Advertisement

ಕಾಮಗಾರಿಗಾಗಿ ತಿಂಗಳ ಹಿಂದೆ ಅಗೆದು ಹಾಕಿದ ರಸ್ತೆಯಿಂದ ಸಮಸ್ಯೆ

02:58 PM Jun 20, 2022 | Team Udayavani |

ಕಟಪಾಡಿ: ಈಗಾಗಲೇ ಹದಗೆಟ್ಟು ಸಂಕಟದ ಸಂಚಾರ ನಡೆಸುತ್ತಿದ್ದ ಉದ್ಯಾವರ-ಪಿತ್ರೋಡಿ ರಸ್ತೆ ಸಂಚಾರಿಗಳದ್ದು ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿಯಂತಾಗಿದೆ.

Advertisement

ಉದ್ಯಾವರ ಪೇಟೆಯಿಂದ ಪಿತ್ರೋಡಿ ಸಂಪರ್ಕದ ಈ ಪ್ರಮುಖ ರಸ್ತೆಯು ಸದಾ ವಾಹನ ದಟ್ಟಣೆ, ಜನನಿಬಿಡವಾಗಿರುತ್ತದೆ. ಗ್ರಾ.ಪಂ. ಕಚೇರಿ, ಮೆಸ್ಕಾಂ ಕಚೇರಿ, ಸರಕಾರಿ ಪದವಿ ಪೂರ್ವ ಕಾಲೇಜು, ವಸತಿ ಸಂಕೀರ್ಣಗಳು, ವಾಣಿಜ್ಯ ಸಂಕೀರ್ಣಗಳು, ಸಾಕಷ್ಟು ಜನವಸತಿ ಪ್ರದೇಶವನ್ನು ಹೊಂದಿರುವ ಈ ಭಾಗದಲ್ಲಿನ ಪ್ರಮುಖ ಸಂಪರ್ಕ ರಸ್ತೆಯು ಹೊಂಡಗುಂಡಿಯಿಂದ ಕೂಡಿದ್ದು ರಸ್ತೆಯ ವಿಸ್ತರಣೆ ಯೊಂದಿಗೆ ಸುಸಜ್ಜಿತ ರಸ್ತೆಯ ಆವಶ್ಯಕತೆಯ ಬಗ್ಗೆ ಉದಯವಾಣಿಯು ಈ ಹಿಂದೆಯೂ ವರದಿಯನ್ನು ಪ್ರಕಟಿಸಿತ್ತು.

ಕಾಮಗಾರಿ ಆರಂಭದ ಸಂತಸ

ಆ ನಿಟ್ಟಿನಲ್ಲಿ ʼನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಕಾಮಗಾರಿಯು ಮಂಜೂರು ಗೊಂಡಿದ್ದು ರಸ್ತೆ ಕಾಂಕ್ರಿಟ್‌ಗಾಗಿ ಉದ್ಯಾವರ ಗ್ರಾ.ಪಂ. ಮುಂಭಾಗದಿಂದ ಪಶ್ಚಿಮಕ್ಕೆ ಸುಮಾರು 1 ಕಿ.ಮೀ. ರಸ್ತೆಯನ್ನು ಅಗೆದು ಹಾಕಲಾಗಿದ್ದು, ಈ ಭಾಗದ ಸಂಚಾರಿಗಳಲ್ಲಿ ರಸ್ತೆಯ ಅಭಿವೃದ್ಧಿ ಕಾಮಗಾರಿಯ ಆರಂಭದ ಮುನ್ಸೂಚನೆಯು ಸಂತಸವನ್ನು ತಂದಿತ್ತು.

ಇದೀಗ ರಸ್ತೆ ಅಗೆದು ಹಾಕಿ ಸುಮಾರು 30 ದಿನಗಳು ಕಳೆದರೂ ಯಾವುದೇ ಕಾಮಗಾರಿಯು ನಡೆದಿಲ್ಲ. ಶಾಲಾ ವಾಹನಗಳು, ಬಸ್‌, ರಿಕ್ಷಾ, ಸಹಿತ ನೂರಾರು ವಾಹನಗಳು ಇದೇ ರಸ್ತೆಯನ್ನು ಬಳಸಿ ಸಂಚರಿಸಬೇಕಿದೆ.

Advertisement

ಇದೀಗ ಅಗೆದು ಹಾಕಿದ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರವಾಹನ, ಸೈಕಲ್‌, ರಿಕ್ಷಾದಂತಹ ವಾಹನಗಳ ಬಿಡಿಭಾಗಗಳು ಉದುರಿ ಬೀಳುವ ದುಸ್ಥಿತಿ ಇದೆ. ರಿಕ್ಷಾದಲ್ಲಿ ಪ್ರಯಾಣಿಕರು ಸುಸ್ಥಿತಿಯಲ್ಲಿ ಕುಳಿತುಕೊಳ್ಳಲು ಆಗದ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದು ರಿಕ್ಷಾ ಚಾಲಕರು ಪರಿತಪಿಸುತ್ತಿದ್ದಾರೆ. ಅವ್ಯವಸ್ಥೆ ಸಹಜ, ನಿರ್ಲಕ್ಷ್ಯ ಸಲ್ಲ

ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಇಂತಹ ಅವ್ಯವಸ್ಥೆಯು ಆಗುವುದು ಸಹಜ. ಆದರೂ ಒಂದು ತಿಂಗಳಿಂದ ಅಗೆದು ಹಾಕಿರುವ ರಸ್ತೆಯ ಭಾಗದಲ್ಲಿ ಕಾಮಗಾರಿಯನ್ನು ನಡೆ ಸದೆ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆ ದಾರರ ನಿರ್ಲಕ್ಷ್ಯದಿಂದ ಜನರ ತಾಳ್ಮೆಯನ್ನು ಪರೀಕ್ಷಿಸುವುದು ಸರಿಯಲ್ಲ ಎಂದು ವಾಹನಗಳ ಚಾಲಕರು, ಮಾಲಕರು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸುತ್ತಿದ್ದಾರೆ.

