒಮ್ಮೆ ಮಳೆ ಶುರುವಾದರೆ ಎಡೆ ಬಿಡದೆ ಸುರಿಯುವುದರಿಂದ ರಸ್ತೆಯಲ್ಲೇ ನೀರಿನ ಹರಿಯುವಿಕೆ ಎಲ್ಲೆಡೆ ಕಂಡು ಬರುತ್ತದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದು ಕೂಡ ಸಾಮಾನ್ಯ. ರಸ್ತೆ ಪಕ್ಕದಲ್ಲಿ ಗುಂಡಿಗಳಿದ್ದರೆ ಅದರಲ್ಲೂ ನೀರು ತುಂಬಿಕೊಳ್ಳುವುದರಿಂದ ಯಾವುದು ರಸ್ತೆ, ಯಾವುದು ಗುಂಡಿ ಎಂದು ತಿಳಿಯದೆ ಜನರು, ಬಿದ್ದು ಗಾಯಗೊಳ್ಳುವ, ಪ್ರಾಣಾ ಪಾಯ ಸಂಭವಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಮುಂದಕ್ಕೆ ರಸ್ತೆಯಲ್ಲಿ, ರಸ್ತೆ ಬದಿಯಲ್ಲಿ ಗುಂಡಿಗಳನ್ನು ಅಗೆಯದೆ ಪ್ರಗತಿಯಲ್ಲಿ ರುವ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕಿದೆ. ಹಿಂದಿನ ವರ್ಷ ಗಳಿಗೆ ಹೋಲಿಸಿದರೆ, ಈ ಬಾರಿ ಇನ್ನೂ ಸರಿಯಾಗಿ ಬೇ ಸಗೆ ಮಳೆ ಬಂದಿಲ್ಲ. ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಕಾಲಾವಕಾಶವೂ ಸಿಕ್ಕದೆ ಕಳೆದ ವರ್ಷ ಈ ವೇಳೆಗಾಗಲೇ ಪೂರ್ವ ಮುಂಗಾರು ಮಳೆಯ ಆರಂಭವಾಗಿತ್ತು. ಆದ್ದರಿಂದ ಪಾಲಿಕೆ ತತ್‌ಕ್ಷಣವೇ ಈ ಕುರಿತು ಕ್ರಮ ವಹಿಸಬೇಕಾದ ಅಗತ್ಯವಿದೆ.

ಎಲ್ಲೆಲ್ಲಿ ನಡೆಯುತ್ತಿದೆ ಕಾಮಗಾರಿ
ಗೈಲ್‌ ಗ್ಯಾಸ್‌ ಪೈಪ್‌ಲೈನ್‌, ಜಲಸಿರಿ, ಸೇರಿದಂತೆ ವಿವಿಧ ಯೋಜನೆಗಳಿಗಾಗಿ ರಸ್ತೆಯನ್ನೇ ಅಗೆಯಲಾಗಿದ್ದು, ಕೆಲವೆಡೆ ರಸ್ತೆ ಬದಿಯಲ್ಲಿ ಗುಂಡಿಗಳನ್ನು ತೋಡಿ ಅವುಗಳನ್ನು ಮುಚ್ಚದೆ ಬಿಡಲಾಗಿದೆ. ಮಲ್ಲಿಕಟ್ಟೆ ಮಾರ್ಕೆಟ್‌ ಬಳಿ, ನಂತೂರು ಬಸ್‌ ತಂಗುದಾಣದ ಹಿಂಭಾಗ, ಫಳ್ನೀರ್‌ ಕಂಕನಾಡಿ ರಸ್ತೆ, ವೆಲೆನ್ಸಿಯಾ ರಸ್ತೆ, ಅಳಕೆ ಮಾರುಕಟ್ಟೆ ಮುಂಭಾಗದ ಮುಖ್ಯರಸ್ತೆ ಸಹಿತ ವಿವಿಧೆಡೆ ಪ್ರಸ್ತುತ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ಕೆಲವು ದೊಡ್ಡ ಮಟ್ಟದ ಕಾಮಗಾರಿಗಳಾಗಿದ್ದು, ಮಳೆ ಆರಂಭಕ್ಕೆ ಮುನ್ನ ಪೂರ್ಣಗೊಳಿಸಲು ಸಾಧ್ಯವಿಲ್ಲ.

ಜಲ್ಲಿ-ಮರಳು ರಸ್ತೆಬದಿಯಲ್ಲಿದೆ
ಖಾಸಗಿಯೂ ಸಹಿತ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವವರು ರಸ್ತೆ ಬದಿಯಲ್ಲಿ ಮರಳು, ಜಲ್ಲಿ ರಾಶಿಗಳನ್ನು ಅಲ್ಲಲ್ಲಿ ಹಾಕಿರುವುದು ಕಂಡು ಬರುತ್ತಿದೆ. ಮಳೆಗೆ ಇವೆಲ್ಲ ರಸ್ತೆ ಪಾಲಾಗುವುದರಲ್ಲಿ ಅನುಮಾನವಿಲ್ಲ. ಇದರಿಂದ ಸಮಸ್ಯೆ ಅನುಭವಿಸುವವರು ದ್ವಿಚಕ್ರ ವಾಹನ ಸವಾರರು. ವಾಹನ ಸ್ಕಿಡ್‌ ಆಗಿ ಬೀಳುವ ಸಾಧ್ಯತೆಯೇ ಅಧಿಕ. ಆದ್ದರಿಂದ ರಸ್ತೆ ಬದಿಯಲ್ಲಿ ಹಾಕಿರುವ ಮರಳು, ಜಲ್ಲಿ ರಾಶಿಗಳನ್ನು ತಕ್ಷಣ ತೆರವುಗೊಳಿಸಂತೆ ಪಾಲಿಕೆ ಸೂಚನೆ ನೀಡಬೇಕಿದೆ.

ಸಮಸ್ಯೆಯಾಗದಂತೆ ವಿಶೇಷ ನಿಗಾ
ಮಳೆ ಆರಂಭವಾಗುವುದಕ್ಕೆ ಮುನ್ನ ಪ್ರಸ್ತುತ ಕೈಗೊಳ್ಳಲಾಗುತ್ತಿರುವ ರಸ್ತೆ, ಚರಂಡಿ, ಫುಟ್‌ಪಾತ್‌ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ರಸ್ತೆ ಬದಿಯಲ್ಲಿ ಗುಂಡಿಗಳನ್ನು ಹಾಗೇ ಬಿಡದಂತೆ, ಕಾಮಗಾರಿಗಳನ್ನು ಅರೆ ಬರೆಯಾಗಿ ಮಾಡದಂತೆಯೂ ನಿರ್ದೇಶನ ನೀಡಲಾಗಿದೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಾಗದಂತೆ ವಿಶೇಷ ನಿಗಾವಹಿಸಲಾಗುವುದು.
-ಜಯಾನಂದ ಅಂಚನ್‌,
ಪಾಲಿಕೆ, ಮೇಯರ್‌

Advertisement

- ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next