Advertisement

ಬಾಹ್ಯಾಕಾಶ ತ್ಯಾಜ್ಯ ಪ್ರಮಾಣ ಕುಸಿತ?

10:03 AM Jan 26, 2020 | Team Udayavani |

ಬೆಂಗಳೂರು: ವರ್ಷದಿಂದ ವರ್ಷಕ್ಕೆ ಬಾಹ್ಯಾಕಾಶದಲ್ಲಿ ಸದಾ ಅಪಾಯಕಾರಿಯಾಗಿ ಕಾಡುವ ಅಂತರಿಕ್ಷ ತ್ಯಾಜ್ಯಗಳು ಈ ವರ್ಷ ಕೊಂಚ ಪ್ರಮಾಣದಲ್ಲಿ ಕುಸಿದಿವೆ!

Advertisement

ಪ್ರತಿಷ್ಠಿತ ಐರೋಪ್ಯ ಬಾಹ್ಯಾಕಾಂಶ ಸಂಸ್ಥೆ (ಇಎಸ್‌ಎ) ಪ್ರತೀ ವರ್ಷ ಈ “ಕಸ’ಗಳ ಗಣತಿ ಮಾಡುತ್ತಿದ್ದು, ಈ ವರ್ಷದ ಗಣತಿಯಲ್ಲಿ ಕುಸಿತ ದಾಖಲಾಗಿದೆ. ಕಳೆದ ವರ್ಷ ಬಾಹ್ಯಾಕಾಶದಲ್ಲಿ 22,300 ಅವಶೇಷಗಳಿದ್ದರೆ, ಈ ವರ್ಷ ಆ ಪ್ರಮಾಣ 20,190 ಆಗಿದೆ.

ಒಟ್ಟಾರೆ ಅಂದಾಜಿನ ಪ್ರಕಾರ ಅಂತರಿಕ್ಷದಲ್ಲಿ 34,000 ಕಸ ಇದ್ದು, ಇದರಲ್ಲಿ 20,190 ಕಸಗಳನ್ನು ಪಟ್ಟಿ ಮಾಡಲಾಗಿದೆ. ಈ ತ್ಯಾಜ್ಯಗಳು ಒಂದೋ ಪರಿಭ್ರಮಣದ ಸಮಯದಲ್ಲಿ ಸುಟ್ಟು ಭಸ್ಮವಾಗಿರಬಹುದು; ಇಲ್ಲವೇ ಭೂ ವಾತಾವರಣ ಸೇರಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹೀಗೆ ಪಟ್ಟಿ ಮಾಡಲಾದ ವಸ್ತುಗಳಲ್ಲಿ ಶೇ. 10ರಷ್ಟು ಮಾತ್ರ, ಅಂದರೆ 2,000 ಉಪಗ್ರಹ ಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 500 ಭೂಸ್ಥಾಯಿ ಕಕ್ಷೆ (ಜಿಇಒ) ಹಾಗೂ 1,200 ಕೆಳಸ್ಥಾಯಿ ಕಕ್ಷೆ (ಎಲ್‌ಇಒ)ಯಲ್ಲಿವೆ. 300 ಇತರ ಭಾಗಗಳಲ್ಲಿವೆ. ಉಳಿದಂತೆ ಐದು ಸಾವಿರ ವಸ್ತುಗಳನ್ನು ಗುರುತಿಸ ಲಾಗಿದ್ದರೂ ಪಟ್ಟಿ ಮಾಡಿಲ್ಲ. ಇನ್ನೂ ಐದು ಸಾವಿರ ಉಪ ಕರಣ ಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಇದರಲ್ಲಿ ಶೇ. 52ರಷ್ಟು ರಾಕೆಟ್‌ ಕವಚಗಳಿವೆ. ಉಳಿದಂತೆ ಶೇ. 48ರಷ್ಟು ಇತರ ತುಣುಕುಗಳಿವೆ ಎಂದು ಅಂತಾರಾಷ್ಟ್ರೀಯ ಗಗನ ಯಾತ್ರಿಗಳ ಅಕಾಡೆಮಿಯ ಬಾಹ್ಯಾಕಾಶ ತ್ಯಾಜ್ಯ ಸಮಿತಿ ಅಧ್ಯಕ್ಷ ಡಾ| ಕ್ರಿಸ್ಟೊಫ್ ಬೊನಾಲ್‌ ತಿಳಿಸಿದರು.