ಧಾರಾಕಾರ ಮಳೆ ಸುರಿದಲ್ಲಿ ಶಾಲಾ ವಾಹನಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳ ಪಾಡು, ದ್ವಿಚಕ್ರ ವಾಹನ ಸವಾರರ ಪಾಡು, ಪಾದಚಾರಿಗಳ ಸಂಚಾರದ ಸರ್ಕಸ್‌, ಶಾಲೆಯ ಮಕ್ಕಳು, ಸರಕಾರಿ ಕಚೇರಿಗಳಿಗೆ ಬರುವ ಗ್ರಾಮಸ್ಥರ ಪಾಡು ಹೇಳತೀರದಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಯನ್ನು ಮುಚ್ಚದೆ ಕಾಮಗಾರಿಯನ್ನು ನಡೆಸಿ ಸುಗಮ ಸಂಚಾರಕ್ಕೆ ಸುವ್ಯವಸ್ಥೆಯನ್ನು ಕಲ್ಪಿಸುವಂತೆ ವಾಹನ ಮಾಲಕರು, ಚಾಲಕರು, ನಿತ್ಯ ಸಂಚಾರಿಗಳು ಆಗ್ರಹಿಸಿದ್ದಾರೆ.

ದುಡಿದ ಹಣ ಗ್ಯಾರೇಜ್‌ ಗೆ: ಮೊದಲೇ ಹೊಂಡ ಗುಂಡಿಯಿಂದ ಕೂಡಿದ್ದ ರಸ್ತೆ. ಇದೀಗ ಕಳೆದ ಒಂದು ತಿಂಗಳಿಂದ ಅಗೆದು ಹಾಕಿದ್ದು, ಗಟ್ಟಿ ಕಲ್ಲುಗಳಿಂದ ಕೂಡಿದ್ದು ರಿಕ್ಷಾ ಸಂಚರಿಸುವಾಗ ಸ್ಪೇರ್‌ ಪಾರ್ಟ್ಸ್ ಉದುರುವಂತಾಗಿದೆ. ಬಾಡಿಗೆಯಲ್ಲಿ ದುಡಿದ ಹಣವನ್ನು ಗ್ಯಾರೇಜ್‌ಗೆ ವಿನಿಯೋಗಿಸು ವಂತಾಗಿದೆ. ಪ್ರಯಾಣಿಕರು ರಿಕ್ಷಾದಲ್ಲಿ ಕುಳಿತು ಕೊಳ್ಳಲು ಅವಸ್ಥೆ ಪಡುವಂತಾಗಿದೆ. ರಸ್ತೆಯನ್ನು ಬಂದ್‌ ಮಾಡದೆ, ವಾಹನ ಸಂಚಾರಕ್ಕೆ ಅವಕಾಶವನ್ನು ನೀಡಿ ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸು ವಂತೆ ಆಗ್ರಹಿಸುತ್ತೇವೆ. –ಗಣೇಶ್‌ ಕೋಟ್ಯಾನ್‌, ಅಧ್ಯಕ್ಷರು, ರಿಕ್ಷಾ ಚಾಲಕರ ಮಾಲಕರ ಸಂಘ, ಉದ್ಯಾವರ

ಶೀಘ್ರ ಕಾಮಗಾರಿ:  ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ 7.5 ಮೀ. ಅಗಲದ ಸುಸಜ್ಜಿತ ರಸ್ತೆಯ ಕಾಮಗಾರಿಯು ನಡೆಯಲಿದೆ. ಟೆಂಡರ್‌ ಅವಧಿಯೊಳಗೆ ಕಾಮಗಾರಿಯನ್ನು ಪೂರೈಸಲಾಗುತ್ತದೆ. ಸಾರ್ವಜನಿಕರ ಸಹಕಾರ ನೀಡಬೇಕಿದೆ. –ಮಿಥುನ್‌, ಇಲಾಖೆಯ ಎಂಜಿನಿಯರ್‌

ಸಂಚಾರ ಸಂಕಷ್ಟ: ದ್ವಿಚಕ್ರವಾಹನದಲ್ಲಿ ಸಂಚರಿಸುವವರಿಗೂ ಸಂಕಟ ತಂದೊಡ್ಡುತ್ತಿದೆ. ಅಗೆದು ಹಾಕಿದ ರಸ್ತೆಯ ಕಲ್ಲಿನಲ್ಲಿ ಸಂಚರಿಸುವಾಗ ಭಯವಾಗುತ್ತಿದೆ.ಮಳೆಗಾಲದಲ್ಲಿ ಈ ಭಾಗವು ಹೊಳೆಯಂತಾಗಲಿದೆ. ಶಾಲಾ ಮಕ್ಕಳ, ಸಾರ್ವಜನಿಕರ ಸಂಚಾರಕ್ಕೂ ಕುತ್ತು ತರಲಿದೆ. ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಇಲಾಖೆಯ ಜಾಣಕುರುಡು ಸಮಂಜಸವಲ್ಲ. ಕೂಡಲೇ ಎಚ್ಚೆತ್ತು ಸಂಚಾರಕ್ಕೆ ಸುವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸುತ್ತೇನೆ. – ಜಯಶ್ರೀ ಕೋಟ್ಯಾನ್‌, ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next