Advertisement

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಮತ್ತೂಬ್ಬ ಆರೋಪಿ ಸೆರೆ

03:45 AM Jan 30, 2017 | |

ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮತ್ತೂಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಶನಿವಾರ ನಗರದ ನ್ಯಾಯಾಲಯದ ಆವರಣದಲ್ಲಿ ಬಂಧಿಸಿದ್ದಾರೆ.ಸದಾಶಿವನಗರ ನಿವಾಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ನಾರಾಯಣ್‌ ಬಂಧಿತ. 

Advertisement

ಕಳೆದ ಏಪ್ರಿಲ್‌ 16ರಂದು ನಾರಾಯಣ್‌ನ ಮನೆ ಮೇಲೆ ಸಿಐಡಿ ತಂಡ ದಾಳಿ ನಡೆಸಿದಾಗ ರಸಾಯನಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳು ಸಿಕ್ಕಿದ್ದವು. ಅಂದಿನಿಂದ ನಾರಾಯಣ್‌ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಶನಿವಾರ ಆರೋಪಿ ನ್ಯಾಯಾಲಯದ ಆವರಣಕ್ಕೆ ಬರುವ ಬಗ್ಗೆ ಮಾಹಿತಿ ತಿಳಿದು ಸಿಐಡಿ ಅಧಿಕಾರಿಗಳು ಮಫ್ತಿಯಲ್ಲಿ ಬಂದು ನಾರಾಯಣ್‌ನನ್ನು ಬಂಧಿಸಿದ್ದಾರೆ.

ನಾರಾಯಣ್‌ ಮನೆಯಲ್ಲಿ ಪ್ರಶ್ನೆಪತ್ರಿಕೆ ಸಿಕ್ಕಿದಾಗ ಆರೋಪಿ ವಿರುದ್ಧ ಸಿಐಡಿ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಪ್ರಕರಣ ದಾಖಲಿಸಿತ್ತು. ಆರೋಪಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಅಲ್ಲದೆ, ನನ್ನ ವಿರುದ್ಧ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಹೀಗಾಗಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಕೋಕಾದಿಂದ ನನ್ನ ಹೆಸರನ್ನು ಕೈ ಬಿಡಬೇಕೆಂದು ಮನವಿ ಮಾಡಿದ್ದ.

ಈ ಅರ್ಜಿ ವಿಚಾರಣೆಗೆ ಹಾಜರಾಗಲು ಶನಿವಾರ ಆರೋಪಿ ನಾರಾಯಣ್‌ ಕೋರ್ಟ್‌ಗೆ ಬಂದಿದ್ದ. ನ್ಯಾಯಾಲಯ ಅರ್ಜಿ ವಜಾಗೊಳಿಸುತ್ತಿದ್ದಂತೆ ಮಫ್ತಿಯಲ್ಲಿದ್ದ ಸಿಐಡಿ ಅಧಿಕಾರಿಗಳು ನಾರಾಯಣ್‌ನನ್ನು ಬಂಧಿಸಿ ನ್ಯಾಯಾಧೀಶರ ಬಳಿ ಹಾಜರುಪಡಿಸಿದರು.

ಬಳಿಕ, ಒಂಬತ್ತು ತಿಂಗಳಿಂದ ಆರೋಪಿ ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ. ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಒಪ್ಪಿದ ನ್ಯಾಯಾಧೀಶರು ಆರೋಪಿಯನ್ನು ಆರು ದಿನಗಳ ಕಾಲ ಸಿಐಡಿ ಅಧಿಕಾರಿಗಳ ವಶಕ್ಕೆ ನೀಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯಕ್ಕೆ ಐದು ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ನಾರಾಯಣ್‌ ವಿಚಾರಣೆ ಬಳಿಕ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾರಾಯಣ್‌ ಮಗಳು ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕೆಂಬ ಉದ್ದೇಶದಿಂದ ನಾರಾಯಣ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್‌ ಶಿವಕುಮಾರಯ್ಯ ಮತ್ತು ಆತನ ಅಣ್ಣನ ಮಗ ಕಿರಣ್‌ ಅಲಿಯಾಸ್‌ ಕುಮಾರಸ್ವಾಮಿಯನ್ನು ಸಂಪರ್ಕಿಸಿದ್ದ. ಅವರಿಗೆ 13 ಲಕ್ಷ ರೂ. ಕೊಟ್ಟು ಪರೀಕ್ಷೆಗೂ ಮುನ್ನ ಆರು ವಿಷಯಗಳ ಪ್ರಶ್ನೆ ಪತ್ರಿಕೆ ಪಡೆದುಕೊಂಡಿದ್ದ. ಬಳಿಕ ತನ್ನ ಮಗಳನ್ನು ಪಾಲಿಕೆ ಮಾಜಿ ಸದಸ್ಯ ಗಂಗಬೈರಯ್ಯ ಅವರ ಮನೆಗೆ ಕಳುಹಿಸಿದ್ದ. ಅಲ್ಲಿ ಗಂಗಬೈರಯ್ಯ ಮಗಳು ಮತ್ತು ನಾರಾಯಣ್‌ ಪುತ್ರಿಗೆ ಇಬ್ಬರು ಶಿಕ್ಷಕರು ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಹೇಳಿಕೊಟ್ಟಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next