ರಬಕವಿ-ಬನಹಟ್ಟಿ: ಸಮಾಜದಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡು ಎಲ್ಲರ ಅಚ್ಚು ಮೆಚ್ಚಿನ ನಟನಾಗಿ ಬೆಳೆದಿದ್ದ ಪುನೀತ್‌ರಾಜಕುಮಾರ್ ಇಂದಿಗೂ ಅಜರಾಮರಾಗಿದ್ದಾರೆ ಎಂದು ಜವಳಿ ವರ್ತಕ ಮಲ್ಲಿಕಾರ್ಜುನ ಬಾಣಕಾರ ಹೇಳಿದರು. ನಗರದಲ್ಲಿ ಪುನೀತ್ ನುಡಿ ನಮನ ಹಾಗೂ ದಿ| ಶಿವಾನಂದ ಆರಿ ಪುಣ್ಯಸ್ಮರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನೇಕ ಸಮಾಜಮುಖಿ ಕಾರ್ಯಗಳಿಂದ ಜೀವಂತವಾಗಿಡುತ್ತವೆ ಎಂದರು.
ಉದ್ಯಮಿ ಸುರೇಶ ಚಿಂಡಕ ಮಾತನಾಡಿ, ಯುವಕರ ಸ್ಪೂರ್ತಿಯಾಗಿ ಕಟ್ಟಕಡೆಯ ಜನರನ್ನೂ ತನ್ನ ಕುಟುಂಬದಲ್ಲೊಬ್ಬರಂತೆ ಆರೈಕೆ ಮಾಡಿ ಇಡೀ ಸಮಾಜಕ್ಕೆ ಮಾದರಿಯಾಗಿ ಬದುಕಿ ಚಿಕ್ಕ ವಯಸ್ಸಿನಲ್ಲಿಯೇ ಅಘಾತ ಕಾರ್ಯ ಮಾಡಿದ ಪುನೀತ್ ಕಾರ್ಯ ಶ್ಲಾಘನೀಯವೆಂದರು.
ಶ್ರೀಶೈಲ ಯಾದವಾಡ ಮಾತನಾಡಿ, ಸಿನಿಮಾ ರಂಗದಲ್ಲಿ ಪುನೀತ್ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಕೆಲ ಸಿನಿಮಾಗಳು ಪುನೀತ್ ಅವರನ್ನೇ ಮಾದರಿಯಾಗಿಸಿಕೊಂಡು ಚಿತ್ರಕಥೆ, ನಿರ್ದೇಶನವಾಗುತ್ತಿದ್ದವು ಎಂದು ಹೇಳಿದರು. ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರನ್ನು ಮರಣದಲ್ಲಿ ಕಾಣಿ ಎಂಬಂತೆ ಜೀವಿತಾವ ಧಿಯಲ್ಲಿ ಎಂದಿಗೂ ತನ್ನ ಜನಸೇವೆಯನ್ನು ಬಹಿರಂಗವಾಗಿ ತೋರದೆ ಆಂತರಿಕ ಮನಸ್ಸಿನ ನೆಮ್ಮದಿಗಾಗಿ ಸಾವಿರಾರು ಮಕ್ಕಳಿಗೆ ಜ್ಞಾನಾರ್ಜನೆ ಮೂಲಕ ನಿರಾಶ್ರಿತರ ಸಂಬಂಧಿಯಾಗಿ ಇಡೀ ದೇಶವೇ ತನ್ನತ್ತ ನೋಡುವಂತೆ ಮಾಡಿದ ಪುನೀತ್ ನಿಜಕ್ಕೂ ಅಪ್ರತಿಮ ವ್ಯಕ್ತಿತ್ವದೊಂದಿಗೆ ಯುವಕರಿಗೆ ಮಾದರಿಯಾಗಿ ಬದುಕಿದ ಜೀವ ಎಂದು ಹೇಳಿದರು.
ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ಸುರೇಶ ಆರಿ, ಧರೆಪ್ಪ ಉಳ್ಳಾಗಡ್ಡಿ, ಮಹೇಶ ಆರಿ, ದುರ್ಗವ್ವ ಹರಿಜನ, ಸಂಜು ಡಾಗಾ, ಕಲ್ಲಪ್ಪ ಹೊರಟ್ಟಿ, ಅರುಣ ಜವಳಗಿ ಅನೇಕರಿದ್ದರು.