Advertisement

ಕೋರ್ಟ್‌ ಮೊರೆ ಹೋದ ಆಸ್ತಿ ಮಾಲೀಕರು

04:55 PM Sep 07, 2022 | Team Udayavani |

ಆಳಂದ: ಪಟ್ಟಣದ ರಸ್ತೆ ಅಗಲೀಕರಣ ನಡೆಯ ಬೇಕು ಎನ್ನುವರು ಮತ್ತೂಂದಡೆ ಹಾನಿ ಆಗುವ ಆಸ್ತಿಗೆ ಪರಿಹಾರವನ್ನು ಕೊಡಬೇಕು ಎಂಬ ವಾದ ಮುಂದಿಟ್ಟ ಹಿನ್ನೆಲೆಯಲ್ಲಿ 180ಕ್ಕೆ ಹೆಚ್ಚು ಜನ ಕೋರ್ಟ್‌ ಮೊರೆ ಹೋದ ಕಾರಣ ಇಲ್ಲಿನ ಮುಖ್ಯ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದ ಪುರಸಭೆ ಆಡಳಿತದ ನಡೆಗೆ ಬ್ರೇಕ್‌ ಬಿದ್ದಿದೆ.

Advertisement

ರಸ್ತೆ ಅಗಲೀಕರಣಕ್ಕೆ ಪೂರ್ವ ನಿಯೋಜನೆ ಸಿದ್ಧತೆ, ಖಾಸಗಿ ಆಸ್ತಿಯ ಸಾಧಕ-ಬಾಧಕ ಸೇರಿದಂತೆ ಭೂಸ್ವಾಧೀನ ಪ್ರಕ್ರಿಯೆ ಹೀಗೆ ಇದ್ಯಾವುದು ಇಲ್ಲದೆ, ಜನ ಒಪ್ಪಿಗೆ ಕೊಡುತ್ತಾರೆ ಎಂಬ ಏಕೈಕ ಉದ್ದೇಶ, ಅತಿಯಾದ ವಿಶ್ವಾಸವೇ ಈಗ ಉಲ್ಪಾ ಹೊಡೆದಿದ್ದು, ಇದರಿಂದಾಗಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಅಗಲೀಕರಣಕ್ಕೆ ಹಿನ್ನಡೆಯಾಗಿದೆ. ಇಲ್ಲಿ ಮಾಸ್ಟರ್‌ ಪ್ಲಾನ್‌ ಸರ್ವೇ ಕೂಡಾ ಆಗಿಲ್ಲ. ಯಾವುದೇ ಅನುದಾನವೂ ಬಂದಿಲ್ಲ. ಈ ನಡುವೆ ಪ್ರಮುಖವಾಗಿ ದರ್ಗಾ ಕ್ರಾಸ್‌ನಿಂದ ಹಳೆಯ ತಹಶೀಲ್ದಾರ್‌ ಕಚೇರಿ ವರೆಗೆ ಶಾಸಕರು ಪುರಸಭೆಗೆ 11ಕೋಟಿ ರೂ. ಅನುದಾನವಿಟ್ಟು, ರಸ್ತೆ ಅಗಲೀಕರಣ ಕಾರ್ಯಕ್ಕೆ ಮುಂದಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಆಸ್ತಿಯ ಮಾಲೀಕರು ಕೋರ್ಟ್‌ಗೆ ಹೋಗಿದ್ದರಿಂದ ಪ್ರಕ್ರಿಯೆ ಕೈಬಿಡಲಾಯಿತು ಎಂದು ಶಾಸಕ ಸುಭಾಷ ಗುತ್ತೇದಾರ ಪ್ರತಿಕ್ರಿಯಿಸಿದ್ದಾರೆ.

ಒಟ್ಟು ರಸ್ತೆ ಅಗಲೀಕರಣ ಹಳೆಯ ತಹಶೀಲ್ದಾರ್‌ ಕಚೇರಿಯಿಂದ ದರ್ಗಾ ಕ್ರಾಸ್‌, ಬಸ್‌ ನಿಲ್ದಾಣದಿಂದ ಶ್ರೀರಾಮ ಮಾರುಕಟ್ಟೆ ಮತ್ತು ಹಳೆಯ ಪೊಲೀಸ್‌ ಠಾಣೆಯಿಂದ ಹನುಮಾನ ಮಂದಿರ ವರೆಗೆ ನಡೆಯಬೇಕು ಎಂಬ ಜನರ ಒತ್ತಾಯದ ನಡುವೆ ಪುರಸಭೆ ಆಡಳಿತ ದರ್ಗಾ ಚೌಕ್‌ನಿಂದ ಹಳೆಯ ತಹಶೀಲ್ದಾರ್‌ ಕಚೇರಿ ವರೆಗಿನ ಏಕ ಮಾತ್ರ ರಸ್ತೆ ಅಗಕಲೀಕರಣಕ್ಕೆ ಮುಂದಾಗಿತ್ತು. ಬಸ್‌ ನಿಲ್ದಾಣ ಮತ್ತು ಹನುಮಾನ ರಸ್ತೆ ಅಗಲೀಕರಣಕ್ಕೆ ಕೈಹಾಕಿರಲಿಲ್ಲ. ಮೊದಲ ಹಂತದಲ್ಲಿ ಮುಖ್ಯರಸ್ತೆಯೊಂದೇ ಅಗಲೀಕರಣ ಮಾಡಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿತ್ತು. ಆದರೆ ಇದ್ಯಾವುದಕ್ಕೂ ಸ್ಪಂದನೆ ದೊರೆಯದೇ ಎಲ್ಲ ಲೆಕ್ಕಾಚಾರ ಬುಡಮೇಲಾಗಿದೆ.

