ದಾವಣಗೆರೆ: ಫೆ.17ರಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಪ್ರಸ್ತಾವನೆ ಆಗಲಿದೆ. ಸಿಎಂ ಯಡಿಯೂರಪ್ಪ ಅವರು ಅಧಿವೇಶನದಲ್ಲಿ ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಕೆಲ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ಅನುಕೂಲ ಆಗುವ ಏನೇನು ಕಾರ್ಯಕ್ರಮ ಮಾಡಿದೆ. ಮುಂದೆ ಏನೇನು ಅನುಕೂಲ ಆಗಬೇಕು ಎಂಬ ವಿಚಾರಗಳ ಪ್ರಸ್ತಾಪನೆ ಮಾಡಲಾಗುವುದು. ಅಧಿವೇಶನದ ಪ್ರಮುಖ ಉದ್ದೇಶ ರಾಜ್ಯದ ಜನರಿಗೆ ಸದುಪಯೋಗ, ಅನುಕೂಲ ಆಗಬೇಕು ಎಂಬುದು.
ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ವಿಪಕ್ಷಗಳ ಪ್ರಶ್ನೆಗಳಿಗೆ ಅಧಿವೇಶನದಲ್ಲಿ ಸರ್ಕಾರ ಉತ್ತರ ಕೊಡಲಿದೆ. ಅಧಿವೇಶನ ಮುಗಿದ ನಂತರ ಕೆಲವು ಜಿಲ್ಲೆಗಳ ಉಸ್ತುವಾರಿ ಸಚಿವರ ನೇಮಕ ಆಗಲಿದೆ. ನಮ್ಮಲ್ಲಿ ಮೂಲ ಬಿಜೆಪಿ, ಬೇರೆ ಪಕ್ಷಗಳಿಂದ ಬಂದವರು ಎಂಬುದು ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಸರ್ಕಾರ ಸ್ಪಷ್ಟವಾಗಿದೆ. ಕೆಲವು ಕಿಡಿಗೇಡಿಗಳು ಈ ರೀತಿ ಮಾಡಿದಾಗ ಕಾನೂನು ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಸರ್ಕಾರದ ನಿರ್ಧಾರ ಸೂಕ್ತವಾಗಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ನನ್ನ ಇಲಾಖೆ ಸೇರಿದಂತೆ ಯಾವುದೇ ಇಲಾಖೆ ಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಕಾಂಗ್ರೆಸ್‌ನವರು ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
-ಬಿ.ಶ್ರೀರಾಮುಲು, ಆರೋಗ್ಯ ಸಚಿವ