Advertisement

ಸಿಎಂ ನಿವಾಸ ಬಳಿ ನೂಕುನುಗ್ಗಲು

05:33 PM Dec 08, 2021 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆದರ್ಶ ನಗರದ ನಿವಾಸದಲ್ಲಿ ಸಾಕಷ್ಟು ಜನರು ಮನವಿ ಸಲ್ಲಿಸಲು ಸೇರಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಕೋವಿಡ್‌ ನಿಯಮಗಳು ಪಾಲನೆಯಾಗಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಬೆಳಗ್ಗೆಯಿಂದಲೇ ಜನರು ಅವರ ನಿವಾಸಗಳ ಮುಂದೆ ಸೇರಿದ್ದರು.

Advertisement

ಆರಂಭದಲ್ಲಿ ಕೆಲವರನ್ನು ಮನೆಯೊಳಗೆ ಕರೆದು ಮನವಿ ಸ್ವೀಕರಿಸಿದರು. ಆದರೆ ಬಹುತೇಕ ಜನರು ಹೊರಗೆ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಕಡ್ಡಾಯ ಧರಿಸಬೇಕು ಎಂದು ಪೊಲೀಸರು ತಿಳಿವಳಿಕೆ ನೀಡಿದರು.

ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಹೊರಬರುತ್ತಿದ್ದಂತೆ ಸಾರ್ವಜನಿಕರಿಗಾಗಿ ಮಾಡಿದ್ದ ಗ್ಯಾಲರಿ ಸೇರಿದಂತೆ ಅವರ ಸುತ್ತಲೂ ಜನರು ಮುಗಿಬಿದ್ದರು. ಈ ಸಂದರ್ಭದಲ್ಲಿ ಒಂದಿಷ್ಟು ನೂಕುನುಗ್ಗಲು ಉಂಟಾಯಿತು. ಇದರಿಂದ ಬೊಮ್ಮಾಯಿ ಸಿಡಿಮಿಡಿಗೊಳ್ಳುತ್ತಿದ್ದಂತೆ ಪೊಲೀಸರು ಜನರನ್ನು ದೂರ ಸರಿಸಿದರು.

ವಿಧಾನ ಪರಿಷತ್ತು ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಹೊರಡಬೇಕಾದ ಹಿನ್ನೆಲೆಯಲ್ಲಿ ಗಡಿಬಿಡಿಯಲ್ಲಿ ಕೆಲವರ ಮನವಿ ಸ್ವೀಕರಿಸಲಿಲ್ಲ. ಈ ಸಂದರ್ಭದಲ್ಲಿ ಕೊಂಚ ನೂಕುನುಗ್ಗಲು ಉಂಟಾಯಿತು. ಕೆಲವರು ಕಾರು ಬಳಿ ಹೋಗಿ ಮನವಿ ನೀಡಲು ಮುಂದಾದರು. ಈ ಸಂದರ್ಭದಲ್ಲಂತೂ ಸಾಮಾಜಿಕ ಅಂತರ ಪಾಲನೆಯಾಗಲಿಲ್ಲ.

ಆದರೆ ಕೊನೆಗೂ ಕೆಲವರು ಮನವಿ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಬೆಳಗ್ಗಿನಿಂದ ಕಾಯುತ್ತಿದ್ದ ಜನರಿಗೆ ನಿರಾಸೆಯಾಯಿತು. ತಮ್ಮ ಮನವಿಗೆ ಯಾವುದೇ ಸ್ಪಂದನೆ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಕೆಲವರು ಮುಖ್ಯಮಂತ್ರಿಗಳ ಆಪ್ತ ಸಹಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next