Advertisement

ಹೋದ ಮಳೆ ಮತ್ತೆ ಬಂತು! ಚೆನ್ನೈ ಹಾಗೂ ಸುತ್ತಲಿನ ನಗರಗಳಿಗೆ ರೆಡ್‌ ಅಲರ್ಟ್‌ ಘೋಷಣೆ

07:31 PM Nov 17, 2021 | Team Udayavani |

ಚೆನ್ನೈ: ಈಗಾಗಲೇ ವರುಣನ ಆರ್ಭಟದಿಂದ ತತ್ತರಿಸಿರುವ ತಮಿಳುನಾಡಿನ ರಾಜಧಾನಿ ಚೆನ್ನೈ ಹಾಗೂ ಸುತ್ತಲಿನ ಜಿಲ್ಲೆಗಳಿಗೆ ಮತ್ತೆ ನಾಲ್ಕು ದಿನಗಳ ಕಾಲ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

ಬುಧವಾರ ಹೊರಬಿದ್ದಿರುವ ಈ ಮುನ್ನಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಚೆನ್ನೈ ಮಾತ್ರವಲ್ಲದೆ, ಕಾಂಚೀಪುರಂ, ತಿರುವಳ್ಳೂರ್‌, ರಾಣಿಪೇಟೆ ಜಿಲ್ಲೆಗಳಲ್ಲಿ  ಭಾರಿ ಮಳೆ ಸುರಿಯಲಿದೆ ಎಂದು ಹೇಳಿದೆ. ಹೀಗಾಗಿ, ಈ ಜಿಲ್ಲೆಗಳ ಸ್ಥಳೀಯಾಡಳಿತಗಳು ಹಾಗೂ ಗ್ರೇಟರ್‌ ಚೆನ್ನೈ ಮಹಾನಗರ ಪಾಲಿಕೆಯು ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕೆಂದು ತಮಿಳುನಾಡು ಸರ್ಕಾರ ಸೂಚನೆ ನೀಡಿದೆ.

ಐಎಡಿ ಹೇಳಿದ್ದೇನು?
ಮುನ್ನೆಚ್ಚರಿಕೆ ನೀಡಲಾಗಿರುವ ಪ್ರದೇಶಗಳಲ್ಲಿ ನ. 17ರ ಬೆಳಗ್ಗೆಯಿಂದ ಆನಂತರದ 24 ಗಂಟೆಗಳಲ್ಲಿ ಸಾಧಾರಣದಿಂದ ಭಾರಿಯಾಗಿ ಮಳೆಯಾಗಲಿದೆ. 48 ಗಂಟೆಗಳಲ್ಲಿ ಅತಿಯಾದ, ಅಬ್ಬರದ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

ಚೆನ್ನೈನ ಕೇಂದ್ರ ಹಾಗೂ ಪಶ್ಚಿಮ ಭಾಗಗಳು ಹೆಚ್ಚಿನ ಮಳೆ ಬಾಧೆಗೆ ತುತ್ತಾಗಲಿವೆ ಎಂದಿರುವ ಐಎಂಡಿ-ಚೆನ್ನೈನ ಮುಖ್ಯಸ್ಥರಾದ ಡಾ. ಎಸ್‌. ಬಾಲಸುಬ್ರಹ್ಮಣ್ಯಂ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಮನವಿ ಮಾಡಿದ್ದಾರೆ.

ಮುಂದಿನ ನಾಲ್ಕು ದಿನಗಳಲ್ಲಿ ತಮಿಳುನಾಡಿನ ತಿರುವಣ್ಣಾಮಲೈ, ಕಲ್ಲಕುರಿಚಿ, ಸೇಲಂ, ತಿರುಚನಾಪಳ್ಳಿ, ಕರೂರು, ತಂಜಾವೂರು, ತಿರುವರೂರ್‌, ಪುದುಕೋಟ್ಟೈ, ದಿಂಡಿಗುಲ್‌, ಮಧುರೈ, ಥೇನಿ, ಶಿವಗಂಗಾ, ವಿರುಧು ನಗರ್‌ ಹಾಗೂ ತೆಂಕಾಶಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

