Advertisement
ಅಪಾಯದ ಮಟ್ಟದಲ್ಲಿ ತುಂಗಭದ್ರಾ:ತುಂಗಭದ್ರಾ ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕೃಷ್ಣಾ ಕೊಳ್ಳದ ಪ್ರದೇಶದಲ್ಲೂ ಮಳೆ ಆಗುತ್ತಿರುವುದರಿಂದ ನಾರಾಯಣಪುರ ಜಲಾಶಯದಿಂದ 1,13,000 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಇದರಿಂದಾಗಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟವನ್ನು 121.43 ಅಡಿಗೆ ಕಾಯ್ದಿರಿಸಿಕೊಳ್ಳಲಾಗಿದ್ದು, 1.20 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೇಮಾವತಿ ಜಲಾಶಯದಿಂದ 32 ಸಾವಿರ ಕ್ಯೂಸೆಕ್, ಹಾರಂಗಿ ಜಲಾಶಯದಿಂದ 65 ಸಾವಿರ ಕ್ಯೂಸೆಕ್ ನೀರು ಕೆಆರ್‌ಎಸ್‌ನತ್ತ ಹರಿದು ಬರುತ್ತಿದೆ. ಇದರಿಂದಾಗಿ ಕಾವೇರಿ ನದಿಯಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿದೆ. ಟಿಪ್ಪು ಕಾಲದ ವೆಲ್ಲೆಸ್ಲಿ ಸೇತುವೆ ಮುಳುಗಡೆಯಾಗುವ ಹಂತ ತಲುಪಿದೆ. ನಿಮಿಷಾಂಬ ದೇವಾಲಯದ ಪ್ರವೇಶ ದ್ವಾರದವರೆಗೆ ಕಾವೇರಿ ನೀರು ಬಂದಿದೆ. ರಾಮಕೃಷ್ಣ ಮಂದಿರ ಜಲಾವೃತಗೊಂಡಿದೆ. ಮಠದ ಸಿಬ್ಬಂದಿಯನ್ನು ರಾತ್ರಿಯೇ ಪೊಲೀಸರು ಅಲ್ಲಿಂದ ತೆರವುಗೊಳಿಸಿ ಮಠಕ್ಕೆ ಬೀಗ ಹಾಕಿದ್ದಾರೆ.
Related Articles
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜೀವನದಿ ಯಗಚಿ 4 ವರ್ಷಗಳ ಬಳಿಕ ಭರ್ತಿಯಾಗಿದ್ದು, ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ. ತಿ.ನರಸೀಪುರ ಸಮೀಪದ ತ್ರಿವೇಣಿ ಸಂಗಮ ಮೈದುಂಬಿ ಹರಿಯುತ್ತಿದ್ದು, ಹೆಮ್ಮಿಗೆ ಸೇತುವೆ ಮೇಲೆ ರಸ್ತೆ ಸಂಚಾರ ನಿಷೇಧಿಸಲಾಗಿದೆ.
