Advertisement

ನಗರ ಹೋಬಳಿಯ ಸಮಸ್ಯೆಗೆ ಸಿಗುವುದೇ ಮುಕ್ತಿ

10:32 AM Jun 25, 2019 | Suhan S |

ಹೊಸನಗರ: ಮಲೆನಾಡಿನ ಮಡಿಲು, ಮುಳುಗಡೆಯ ತವರು ನಗರ ಹೋಬಳಿ ಹಲವು ದಶಕಗಳಿಂದ ಸಾಕಷ್ಟು ಸಮಸ್ಯೆಗಳಿಂದ ನಲುಗಿದೆ. ನಾಡಿಗಾಗಿ ತ್ಯಾಗ ಮಾಡಿದ ಇಲ್ಲಿಯ ಜನ ಮಾತ್ರ ಇಂದಿಗೂ ಇಲ್ಲಗಳ ನಡುವೆಯೇ ಬದುಕು ಸಾಗಿಸುತ್ತಿದ್ದು, ಇವುಗಳಿಗೆಲ್ಲ ಪರಿಹಾರ ಸಿಕ್ಕೀತು ಎಂಬ ಆಶಾಭಾವದಲ್ಲಿದ್ದಾರೆ.

Advertisement

ಜೂನ್‌.25 ರ ಮಂಗಳವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಗ್ರಾಮವಾಸ್ತವ್ಯಕ್ಕಾಗಿ ಹೋಬಳಿ ಕೇಂದ್ರ ನಗರಕ್ಕೆ ಬರುತ್ತಿದ್ದು ಇಲ್ಲಿಯ ಜನರ ಪಾಲಿಗೆ ಹೊಸ ನಿರೀಕ್ಷೆ ಹುಟ್ಟಿಸಿದೆ. ತಮ್ಮ ಸಮಸ್ಯೆಗಳ ಅಹವಾಲು ಸಲ್ಲಿಸಲು ಕಾಯುತ್ತಿದ್ದಾರೆ.

ಮುಳುಗಡೆ ತವರು: ನಗರ ಹೋಬಳಿ ಎಂದರೆ ಮುಳುಗಡೆಯ ತವರು ಎಂದೇ ಪ್ರಖ್ಯಾತಿ. ಕಾರಣ ಲಿಂಗನಮಕ್ಕಿ ಜಲಾಶಯದ ಜೀವನಾಡಿ ಎಂದೇ ಕರೆಸಿಕೊಳ್ಳುವ ಈ ಹೋಬಳಿಯಲ್ಲಿ ವಾರಾಹಿ ಯೋಜನೆಯ ಮಾಣಿ ಡ್ಯಾಂ, ಚಕ್ರ-ಸಾವೇಹಕ್ಲು ಅವಳಿ ಜಲಾಶಯ, ಪಿಕಪ್‌ ಮತ್ತು ಖೈರಗುಂದ ಡ್ಯಾಂಗಳು ಜನ್ಮತಳೆದಿವೆ. ಸುತ್ತಲೂ ಹಿನ್ನೀರು ಆವರಿಸಿಕೊಂಡಿರುವ ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.

ಬಗರ್‌ ಹುಕುಂ ಸಮಸ್ಯೆ: ಬಗರ್‌ ಹುಕುಂ ಈ ಭಾಗದ ಜನರನ್ನು ಸಾಕಷ್ಟು ವರ್ಷಗಳಿಂದ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ತಮ್ಮ ಮನೆ ಹಾಗೂ ಜಮೀನಿನ ಹಕ್ಕುಪತ್ರಕ್ಕಾಗಿ ಹೋಬಳಿಯ ನಿವಾಸಿಗಳು ಇನ್ನಿಲ್ಲದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಪ್ರತಿಭಟನೆ ತೀವ್ರಗೊಂಡಾಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಖುದ್ದು ಭೇಟಿ ನೀಡಿ ಇಲ್ಲಿಯ ಸಮಸ್ಯೆ ಆಲಿಸಿದ್ದಾರೆ. ಈಗ ಅವರೇ ಗ್ರಾಮವಾಸ್ತವ್ಯಕ್ಕೆ ಬರುತ್ತಿದ್ದು ಫಲಾನುಭವಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಶಿಥಿಲಗೊಂಡ ಸಂಡೋಡಿ ಸೇತುವೆ:ಕರಿಮನೆ ಗ್ರಾಪಂ ವ್ಯಾಪ್ತಿಯ ಮಳಲಿ ಗ್ರಾಮದಲ್ಲಿರುವ ಸಂಡೋಡಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಸೇತುವೆ ಮೇಲೆ ಸಂಚರಿಸಲು ಭಯಪಡುವಂತಾಗಿದೆ. ಸುಮಾರು 500 ಕುಟುಂಬಗಳ ಪ್ರಮುಖ ಸಂಪರ್ಕ ಸೇತುವಾಗಿರುವ ಸಂಡೋಡಿ ಸೇತುವೆಗೆ ತುರ್ತು ಪರಿಹಾರ ಕಂಡುಕೊಳ್ಳಬೇಕಿದೆ

