Advertisement

ಸಮಸ್ಯೆ ಪರಿಹಾರಕ್ಕೆ ಸಕಾರಾತ್ಮಕ ಮನೋಭಾವ ಅಗತ್ಯ

12:23 PM Sep 17, 2018 | |

ಬೆಂಗಳೂರು: ಪ್ರಸ್ತುತ ಕಾನೂನು ವ್ಯವಸ್ಥೆ ಮತ್ತು ಅದು ಎದುರಿಸುತ್ತಿರುವ ಸವಾಲುಗಳಿಗೆ ರಚನಾತ್ಮಕ ಮತ್ತು ಸಕಾರಾತ್ಮಕ ಮನೋಭಾವದಿಂದ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ತಿಳಿಸಿದರು. 

Advertisement

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. 

ಅತಿರೇಕದ ವಕಾಲತ್ತು ವಹಿಸುವುದಕ್ಕಿಂತ ಮುಖ್ಯವಾಗಿ ಕಾನೂನಿನ ಮೌಲ್ಯಗಳಿಗೆ ಹೆಚ್ಚು ಒತ್ತುಕೊಡಬೇಕು. ಆ ಮೂಲಕ ಸಾಮಾಜಿಕ ನೆಲೆಗಟ್ಟಿನಲ್ಲಿ ಸ್ಪಂದಿಸುವ ವಕೀಲರಾಗಿ ಗುರುತಿಸಿಕೊಳ್ಳಬೇಕು. ಹಾಗೂ ಕಾನೂನು ವ್ಯವಸ್ಥೆ ಮತ್ತು ಅದು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳಿಗೆ ರಚನಾತ್ಮಕ ಸ್ಪಂದನೆ ಮತ್ತು ಸಕಾರಾತ್ಮಕ ಮನೋಭಾವದಿಂದ ಪರಿಹಾರ ಕಂಡುಕೊಳ್ಳುವುದು ಅವಶ್ಯಕತೆ ಇದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ದೀಪಕ್‌ ಮಿಶ್ರಾ ಕಿವಿಮಾತು ಹೇಳಿದರು. 

ಕಾನೂನು ಕ್ಷೇತ್ರ ಇಂದು ಸಾಕಷ್ಟು ವಿಸ್ತಾರಗೊಂಡಿದೆ. ಬಹುರಾಷ್ಟ್ರೀಯ ಕಂಪೆನಿಗಳು ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸುತ್ತಿವೆ. ಹಾಗಾಗಿ, ಕೇವಲ ಕಾನೂನು ಪದವಿ ಸಾಕಾಗುವುದಿಲ್ಲ. ವಿವಿಧ ಕ್ಷೇತ್ರಗಳಲ್ಲೂ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ ಅವರು, ಯುವ ಕಾನೂನು ಪದವೀಧರರ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯ ಸಮಾಜದ ಬಡವರ್ಗಕ್ಕೆ ನೆರವಾಗಬೇಕು.

ಅಂದಾಗ, ಸಾರ್ಥಕತೆ ಪಡೆದುಕೊಳ್ಳುತ್ತವೆ. ಹಾಗೊಂದು ವೇಳೆ ಈ ಜ್ಞಾನ ಕೇವಲ ಸ್ವಾರ್ಥಕ್ಕೆ ಸೀಮಿತವಾದರೆ, ಜೀವನದಲ್ಲಿ ಅದು ತೃಪ್ತಿ ಮತ್ತು ಶಾಂತಿಯನ್ನು ತಂದುಕೊಡುವುದಿಲ್ಲ ಎಂದೂ ತಿಳಿಸಿದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಹಾಗೂ ಇತರರು ಇದ್ದರು.

Advertisement

ಘಟಿಕೋತ್ಸವ ಸಭಾಂಗಣ ಶೀಘ್ರ: ರಾಷ್ಟ್ರೀಯ ಕಾನೂನು ಶಾಲೆ ಆವರಣದಲ್ಲಿ ಶೀಘ್ರದಲ್ಲೇ ಘಟಿಕೋತ್ಸವ ಸಭಾಂಗಣ ತಲೆಯೆತ್ತಲಿದೆ ಎಂದು ವಿವಿ ಕುಲಾಧಿಪತಿಗಳೂ ಆಗಿರುವ ನ್ಯಾ. ದೀಪಕ್‌ ಮಿಶ್ರಾ ಘೋಷಿಸಿದರು. ರಾಷ್ಟ್ರೀಯ ಕಾನೂನು ಶಾಲೆಯ ಘಟಿಕೋತ್ಸವಕ್ಕಾಗಿ ಯಾವುದೇ ಸಭಾಂಗಣ ಕೂಡ ಇಲ್ಲ.

ಹಾಗಾಗಿ, ಬೇರೆ ಕಡೆಗಳಲ್ಲಿ ಘಟಿಕೋತ್ಸವ ನಡೆಸಲಾಗುತ್ತಿದೆ. ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿದ್ದು, ವಿವಿ ಆವರಣದಲ್ಲೇ ಸಭಾಂಗಣ ನಿರ್ಮಾಣಕ್ಕೆ ಅಗತ್ಯ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. 

ಭುವನ್ಯಾಗೆ 13 ಚಿನ್ನದ ಪದಕ!: ಈ ಚಿನ್ನದ ಹುಡುಗಿ ಈಗಷ್ಟೇ ಕಾನೂನು ಪದವಿ ಪೂರೈಸಿದ್ದಾಳೆ. ಆದರೆ, ಆಗಲೇ ಸಂಸದರಿಗೆ ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಬಗ್ಗೆ ಪಾಠ ಮಾಡುತ್ತಿದ್ದಾಳೆ! ಹೌದು, ರಾಷ್ಟ್ರೀಯ ಕಾನೂನು ಶಾಲೆ ಘಟಿಕೋತ್ಸವದಲ್ಲಿ 13 ಚಿನ್ನದ ಪದಕ ಬಾಚಿಕೊಂಡ ಭುವನ್ಯಾ ವಿಜಯ್‌, ಮಧ್ಯಪ್ರದೇಶದ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ “ಲ್ಯಾಂಪ್‌ ಫೆಲೋಶಿಪ್‌’ ಅಡಿ ನೀತಿ ನಿರೂಪಣೆ, ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸುವುದರ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಪದಕಗಳನ್ನು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಭುವನ್ಯಾ, “ಲ್ಯಾಂಪ್‌ ಫೆಲೋಶಿಪ್‌’ ಕಾರ್ಯಕ್ರಮದಡಿ ಪ್ರಸ್ತುತ ಸಂಸದರಿಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದು ಪೂರ್ಣಗೊಂಡ ನಂತರ ಉನ್ನತ ವ್ಯಾಸಂಗದತ್ತ ಗಮನಹರಿಸುತ್ತೇನೆ’ ಎಂದರು. ಇದೇ ವೇಳೆ ಶ್ರದ್ಧಾ ಗೊಮೆ ಕೂಡ 13 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next