Advertisement

ಕೈಗಾರಿಕೆಗಳು ನೆಲೆನಿಂತ ಪ್ರದೇಶದಲ್ಲಿ ಮಳೆಗಾಲವೇ ಸವಾಲು !

11:46 PM May 29, 2020 | Team Udayavani |

ಈ ಬೇಸಗೆಯಲ್ಲಿ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಬಹುತೇಕ ದಿನಗಳನ್ನು ಕೋವಿಡ್ 19 ಲಾಕ್‌ಡೌನ್‌ ನುಂಗಿ ಹಾಕಿದೆ. ನಿರ್ಬಂಧಗಳು ತೆರವಾಗಿ ಜನಜೀವನ ಸಹಜತೆಗೆ ಬರುತ್ತಿರುವ ಸಮಯವಿದು. ಇನ್ನುಳಿದ ಕೆಲವೇ ದಿನಗಳಲ್ಲಿ ಮಳೆಗಾಲದ ಸಿದ್ಧತೆಗಳು ಮುಗಿಯಬೇಕು ಎಂಬ ಆಗ್ರಹ ಈ ಸರಣಿಯ ಹಿಂದಿದೆ.

Advertisement

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಟ್ಟು 60 ವಾರ್ಡ್‌ಗಳ ಪೈಕಿ ಮೊದಲ 15 ವಾರ್ಡ್‌ ಗಳು ಮಂಗಳೂರಿನ ಆರ್ಥಿಕ ಹೆಬ್ಟಾಗಿಲು ಎಂದೇ ಬಿಂಬಿತವಾಗಿರುವ ಸುರತ್ಕಲ್‌ ಪ್ರದೇಶಕ್ಕೆ ಹೊಂದಿಕೊಂಡಿವೆ.

ವಾಡಿಕೆಯಂತೆ ಮಳೆಗಾಲ ಪ್ರಾರಂಭಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿದ್ದು, ಮಹಾನಗರ ಪಾಲಿಕೆ ಕೂಡ ಎಲ್ಲ ವಾರ್ಡ್‌ಗಳಲ್ಲಿ ಈ ಮಳೆಗಾಲದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದುಗೊಳ್ಳಬೇಕಿದೆ. ಅದರಂತೆ ಸುರತ್ಕಲ್‌ ಸುತ್ತಲಿನ 15 ವಾರ್ಡ್‌ಗಳಲ್ಲಿ ಕೋವಿಡ್ 19 ಲಾಕ್‌ಡೌನ್‌ ಸಮಸ್ಯೆ ಮಧ್ಯೆಯೂ ಮಳೆಗಾಲ ಎದುರಿಸುವ ಸವಾಲಿಗೆ ಸಿದ್ಧತೆ ನಡೆಸಲಾಗುತ್ತಿದೆ.

“ಈ ಬಾರಿ ಇಷ್ಟೂ ವಾರ್ಡ್‌ಗಳಲ್ಲಿ ಸಮಸ್ಯೆ ಆಗದು’ ಎಂದು ಪಾಲಿಕೆ ಹೇಳುತ್ತಿದ್ದರೂ, “ಮಳೆಗಾಲ ಈ ಬಾರಿ ಯಾವುದೇ ಸಮಸ್ಯೆ-ಅನಾಹುತ ಸೃಷ್ಟಿಸದಿರಲಿ’ ಎನ್ನುವುದು ವಾರ್ಡ್‌ ನಿವಾಸಿಗಳ ನಿರೀಕ್ಷೆಯಾಗಿದೆ.