Advertisement
ಶಾಲೆ, ಅಂಗನವಾಡಿಗೆ ರಜೆ:ಕಾವೇರಿ ನದಿ ಪ್ರದೇಶದಲ್ಲಿರುವ ಪಾಂಡವಪುರ ತಾಲೂಕಿನ ಎಣ್ಣೆಹೊಳೆ ಕೊಪ್ಪಲು ಗ್ರಾಮದ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ರಜೆ ಘೋಷಣೆ ಮಾಡಲಾಗಿದೆ. ಮುತ್ತತ್ತಿಗೆ ಪ್ರವೇಶ ನಿಷೇಧ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಮುತ್ತತ್ತಿಗೆ ಪ್ರವೇಶಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಟ್ಯಾಂಕರ್ ಪಲ್ಟಿ: ಮೂವರ ಸಾವು
ಸಕಲೇಶಪುರ: ಮಳೆಯಿಂದಾಗಿ ಶಿರಾಡಿ ಘಾಟ್‌ನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ತಾಲೂಕಿನ ದೊಡ್ಡತಪ್ಪಲು ಸಮೀಪ ಹೆದ್ದಾರಿಯಲ್ಲಿ ಭೂಕುಸಿತ ಉಂಟಾದ ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಗ್ಯಾಸ್ ತುಂಬಿದ್ದ ಟ್ಯಾಂಕರ್ ಮಂಗಳವಾರ ರಾತ್ರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಟ್ಯಾಂಕರ್ ಕ್ಲೀನರ್ ರಾಯಚೂರಿನ ಮಾನ್ವಿ ಮೂಲದ ವೆಂಕಟೇಶ್ (31) ಎಂಬುವರ ಮೃತದೇಹ ಮತ್ತೆಯಾಗಿದ್ದು, ಚಾಲಕ ಕೆ.ಆರ್ ಪೇಟೆ ತಾಲೂಕು ಕಿಕ್ಕೇರಿ ಸಮೀಪದ ಅನಗಳಲೆ ಗ್ರಾಮದ ಸಂತೋಷ್ (34)ನ ಶವ ಇನ್ನೂ ಪತ್ತೆಯಾಗಿಲ್ಲ.
ಇದೇ ವೇಳೆ, ಮಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಮತ್ತೂಂದು ಟ್ಯಾಂಕರ್‌ನ ಚಾಲಕ, ತನ್ನ ಟ್ಯಾಂಕರ್‌ಗೆ ಹ್ಯಾಂಡ್ ಬ್ರೇಕ್ ಹಾಕಿ, ಪ್ರಪಾತಕ್ಕೆ ಬಿದ್ದಿದ್ದ ಟ್ಯಾಂಕರ್ ನೋಡಲು ತೆರಳಿದ್ದ. ಈ ವೇಳೆ, ಹ್ಯಾಂಡ್ ಬ್ರೇಕ್ ವಿಫಲಗೊಂಡು ಈ ಟ್ಯಾಂಕರ್ ಮುಂದಕ್ಕೆ ಚಲಿಸಿತು. ಗಾಬರಿಗೊಂಡ ಚಾಲಕ ಮಂಗಳೂರು ಮೂಲದ ರಾಮ್‌ದೇವ್ (48), ಚಲಿಸುತ್ತಿದ್ದ ಟ್ಯಾಂಕರ್ ಹತ್ತಿ ನಿಲ್ಲಿಸಲು ಹೋದಾಗ ಟ್ಯಾಂಕರ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ. ಈ ಮಧ್ಯೆ, ಟ್ಯಾಂಕರ್ ಉರುಳಿ, ಅನಿಲ ಸೋರಿಕೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಪೂರ್ಣವಾಗಿ ವಾಹನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಶಿರಾಡಿಯಲ್ಲಿ ನಿರಂತರ ಭೂಕುಸಿತ:
ಶಿರಾಡಿಯಲ್ಲಿ ನಿರಂತರ ಭೂಕುಸಿತವಾಗುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಲಘುವಾಹನ ಸಂಚಾರ ಹಾಗೂ 15 ದಿನಗಳ ಕಾಲ ಭಾರೀ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಚಿಕ್ಕೋಡಿಯ 3 ಸೇತುವೆಗಳು ಜಲಾವೃತ:
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಚಿಕ್ಕೋಡಿ ತಾಲೂಕಿನಲ್ಲಿ ಯಡೂರ-ಕಲ್ಲೋಳ, ದತ್ತವಾಡ-ಮಲಿಕವಾಡ ಹಾಗೂ ಕಾರದಗಾ-ಭೋಜ ಕೆಳಮಟ್ಟದ ಸೇತುವೆಗಳು ನೀರಿನಲ್ಲಿ ಮುಳುಗಿವೆ. ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದ ಎಲ್ಲ 10 ಗೇಟ್‌ಗಳನ್ನು ತೆರೆದಿದ್ದು, ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಗೋಕಾಕ್ ಜಲಪಾತ ಸಂಪೂರ್ಣ ತುಂಬಿಕೊಂಡು ಧುಮುಕುತ್ತಿದೆ.