ಪುರಸಭೆ ಕೈಗೆತ್ತಿಕೊಂಡ ರಸ್ತೆ ಅಗಲೀಕರಣಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಆರಂಭದ ಸಭೆಯಲ್ಲಿ ಕೆಲವು ಆಸ್ತಿ ಮಾಲೀಕರು ಒಪ್ಪಿಗೆ ಸೂಚಿಸಿದ್ದರೆ, ಇನ್ನೂ ಕೆಲವರು ಪರಿಹಾರ ಕೊಟ್ಟು ಅಗಲೀಕರಣ ಮಾಡಿ ಎಂದು ಒತ್ತಾಯ ಮಾಡಿದ್ದರು. ಇದೆಲ್ಲದರ ನಡುವೆ ಪರಿಹಾರ ನೀಡಲು ಪುರಸಭೆಯಲ್ಲಿ ಪ್ರಾವಿಜ್‌ನ್‌ ಇಲ್ಲ, ಒಪ್ಪಿಗೆ ಪತ್ರಕ್ಕೆ ಸಹಿಹಾಕಿಕೊಡಿ ಎಂದು ಪುರಸಭೆ ಮುಖ್ಯಾಧಿಕಾರಿಗಳು ಪತ್ರ ನೀಡಿದ್ದರು. ಆದರೆ ಒಪ್ಪಿಗೆ ಪತ್ರ ಪಡೆದ ಕೆಲವರು, ಒಪ್ಪಿಗೆ ಕೊಡದೆ ಪರಿಹಾರಕ್ಕಾಗಿ ಕೋರ್ಟ್‌ ಮೋರೆ ಹೋಗಿದ್ದಾರೆ. ಹೀಗಾಗಿ ರಸ್ತೆ ಅಗಲೀಕರಣ ಕೈಬಿಡುವುದು ಉಚಿತವೆಂದು ತೀರ್ಮಾನಿಸಲಾಗಿದೆ. ಇದು ಕೆಲವರಿಗೆ ವರವಾದರೆ, ಇನ್ನೂ ಕೆಲವರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಕಳೆದ ಐದಾರು ತಿಂಗಳಿಂದಲೂ ರಸ್ತೆ ಅಗಲಿ ಕರಣ ಸಭೆ ನಡೆದು, ಒಪ್ಪಿಗೆ, ತಕರಾರು ಹೀಗೆ ಎಲ್ಲವೂ ಹೈಡ್ರಾಮಾವಾಗಿ ನಡೆದು ಕಾಲಹಣ ವಾಗಿದೆ. ಅಗಲೀಕರಣವಾದರೆನೇ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ ಎಂದು ಕೆಲವರು ಹೇಳಿದರೇ, ಮತ್ತೂಂದೆಡೆ ಇರುವಷ್ಟು ಜಾಗವನ್ನು ಕಳೆದುಕೊಂಡು ನಾವು ಬೀದಿಪಾಲಾಗುತ್ತೇವೆ. ಪರಿಹಾರ ಕೊಟ್ಟು ಅಗಲೀಕರಣ ಮಾಡಲು ನಮ್ಮದೇನು ತಕರಾರಿಲ್ಲ ಎನ್ನುತ್ತಲೇ ಬಂದಿದ್ದರು ಕೆಲವರು. ಪೂರ್ವ ನಿಯೋಜಿತವಾಗಿ ಹಾಗೂ ಕಾನೂನು ಚೌಕಟ್ಟಿನಲ್ಲಿ ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆಸದೆ ಇದ್ದಿದ್ದಕ್ಕೆ ಆಡಳಿತಕ್ಕೆ ಹಿಂದೇಟಾಗಿದೆ. ಒಮ್ಮೆ ರಸ್ತೆ ಮಧ್ಯಭಾಗದಿಂದ ತಲಾ 25 ಅಡಿ ಎಂದು ನಿರ್ಧರಿಸಿ ಬಳಿಕ ನಡೆದ ಸಭೆಯಲ್ಲಿ 20 ಅಡಿಗೆ ಎನ್ನಲಾಯಿತು. ಆದರೆ ಸದ್ಯಕ್ಕೆ ಇದು ಸಹ ನಡೆಯದೇ ನನೆಗುದಿಗೆ ಬಿದ್ದಂತಾಗಿದೆ.

Advertisement

ಮೊದಲಿಗೆ ಪುರಸಭೆಯಿಂದ ರಸ್ತೆ ಅಗಲ ಮತ್ತು ಉದ್ದದ ಕುರಿತು ನಿಖರ ದಾಖಲೆ ಬಹುತೇಕ ಇಲ್ಲದೇ ಇರುವುದು ಹಾಗೂ ಆಸ್ತಿಯಲ್ಲಿ ಎಷ್ಟು ನಿವೇಶನ, ಅಂಗಡಿ, ಮನೆಗಳು ಎಂಬ ಅಂಕಿ ಅಂಶಗಳನ್ನು ಬಿಟ್ಟರೆ ಯಾರ ಆಸ್ತಿ ಎಷ್ಟು ಹೋಗುತ್ತದೆ ಎನ್ನುವ ನಿಖರ ಮಾಹಿತಿ ಸಂಗ್ರಹಿಸದೇ, ಈ ಕುರಿತು ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೇ ಇರುವುದು ರಸ್ತೆ ಅಗಲೀಕರಣ ಹಿನ್ನಡೆಗೆ ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next