ಹೂಳು ತೆಗೆಯುವ ಕಾಮಗಾರಿ
ಈ ಭಾಗದಲ್ಲಿ ಮುಖ್ಯ 3 ರಾಜ ಕಾಲುವೆಗಳಿವೆ. ಗಣೇಶಪುರದಿಂದ ಚೊಕ್ಕಬೆಟ್ಟು, ಮುಂಚೂರು ಆಗಿ ನಂದಿನಿ ಸೇರುವ ಒಂದು ರಾಜಕಾಲುವೆಯಾದರೆ, ಹೊಸಬೆಟ್ಟು, ಚಿತ್ರಾಪುರ, ಮೀನಕಳಿಯ ಮೂಲಕ ನದಿ ಸೇರುವ ಇನ್ನೊಂದು ರಾಜಕಾಲುವೆಯೂ ಇದೆ. ಜತೆಗೆ ಕೈಗಾರಿಕಾ ಪ್ರದೇಶಗಳಿಂದ ಬಂದು ಎಚ್‌ಪಿಸಿಎಲ್‌ ಮೂಲಕ ಕುಕ್ಕಾಡಿ ಮೂಲಕ ನದಿ ಸೇರುವ ರಾಜಕಾಲುವೆಯಿದೆ. ಈ ಮೂರರ ಹೂಳು ಸಮರ್ಪಕವಾಗಿ ಮಳೆಗಾಲಕ್ಕೂ ಮುನ್ನವೇ ತೆಗೆದರೆ ಸಮಸ್ಯೆ ಇರಲಾರದು. ಆದರೆ ಲಾಕ್‌ಡೌನ್‌ನಿಂದಾಗಿ ಕಾಮಗಾರಿ ತಡವಾಗಿ ಆರಂಭವಾಗಿದೆ. ಸಮರ್ಪಕವಾಗಿ ಹೂಳೆತ್ತಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ. ಪಾಲಿಕೆ ಅಧಿಕಾರಿಗಳು ಹೇಳುವಂತೆ ಸಮರ್ಪಕವಾಗಿ ಕೆಲಸ ಸಾಗುತ್ತಿದ್ದು, ವಾರದಿಂದ ಈ ಕೆಲಸ ಪ್ರಗತಿಯಲ್ಲಿದೆ. ನೀರು ನಿಲ್ಲುವ ಮೊದಲೇ ಹೂಳು ತೆಗೆಯಲಾಗುತ್ತದೆ’ ಎಂಬುದು ಅವರ ಅಭಿಪ್ರಾಯ.

Advertisement

ಸುರತ್ಕಲ್‌ನ ಸೂರಜ್‌ ಹೊಟೇಲ್‌ ಮುಂಭಾಗದ ತೋಡಿನ ಹೂಳು ಸಮ ರ್ಪಕವಾಗಿ ತೆಗೆಯದ ಕಾರಣಕ್ಕಾಗಿ ಇಲ್ಲಿನ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ಸಾಮಾನ್ಯವಾಗಿದೆ. ಈ ಬಾರಿಯೂ ಸಮಸ್ಯೆ ಕಾಡುವ ಮುನ್ಸೂಚನೆಯಿದೆ.

ಮಳೆಗಾಲದಲ್ಲಿ ನಿತ್ಯ ಸಮಸ್ಯೆ
ಕಾನಕಟ್ಲ ಆದ ಬಳಿಕ ಪಡ್ರೆಗೆ ಸೇರುವ ಕಾಲುವೆಯ ತಡೆಗೋಡೆ ಅರ್ಧಕ್ಕೆ ನಿಂತು ಮಳೆಗಾಲಕ್ಕೆ ಮತ್ತೊಂದು ಸಮಸ್ಯೆ ಆಗುವ ಸಾಧ್ಯತೆಯಿದೆ.ಇನ್ನು ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ಬರುವ ಮಳೆನೀರು ಹರಿದು ಹೋಗಲು ಬಿಪಿಸಿಎಲ್‌ ಭಾಗದಲ್ಲಿ ತೋಡಿ ನಲ್ಲಿರುವ ಎಪಿಎಂಸಿಯ ಕೆಲವು ಪೈಪ್‌ಗ್ಳು ಸಮಸ್ಯೆ ಸೃಷ್ಟಿಸುತ್ತಿದೆ. ಹೀಗಾಗಿ ಇಲ್ಲಿ ಮಳೆಗಾಲದಲ್ಲಿ ನಿತ್ಯ ಸಮಸ್ಯೆ ಇದೆ. ಜತೆಗೆ ಮೊನ್ನೆಯ ಮಳೆಗೆ ಎಪಿಎಂಸಿ ಒಳಗಡೆ ನೀರು ಬಂದಿರುವುದನ್ನು ಕೂಡ ನೆನಪಿಸಬಹುದು.

