Advertisement

ದಾಖಲೆ ಫ‌ಲಿತಾಂಶಕ್ಕೆ ಪಿಯು ಇಲಾಖೆ ಕಸರತ್ತು

11:25 AM Dec 26, 2017 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ದಾಖಲೆಯ ಫ‌ಲಿತಾಂಶಕ್ಕಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಮೂರು ರೀತಿಯ ಕಾರ್ಯತಂತ್ರ ರೂಪಿಸಿ, ಅನುಷ್ಠಾನಗೊಳಿಸಿದೆ. 2008ರಿಂದ ಈಚೇಗೆ ದ್ವಿತೀಯ ಪಿಯು ಫ‌ಲಿತಾಂಶ ಶೇ.61ರ ಗಡಿ ದಾಟಿಲ್ಲ. ಈ ವರ್ಷ ಶತಾಯಗತಾಯ ದಾಖಲೆಯ ಫ‌ಲಿತಾಂಶ ಪಡೆಯುವುದಕ್ಕಾಗಿ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಿದ್ದಾರೆ.

Advertisement

ಕಳೆದ 3-4 ವರ್ಷದಿಂದ ಕಲಾ ವಿಭಾಗದ ಫ‌ಲಿತಾಂಶ ಗಣನೀಯವಾಗಿ ಕುಸಿದಿದೆ. ಹಾಗೆಯೇ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಫ‌ಲಿತಾಂಶವು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗಿಂತ ಕಡಿಮೆಯಾಗಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, 2017ನೇ ಸಾಲಿನ ಫ‌ಲಿತಾಂಶವನ್ನು ವಿಶ್ಲೇಷಿಸಿ 3 ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ.

ಇಂಗ್ಲಿಷ್‌ ಕಲಿಕೆ: ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರ ಇಂಗ್ಲಿಷ್‌ ವ್ಯಾಕರಣ ಮತ್ತು ಮಾತನಾಡುವ ಕೌಶಲ್ಯ ಹೆಚ್ಚಿಸುವ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿದೆ. 2018ರ ಜನವರಿವರೆಗೂ ಇದು ನಡೆಯಲಿದೆ. ಒಟ್ಟು 26 ಭಾನುವಾರ ವಿಶೇಷ ತರಗತಿ ನಡೆಸಲಾಗುತ್ತದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿ, ಅವರ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 1.62 ಕೋಟಿ ರೂ. ವೆಚ್ಚದಲ್ಲಿ  ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಬಯೊಮೆಟ್ರಿಕ್‌ ಮೂಲಕ ಪಡೆದು, ಇಂಗ್ಲಿಷ್‌ ಬಲ್ಲ ಶಿಕ್ಷಕರಿಂದಲೇ ತರಬೇತಿ ನೀಡಲಾಗುತ್ತಿದೆ.

ರಜಾದಿನದ ವಿಶೇಷ ತರಗತಿ: ರಾಜ್ಯದ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆಯಲ್ಲಿ ಏಳು ವಿಷಯದ ವಿಶೇಷ ತರಗತಿ ನಡೆಸಲಾಗಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯದ ವಿಶೇಷ ತರಗತಿ ನೀಡಿ, ಒಟ್ಟಾರೆ ಫ‌ಲಿತಾಂಶದ ಪ್ರಮಾಣ ಹೆಚ್ಚಿಸುವುದೇ ಇದರ ಗುರಿಯಾಗಿದೆ. ವಿಶೇಷ ತರಗತಿ ನಡೆಸಲು ತಾಲೂಕಿನ ಒಂದು ಪಿಯು ಕಾಲೇಜನ್ನು ನೋಡಲ್‌ ಕೇಂದ್ರವಾಗಿ ಆಯ್ಕೆ ಮಾಡಿ, ಪ್ರತಿ ಜಿಲ್ಲೆಗೆ 5.25 ಲಕ್ಷದಂತೆ, 1.62 ಕೋಟಿ ರೂ. ವಿನಿಯೋಗಿಸಲಾಗಿದೆ. 