Advertisement

ಸದ್ಯಕ್ಕೆ ಪ್ರತಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಸಾಗುತ್ತಿರುವ ಮಳೆ ಮಾರುತಗಳು, ಮುಂದಿನ ನಾಲ್ಕು ದಿನಗಳಲ್ಲಿ 50 ಕಿ.ಮೀ. ಅಥವಾ 60 ಕಿ.ಮೀ. ವೇಗವನ್ನು ಪಡೆದುಕೊಳ್ಳಬಹುದು. ಹಾಗಾಗಿ, ಬಿರುಸಾದ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮಿಮಿ ಚಕ್ರವರ್ತಿಯ ಫೋನ್‌ ಗ್ಯಾಲರಿಯೇ ಮಂಗಮಾಯ!

ಚೆನ್ನೈನಲ್ಲಿ ಧಾರಾಕಾರ ಮಳೆ
ಐಎಂಡಿಯ ಮುನ್ನೆಚ್ಚರಿಕೆಯ ನಡುವೆಯೇ ಚೆನ್ನೈನಲ್ಲಿ ಬುಧವಾರದಂದು ಭಾರೀ ಮಳೆಯಾಗಿದೆ. ಕೃಷ್ಣಗಿರಿ ಜಿಲ್ಲೆಯ ಬರಗೂರಿನಲ್ಲಿ ಭೂಕುಸಿತ ಉಂಟಾಗಿದೆ. ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. ಆದರೆ, ಬರಗೂರಿನಿಂದ ಮುಂದಕ್ಕೆ 32 ಹಳ್ಳಿಗಳಿಗೆ ಇದ್ದ ಭೂ ಸಂಪರ್ಕ ತುಂಡಾಗಿದೆ. ಬರಗೂರಿನಿಂದ ಕರ್ನಾಟಕದ ಮೈಸೂರಿನ ಕಡೆಗೆ ಬರುವ ಸಂಪರ್ಕವೂ ತಪ್ಪಿಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದಾಗಿ ತಗ್ಗು ಪ್ರದೇಶಗಳು ಮತ್ತೆ ಜಲಾವೃತವಾಗಿವೆ. ತುಂಬಿಕೊಂಡಿರುವ ನೀರನ್ನು ಹೊರಹಾಕಲು ಚೆನ್ನೈ ಪಾಲಿಕೆಯು 684 ಮೋಟಾರ್‌ ಪಂಪ್‌ಗ್ಳನ್ನು ಬಳಸಿದೆ. ಮೀನುಗಾರಿಕೆ ಇಲಾಖೆಯ ಸಹಕಾರದೊಂದಿಗೆ ಹಾಯಿದೋಣಿಗಳನ್ನು ಪರಿಹಾರ ಕಾರ್ಯಗಳಿಗೆ ಬಳಸಲಾಗುತ್ತಿದೆ.

ಕಾವೇರಿ ಪ್ರಾಂತ್ಯದ ರೈತರಿಗೆ ಪರಿಹಾರ
ತಮಿಳುನಾಡು ವ್ಯಾಪ್ತಿಯಲ್ಲಿ ಬರುವ ಕಾವೇರಿ ನದಿ ಮುಖಜ ಭೂಮಿಯಲ್ಲಿ ಅಗಾಧ ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರಿಗಾಗಿ ತಮಿಳುನಾಡು ಸರ್ಕಾರ ಆರ್ಥಿಕ ಪರಿಹಾರ ಘೋಷಿಸಿದೆ. ಅದರಂತೆ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 20,000 ರೂ.ಗಳನ್ನು ನೀಡುವುದಾಗಿ ಘೋಷಿಸಲಾಗಿದೆ.

ಮತ್ತೊಂದೆಡೆ, ಮಳೆಯಿಂದಾಗಿ ಹಾಳಾಗಿರುವ ರಸ್ತೆಗಳು, ಒಳಚರಂಡಿ ಮತ್ತಿತರ ಮೂಲಸೌಕರ್ಯಗಳನ್ನು ಸರಿಪಡಿಸಲು ತಮಿಳುನಾಡು ಸರ್ಕಾರ 300 ಕೋಟಿ ರೂ. ಬಿಡುಗಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next