ಸುರತ್ಕಲ್‌ನ ಮುಂಚೂರು, ಅಗರ ಮೇಲು ವ್ಯಾಪ್ತಿಯಲ್ಲಿ ಮಳೆ ನೀರು ನಿಂತು ಸಮಸ್ಯೆಯಾಗುವುದು ಸಾಮಾನ್ಯ. ಕೆಐಎಡಿಬಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿಯೂ ಮಳೆನೀರು ನಿಲ್ಲುವ ಸಮಸ್ಯೆ ಬಹಳಷ್ಟಿದೆ. ಇಲ್ಲಿ ಈ ವರ್ಷವೂ ಜೋರು ಮಳೆಯಾದರೆ ಮತ್ತೆ ಸಮಸ್ಯೆ ಯಾಗುವುದು ನಿಶ್ಚಿತ. ಏಕೆಂದರೆ, ಒಂದು ಮಳೆ ಹೋದ ಬಳಿಕ ಇಲ್ಲಿ ಹೇಳಿ ಕೊಳ್ಳುವ ಕೆಲಸ ಆಗಿಲ್ಲ ಎಂಬುದು ವಾಸ್ತವ.

ಹೆದ್ದಾರಿಯಲ್ಲಿ ಚರಂಡಿ ಸಮಸ್ಯೆ
ಉದ್ಯಮ ವಲಯ ವ್ಯಾಪಿಸಿರುವ ಬೈಕಂಪಾಡಿ, ಪಣಂಬೂರು ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ಎಲ್ಲೂ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆನೀರು ರಸ್ತೆಯಲ್ಲಿಯೇ ನಿಲ್ಲುವ ಸಮಸ್ಯೆ ಈ ಬಾರಿಯೂ ಮುಂದುವರಿಯುವ ಸಾಧ್ಯತೆಯಿದೆ. ಇರುವ ಚರಂಡಿಯು ಒಂದಕ್ಕೊಂದು ಸಂಪರ್ಕವಿಲ್ಲದೆ ಅರ್ಧರ್ಧಲ್ಲೇ ಬಾಕಿಯಾಗಿದೆ. ಅದರಲ್ಲಿಯೂ ಪಣಂಬೂರಿನಿಂದ ಎಂಸಿಎಫ್‌ವರೆಗಿನ ಹೆದ್ದಾರಿ ಬದಿಯಲ್ಲಿ ಸೂಕ್ತ ಚರಂಡಿ ಇಲ್ಲದೆ ಮಳೆನೀರು ರಸ್ತೆಯಲ್ಲೇ ನಿಂತು ಸವಾರರಿಗೆ ಸಂಕಷ್ಟದ ದಾರಿ ಎಂದೇ ಗುರುತಿಸಿಕೊಂಡಿದೆ. ಈ ಬಾರಿಯೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದ್ದ ಚರಂಡಿಯ ಮಣ್ಣು, ಕಸ ತೆಗೆಯದೆ ಅವುಗಳೂ ಅಪಾಯದ ಸೂಚನೆ ನೀಡುತ್ತಿವೆ.

ಬೈಲಾರೆಯ ನಿತ್ಯದ ಗೋಳು
ಬೈಕಂಪಾಡಿ, ಪಣಂಬೂರು, ಸೇರಿದಂತೆ 5-6 ವಾರ್ಡ್‌ಗಳ ನೀರು ಸೇರಿಕೊಂಡು “ಚಿತ್ರಾಪುರ ಚನಲ್‌’ ಮೂಲಕವಾಗಿ ನದಿ ಸೇರುತ್ತದೆ. ಈ ದಾರಿಯಲ್ಲಿ ಕಾಲುವೆಯ ಸುತ್ತಳತೆ ಅಲ್ಲಲ್ಲಿ ಹೆಚ್ಚು-ಕಡಿಮೆ ಆಗಿದೆ. ಕೆಲವೆಡೆ ಒತ್ತುವರಿಯೂ ಆಗಿದೆ. ಪರಿಣಾ ಮವಾಗಿ ಬೈಲಾರೆ ಎಂಬ ಪ್ರದೇಶ ಮಳೆಗಾಲದ ಸಮಯದಲ್ಲಿ ಸಮಸ್ಯೆಯ ಕೂಪ ವಾಗುತ್ತದೆ. ಪ್ರತೀ ವರ್ಷದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಈ ಬಾರಿಯ ಮಳೆಗೂ ಇಲ್ಲಿ ಮತ್ತೆ ಸಮಸ್ಯೆ ಕಟ್ಟಿಟ್ಟಬುತ್ತಿ.