Advertisement

ವಸತಿಯುಕ್ತ ತರಬೇತಿ: ರಾಜ್ಯದ ಪಿಯು ಕಾಲೇಜಿನಲ್ಲಿ ವಿಜ್ಞಾನ, ಗಣಿತ ವಿಷಯದ ಬೋಧನೆ ಮಾಡುತ್ತಿರುವ ಉಪನ್ಯಾಸಕರಿಗೆ 15 ದಿನಗಳ ವಸತಿಯುಕ್ತ ತರಬೇತಿ ನೀಡಲಾಗಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಎನ್‌ಸಿಆರ್‌ಟಿ ಪಠ್ಯಕ್ರಮವನ್ನು ಅವಳಡಿಸಿಕೊಳ್ಳಲಾಗಿದೆ. ಎನ್‌ಸಿಇಆರ್‌ಟಿ ಪಠ್ಯಕ್ರಮ ಆಧಾರಿತವಾಗಿ ತರಬೇತಿ ನೀಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅತ್ಯಂತ ಸುಲಭವಾಗಿ ಪಠ್ಯವಿವರಿಸುವ ಹಲವು ವಿಧಾನದ ಬಗ್ಗೆ ತಜ್ಞರಿಂದ ಮಾರ್ಗದರ್ಶನ ನೀಡಲಾಗಿದೆ.

ದಾಖಲೆ ಫ‌ಲಿತಾಂಶದ ನಿರೀಕ್ಷೆ: ವಿದ್ಯಾರ್ಥಿಗಳು 2018ರ ಮಾರ್ಚ್‌ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆ ಸಿದ್ಧತೆ ಆರಂಭಿಸಿದ್ದಾರೆ. ಇಲಾಖೆಯ ಅಧಿಕಾರಿಗಳು ದಾಖಲೆ ಫ‌ಲಿತಾಂಶಕ್ಕಾಗಿ ವಿದ್ಯಾರ್ಥಿಗಳಿಗೆ 2 ವಿಧದಲ್ಲಿ ವಿಶೇಷ ತರಬೇತಿ ಹಾಗೂ ಶಿಕ್ಷಕರಿಗೆ ವಸತಿ ಸಹಿತವಾದ ತರಬೇತಿ ನೀಡಿದ್ದಾರೆ. 2008ರಲ್ಲಿ ಶೇ.41.30 ಫ‌ಲಿತಾಂಶ ಬಂದಿತ್ತು. 2009ರಲ್ಲಿ ಫ‌ಲಿತಾಂಶ(34.07) ತೀರ ಕಳಪೆಯಾಗಿತ್ತು. |

2013ರಲ್ಲಿ ಶೇ.59.36, 2014ರಲ್ಲಿ ಶೇ.60.47, 2015ರಲ್ಲಿ ಶೇ.60.54 ಫ‌ಲಿತಾಂಶ ಬಂದಿತ್ತಾದರೂ, 2016 ಮತ್ತು 2017ರ ವಾರ್ಷಿಕ ಪರೀಕ್ಷೆಯಲ್ಲಿ ಫ‌ಲಿತಾಂಶ ಗಣನೀಯವಾಗಿ ಇಳಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ದಾಖಲೆಯ ಫ‌ಲಿತಾಂಶಕ್ಕೆ ಬೇಕಾದ ಕಾರ್ಯತಂತ್ರ ರೂಪಿಸಿ ಅನುಷ್ಠಾನ ಮಾಡಿದ್ದಾರೆ.

ಪಿಯು ಫ‌ಲಿತಾಂಶ ಸುಧಾರಣೆಗಾಗಿ ಶೈಕ್ಷಣಿಕ ವರ್ಷದ ಆರಂಭದಿಂದಲೇ ಕ್ರಮ ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ವ್ಯಾಕರಣ ಕಲಿಸುವುದು, ರಜಾ ದಿನದ ವಿಶೇಷ ತರಬೇತಿ ಜತೆಗೆ ಉಪನ್ಯಾಸಕರಿಗೂ ತರಬೇತಿ ನೀಡಿದ್ದೇವೆ.
-ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ

ಕಳೆದ 10 ವರ್ಷದ ಫ‌ಲಿತಾಂಶ
*2008-41.30
*2009-34.07
*2010-49.29
*2011-48.93
*2012-57.03
*2013-59.36
*2014-60.47
*2015-60.54
*2016-57.20
*2017-52.38

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next