ವಾಟ್ಸಾಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ ನೀವೊಬ್ಬರು 80ರ ವಯಸ್ಸಿನ ರೈತನ ಮಾತುಗಳನ್ನು ಕೇಳಿದ್ದಿರಬಹುದು. ಯಾವ ಕೋಟ್ಯಾಧಿಪತಿಗೂ ಕಡಿಮೆ ಇಲ್ಲದಂತೆ ಮಾತಾಡುವ ಆ ಅನ್ನದಾತನ ವಸ್ತ್ರಾಭರಣ, ಒಂದು ತುಂಡು ಪಂಚೆ, ಒಂದು ಶರ್ಟು, ಕೊರಳಲ್ಲಿ ಒಂದು ಟವೆಲ್ಲು ಮಾತ್ರ! ಒಟ್ಟಾರೆ ಆ ಬಟ್ಟೆಯ ಬೆಲೆ 120 ರೂ. ಇದ್ದಿರಬಹುದು. ಅವರು ಒಂದು ಸಸಿಯನ್ನು ನೆಡದೆ, ಊಟ ಮಾಡುವುದಿಲ್ಲ. ಅವರ ಆಸ್ತಿ ಈಗ ಕೋಟಿಗೂ ಮೀರುತ್ತದೆ!
ಯಾರು ಆ 80 ವರ್ಷದ ರೈತ? ಬಹುತೇಕರಿಗೆ ಗೊತ್ತು, ವರ್ತೂರು ನಾರಾಯಣ ರೆಡ್ಡಿ! ಕೇವಲ ನಾಡು ಏಕೆ ಜಗತ್ತಿನಾದ್ಯಂತ ಪ್ರಸಿದ್ಧರಾಗಿರುವ ನಾರಾಯಣ ರೆಡ್ಡಿ ಅವರ ಸಾಧನೆಯ ಬದುಕು ಈ ಸಲದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತೆರೆದುಕೊಳ್ಳಲಿದೆ. ಈ ಬಾರಿಯ “ಮಾತುಕತೆ’ಯಲ್ಲಿ ಅವರೇ ಅತಿಥಿ!
ಹತ್ತಾರು ದೇಶಗಳನ್ನು ಸುತ್ತಿರುವ ರೆಡ್ಡಿ ಅವರು, ಈಗಲೂ ತಮ್ಮ ಊರಿನಲ್ಲಿ ಓಡಾಡುವುದು ಸೈಕಲ್‌ನಲ್ಲಿ! ಒಂದು ಕಾಲದಲ್ಲಿ ಹೋಟೆಲ್ಲಿನಲ್ಲಿ ಕಾಫಿಲೋಟ ತೊಳೆದುಕೊಂಡು ಬದುಕಿದ್ದ ರೆಡ್ಡಿ ಅವರು, ರೈತರಾಗಲು ಸಂಕಲ್ಪ ತೊಟ್ಟಾಗ ಅವರಿಗೆ ಇದ್ದಿದ್ದು ಅಲ್ಪ ಭೂಮಿ. ಅದರಲ್ಲಿ ಹೇಗೆ ಬಂಗಾರ ಬೆಳೆಯಬಹುದು ಎಂಬುದನ್ನು ಅವರು ನಾಡಿಗೆ ತೋರಿಸಿಕೊಟ್ಟರು. ಅವರ ಬದುಕಿನ ಯಶೋಗಾಥೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿಕೊಡುವ ಈ ಅಪರೂಪದ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಯಾವಾಗ?: ಡಿ.16, ಶನಿವಾರ, ಸಂ.4
ಎಲ್ಲಿ?: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