14 ವಾರ್ಡ್‌ಗಳು; ಹೊಸ ಕಾರ್ಪೊರೇಟರ್‌ಗಳು!
1. ಸುರತ್ಕಲ್‌ ಪಶ್ಚಿಮ, 2. ಸುರತ್ಕಲ್‌ ಪೂರ್ವ, 3. ಕಾಟಿಪಳ್ಳ ಪೂರ್ವ, 4. ಕಾಟಿಪಳ್ಳ ಕೃಷ್ಣಾಪುರ, 5. ಕಾಟಿಪಳ್ಳ ಉತ್ತರ, 6. ಇಡ್ಯಾ ಪೂರ್ವ, 7. ಇಡ್ಯಾ ಪಶ್ಚಿಮ, 8. ಹೊಸಬೆಟ್ಟು, 9. ಕುಳಾಯಿ, 10. ಬೈಕಂಪಾಡಿ, 11. ಪಣಂಬೂರು ಬೆಂಗ್ರೆ, 12. ಪಂಜಿಮೊಗರು. 13. ಕುಂಜತ್ತಬೈಲು ಉತ್ತರ, 14. ಮರಕಡ, 15. ಕುಂಜತ್ತಬೈಲು ದಕ್ಷಿಣ. ಇಷ್ಟು ವಾರ್ಡ್‌ಗಳ ಪೈಕಿ ಒಂದೆರಡು ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದ ವಾರ್ಡ್‌ಗಳಲ್ಲಿ ಹೊಸಬರು ಕಾರ್ಪೊರೇಟರ್‌ ಆಗಿದ್ದಾರೆ. ಪಾಲಿಕೆ ಸದಸ್ಯರಾದ ಬಳಿಕ ಅವರಿಗೆ ಈ ಮಳೆಗಾಲ ಮೊದಲ ಅನುಭವ. ಹೀಗಾಗಿ ಮಳೆಗಾಲದ ಮುನ್ನ ತುರ್ತು ಕಾಮಗಾರಿಗಳಿಗೆ ಈ ವಾರ್ಡ್‌ಗಳ ಸದಸ್ಯರು ಮೊದಲ ಆದ್ಯತೆ ನೀಡುವ ಜತೆಗೆ ಪರಿಸ್ಥಿತಿ ಸಮರ್ಥವಾಗಿ ಎದುರಿಸುವುದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಬೇಕಾದ್ದು ಅವಶ್ಯ.

ಮುನ್ನೆಚ್ಚರಿಕೆ ವಹಿಸಲಾಗಿದೆ
ಮಳೆಗಾಲದ ಸಂದರ್ಭದಲ್ಲಿ ಮಂಗಳೂರಿನ ಎಲ್ಲ ವಾರ್ಡ್‌ಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 1ರಿಂದ 15 ವಾರ್ಡ್‌ ಗಳ ಪೈಕಿ ಎಲ್ಲ ಕಡೆಯಲ್ಲಿ ರಾಜಕಾಲುವೆಯ ಹೂಳೆತ್ತುವ ಕೆಲಸ ಆರಂಭಿಸಲಾಗಿದೆ. ಈ ಬಾರಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
 - ಜಾನಕಿ ಯಾನೆ ವೇದಾವತಿ, ಉಪಮೇಯರ್‌ ಮಂಗಳೂರು ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next