ಐಎಎ ಮತ್ತು ಇಸ್ರೋ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ “ಮಾನವ ಸಹಿತ ಗಗನನೌಕೆ ಮತ್ತು ಪರಿಶೋಧನೆ’ ವಿಚಾರ ಸಂಕಿರಣದಲ್ಲಿ ತಾಂತ್ರಿಕ ಗೋಷ್ಠಿಯಲ್ಲಿ “ಬಾಹ್ಯಾಕಾಶದ ಭಗ್ನಾವಶೇಷಗಳು; ಭವಿಷ್ಯದ ಗಗನ ನೌಕೆಗಳಿಗೆ ದೊಡ್ಡ ಅಡೆತಡೆ’ ಕುರಿತು ಅವರು ಮಾತನಾಡಿದರು.

Advertisement

ಅಂತರಿಕ್ಷದಲ್ಲಿ 1 ಸೆಂ.ಮೀ.ಗಿಂತ ಕಡಿಮೆ ಗಾತ್ರದ ಒಂಬತ್ತು ಲಕ್ಷ ವಿವಿಧ ಪ್ರಕಾರದ ತುಣುಕುಗಳು ಕೂಡ ಬಾಹ್ಯಾಕಾಶದಲ್ಲಿ ಬಿದ್ದಿವೆ. ಇವುಗಳು ಉಪಗ್ರಹದ ಪ್ಯಾನೆಲ್‌ಗೆ ಸ್ವಲ್ಪ ತಾಗಿದರೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಈ ತ್ಯಾಜ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವ ಆವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಭವಿಷ್ಯದಲ್ಲಿನ ಗಗನ ನೌಕೆಗಳಿಗೆ ತಡೆಯೊಡ್ಡಲಿರುವ ಕ್ರಿಯಾಶೀಲ ಅವಶೇಷಗಳ ತೆರವಿಗೆ ಈಗ ಸ್ವಿಸ್‌ ಸ್ಟಾರ್ಟ್‌ಅಪ್‌ವೊಂದು “ದಿ ಕ್ಲಿಯರ್‌ ಸ್ಪೇಸ್‌’ ಮಿಷನ್‌ ಸಿದ್ಧಪಡಿಸುತ್ತಿದೆ. 2025ರಲ್ಲಿ ಇದನ್ನು ಸ್ವಿಸ್‌ ವಾಣಿಜ್ಯ ಸಂಸ್ಥೆಯು ಉಡಾವಣೆ ಮಾಡಲಿದೆ ಎನ್ನಲಾಗಿದೆ.

500 ನ್ಯಾನೊ ಉಪಗ್ರಹ ಉಡಾವಣೆ?
2019ರಲ್ಲೇ 698 ಹೊಸ ಅವಶೇಷಗಳ ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಈಗ 321 ಕೈಬಿಡಲಾಗಿದೆ. ಅದೇ ವರ್ಷದಲ್ಲಿ 431 ನ್ಯಾನೊ ಉಪಗ್ರಹಗಳ ಉಡಾವಣೆ ಆಗಿದೆ. ಬರುವ ವರ್ಷ ಈ ಸಂಖ್ಯೆ 500ಕ್ಕೆ ಏರಿಕೆ ಯಾಗುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಇಂತಹ ಸಣ್ಣ ಉಪಗ್ರಹಗಳ ಗುರುತಿಸುವಿಕೆ, ಅವುಗಳ ಚಲನ ವಲನದ ಮೇಲೆ ನಿಗಾ ಇಡುವುದು ಕಷ್ಟಕರ ಆಗಲಿದೆ. ಏಕೆಂದರೆ, ಬಾಹ್ಯಾಕಾಶದಲ್ಲಿ ನಕ್ಷತ್ರಗಳ ಪುಂಜ ಇರುತ್ತವೆ. ಪ್ರತಿ ವರ್ಷ ಭೂಮಿಯನ್ನು ಸುತ್ತುವ ಕಕ್ಷೆಯಲ್ಲಿ ಸ್ಥಳೀಯವಾಗಿ ಸಾಕಷ್ಟು ಅವಶೇಷಗಳ ನಡುವೆ ಘರ್ಷಣೆ ಆಗುತ್ತದೆ. ಮುಂದಿನ ದಿನಗಳಲ್ಲಿ ಇವು ಮಾನವ ಸಹಿತ ಗಗನನೌಕೆಯ ಸುಗಮ ಸಂಚಾರಕ್ಕೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಡಾ| ಬೊನಾಲ್‌ ಅವರು ಹೇಳಿದರು.

- ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next