ಬಾಗಲಕೋಟೆ:ಕಾಶ್ಮೀರದಿಂದ ಕನ್ಯಾಕುಮಾರಿ, ಅರುಣಾಚಲ ಪ್ರದೇಶದಿಂದ ಗುಜರಾತ್ ವರೆಗೆ ದೇಶವನ್ನು ಜೋಡಿಸುವ ಮಹತ್ವದ ರೈಲ್ವೆ ಇಲಾಖೆ 70 ವರ್ಷದಿಂದ ರಾಜಕೀಯಗೊಂಡಿತ್ತು. ಇದರಿಂದ ಇಲಾಖೆ ಅಭಿವೃದ್ಧಿಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಬಳಿಕ, ರೈಲ್ವೆ ಇಲಾಖೆಯನ್ನು ರಾಜಕೀಯದಿಂದ ಹೊರಗಿಟ್ಟು ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ರೈಲ್ವೆ ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಅವರು, ಇಲ್ಲಿನ ರೈಲ್ವೆ ಸೌಲಭ್ಯ ಕುರಿತು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಬಳಿಕ, ಯೋಗದಿಂದ ವಿಶ್ವದ 197 ದೇಶಗಳನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ಹಾಗೆಯೇ ಇಡೀ ದೇಶವನ್ನು ಜೋಡಿಸುವ ಶಕ್ತಿ- ಸಾಮರ್ಥ್ಯ ಇರುವುದು ರೈಲ್ವೆ ಇಲಾಖೆಗೆ ಮಾತ್ರ.
13 ಲಕ್ಷ ಜನರು ಈ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಭಾರತೀಯ ರೈಲ್ವೆ ಇಲಾಖೆ, ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಎಂದರು.
ರೈಲ್ವೆ ಇಲಾಖೆಯನ್ನು ರಾಜಕೀಯದಿಂದ ಮುಕ್ತಗೊಳಿಸುವ ಕೆಲಸ ಮಾಡಿದ್ದೇವೆ. ವಿದೇಶಗಳಲ್ಲಿ ಗಂಟೆಗೆ 400 ಕಿ.ಮೀ ರೈಲು ಓಡುತ್ತವೆ. ನಮ್ಮಲ್ಲಿ ಗಂಟೆಗೆ 100 ಕಿ.ಮೀಯೂ ಓಡಲ್ಲ. ಇದಕ್ಕೆ ಇಲಾಖೆಯನ್ನು 70 ವರ್ಷ ರಾಜಕೀಯಗೊಳಿಸಿರುವುದೇ ಕಾರಣ. ಹೀಗಾಗಿ ರಾಜಕೀಯಗೊಳಿಸದೇ ಇಲಾಖೆಯನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
ಕನ್ನಡಿಗರು ಪರೀಕ್ಷೆ ಬರೆಯಲ್ಲ :
ಅತಿಹೆಚ್ಚು ಉದ್ಯೋಗಿಗಳನ್ನು ಹೊಂದುವ ಮೂಲಕ ವಿಶ್ವದ 4ನೇ ಸ್ಥಾನದಲ್ಲಿರುವ ರೈಲ್ವೆ ಇಲಾಖೆ ಅವಕಾಶಗಳ ಬುಟ್ಟಿ. ಆದರೆ ಕನ್ನಡಿಗರು ಈ ಅವಕಾಶ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಲಿಲ್ಲ. ಕಸಗೂಡಿಸುವವರಿಂದ ಹಿಡಿದು ಎಂಜಿನಿಯರ್‌ಗಳ ವರೆಗೂ ಇಲ್ಲಿ ಅವಕಾಶವಿದೆ. ಕನ್ನಡಿಗರು ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಹೆಚ್ಚು ಬರೆಯಬೇಕು. ಆ ಮೂಲಕ ಈ ಇಲಾಖೆಯಲ್ಲಿ ಅವಕಾಶ ಪಡೆಯಬೇಕು ಎಂದು ಸಲಹೆ ನೀಡಿದರು.