ಆಳಂದ: ಸತತವಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೇರಿದಂತೆ ಬರಗಾಲದ ಹೊಡೆತ. ಹೀಗೆ ಒಂದರ ಮೇಲೊಂದು ರೈತರಿಗೆ ಆರ್ಥಿಕ ನಷ್ಟ ಸಂಭವಿಸಿದರೂ ದೀಪಾವಳಿ ಹಾಗೂ ಬಲಿಪಾಡ್ಯ ಹಬ್ಬವನ್ನು ಕಹಿಸಿಹಿಗಳ ನಡುವೆ ಅದ್ಧೂರಿಯಾಗಿ ಆಚರಿಸಿದರು.
ಬಲಿಪಾಡ್ಯದ ದಿನದಂದು ಪಟ್ಟಣದ ಹೃದಯ ಭಾಗದ ಹಳೆಯ ಪೊಲೀಸ್ ಠಾಣೆ, ಹನುಮಾನ ರಸ್ತೆ, ಮುಖ್ಯ ರಸ್ತೆ ಹೀಗೆ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ನಡೆದ ಕೋಣ, ಎಮ್ಮೆಗಳ ಮೆರವಣಿಗೆ ಹಾಗೂ ಓಟ ಗಮನ ಸೆಳೆಯಿತು. ಬುಧವಾರ ದೀಪಾವಳಿ ಹಬ್ಬ ಆಚರಿಸಿದರು. ಗುರುವಾರ ಅಪವಾಸ್ಯೆಯ ವಿಶೇಷ ಪೂಜೆ ಹಾಗೂ ಶುಕ್ರವಾರ ಬಲಿಪಾಡ್ಯದಂದು ಅಂಗಡಿ ಮುಗ್ಗಟ್ಟುಗಳಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೆಳಗಿನ ಜಾವ ವಿಶೇಷ ಪೂಜೆ ನೆರವೇರಿಸಿ, ಪ್ರಸಾದ ಹಂಚಿ, ಪಟಾಕಿ ಸಿಡಿಸಿದರು.
ಪಟ್ಟಣದಲ್ಲಿ ವ್ಯಾಪಾರಿಗಳು ತೆಂಗಿನ ಪೊರಕೆ, ಹೂವು, ಹಣ್ಣು ಸೇರಿ ಪೂಜಾ ಸಾಮಗ್ರಿಗಳ ಮಾರಾಟ ಮತ್ತು ಖರೀದಿ ಗುರುವಾರ ಭರದಿಂದ ಕೂಡಿತ್ತು. ವರ್ಷಕ್ಕಿಂತ ಈ ಭಾರಿಯೂ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದರೂ ಗ್ರಾಹಕರು ಖರೀದಿಸಿದರು.
ಸಿಹಿ ತಿಂಡಿಗಳನ್ನು ಅನೇಕರು ಹೊಟೆಲ್‌ಗಳಿಂದ ಖರೀದಿಸಿದರೆ, ಬಹುತೇಕರು ಮನೆಗಳಲ್ಲಿ ಸಿದ್ಧಪಡಿಸಿ ಬಂಧು ಬಾಂಧವರಿಗೆ ನೆರೆ ಹೊರೆಯವರನ್ನು ಕರೆದು ನೀಡಿದರು. ಒಟ್ಟಿನಲ್ಲಿ ಬಡವರಿಗೆ, ರೈತರಿಗೆ ದೀಪಾವಳಿ ಆಚರಣೆ ಆರ್ಥಿಕ ಹೊರೆಯಾದರೆ ಶ್ರೀಮಂತರು ಖರ್ಚಿನ ಬದಲು ಸರಳವಾಗಿಯೇ ಆಚರಿಸಿ ಹಣ ಉಳಿಸಿದ ಪ್ರಸಂಗಗಳು ನಡೆದವು.
ಆಳಂದ ಪಟ್ಟಣದಲ್ಲಿ ಪಾಡ್ಯದಂದು ಪ್ರತಿವರ್ಷ ಕೋಣಗಳ ಕುಸ್ತಿ ನಡೆಯಿತ್ತಿತ್ತಾದರೂ ಇತ್ತಿಚಿನ ವರ್ಷ ಕಳೆದಂತೆ ಬರಿ ಎಮ್ಮೆ, ಕೋಣಗಳ ಮೆರವಣಿಗೆ ಹಾಗೂ ಓಟ ನಡೆಸುತ್ತಿದ್ದಾರೆ. ಮೆರವಣಿಗೆ ಆಕರ್ಷಕವಾಗಿ ನಡೆಯುತ್ತಿದೆ. ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಇನ್ನಿತರ ಧರ್ಮಿಯರನ್ನು ಕರೆಯಿಸಿ ಭೋಜನ ಕೂಟ ಏರ್ಪಡಿಸಿದ್ದಂತೆ ಪ್ರತಿಯಾಗಿ ಹಿಂದೂಪರ ಧರ್ಮಿಯರು ಮುಸ್ಲಿಂ ಬಾಂಧವರನ್ನು ಕರೆದು ಉಪಹಾರ ಕೂಟಗಳನ್ನು ಕೆಲವೆಡೆ ಕೈಗೊಂಡಿದ್ದರು .