Advertisement

ಪದವಿ ಕಾಲೇಜುಗಳಿಲ್ಲ: ಹೌದು ಹೋಬಳಿ ಕೇಂದ್ರ ನಗರದಲ್ಲಿ ಸರ್ಕಾರಿ ಪದವಿ ಕಾಲೇಜು ಬೇಕು ಎಂಬುದು ಗ್ರಾಮಸ್ಥರ ಬಹುದಿನದ ಬೇಡಿಕೆ. ಅಲ್ಲದೆ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ಮತ್ತು ಕಾಲೇಜು ಹಾಸ್ಟೆಲ್ ಇಲ್ಲದಿರುವುದು ಕೂಡ ಇಲ್ಲಿಯ ಸಮಸ್ಯೆ. ತಾಲೂಕು ಕೇಂದ್ರ ಹೊಸನಗರ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗಿ ವಿದ್ಯಾರ್ಥಿನಿಲಯದಲ್ಲಿ ಉಳಿದು ವ್ಯಾಸಾಂಗ ಮಾಡುವುದು ಅನಿವಾರ್ಯವಾಗಿದೆ.

ಸಿಬ್ಬಂದಿ ಕೊರತೆ: ಇಡೀ ಹೋಬಳಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ವೈದ್ಯರು ಕೂಡ ಇಲ್ಲ. ನಗರ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಸ್ಪಾಪ್‌ ನರ್ಸ್‌, ಸಿಬ್ಬಂದಿ ಕೊರತೆ ಇದೆ. ಸಂಪೇಕಟ್ಟೆಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದರೂ ರೋಗಿಗಳ ಸೇವೆಗೆ ಇನ್ನು ಸಮರ್ಪಕವಾಗಿ ತೆರೆದಿಲ್ಲ. ಜಾನುವಾರು ಆಸ್ಪತ್ರೆಗಳಂತೂ ಹೆಸರಿಗಷ್ಟೇ ಎಂಬಂತಾಗಿದೆ. ವೈದ್ಯರ ಕೊರತೆ ಇಲ್ಲಿಯ ರೈತರನ್ನು ಬಾಧಿಸುತ್ತಿದೆ. ಹೈನುಗಾರಿಕೆಯನ್ನೇ ನಂಬಿ ಬಹಳಷ್ಟು ರೈತರು ಮತ್ತು ಕೂಲಿಕಾರ್ಮಿಕರು ತಮ್ಮ ಬದುಕು ಕಟ್ಟಿಕೊಂಡಿದ್ದು ಪಶು ಆಸ್ಪತ್ರೆ ಅವ್ಯವಸ್ಥೆಯಿಂದಾಗಿ ರೈತರು ಹೈನುಗಾರಿಕೆಯಿಂದ ವಿಮುಖರಾಗುವಂತೆ ಮಾಡಿದೆ.

ನಗರ ಹೋಬಳಿಯಪ್ರಮುಖ ಸಮಸ್ಯೆ:

ಯಡೂರು ಭಾಗದ ನಕ್ಸಲ್ ಪೀಡಿತ ಆರೋಪ ಹೊತ್ತಿರುವ ಉಳ್ತಿಗಾ ಗ್ರಾಮಕ್ಕೆ ಸರ್ಕಾರಿ ಬಸ್ಸು ಸೌಲಭ್ಯ ನೀಡುವ ದಶಕದ ಭರವಸೆ ಹಾಗೆ ಇದೆ
ಸುಣ್ಣದಮನೆ-ಮಾಸ್ತಿಕಟ್ಟೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರೂ ಇನ್ನು ಎಂಡಿಆರ್‌ ಆಗೆ ಉಳಿದಿದೆ. ಇದನ್ನು ರಾಜ್ಯಹೆದ್ದಾರಿಯಾಗಿ ಪರಿವರ್ತನೆಯಾಗಿಲ್ಲ
ಯಡೂರಿನಲ್ಲಿ 1 ಕೋಟಿ 25 ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದರೂ ವೈದ್ಯರಿಲ್ಲ. ಸಾರ್ವಜನಿಕ ಸೇವೆಗೂ ಲಭ್ಯವಾಗಿಲ್ಲ
ನಾಡಿಗಾಗಿ ಮನೆಜಮೀನು ಕಳೆದುಕೊಂಡ ಗ್ರಾಮಗಳಲ್ಲಿ ಒಂದಾದ ಕರಿಮನೆ ಗ್ರಾಪಂ ವ್ಯಾಪ್ತಿಯ ಹುಡೋಡಿ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ನೀಡಿಲ್ಲ
ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ನೇಗಿಲೋಣಿ-ಹೆರಟೆ ರಸ್ತೆ ಅಭಿವೃದ್ಧಿಗಾಗಿ ಚುನಾವಣೆ ಬಹಿಷ್ಕಾರದಂತ ಹೋರಾಟ ನಡೆದರೂ ಫಲಕಾರಿಯಾಗಿಲ್ಲ. •ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ಹಾಗಲಮನೆ, ಗೊಲ್ಸಮನೆ, ಬಿಲ್ವಮನೆ, ಬಾಳಮನೆಯ ಸುಮಾರು 10ಕ್ಕು ಹೆಚ್ಚು ಪರಿಶಿಷ್ಠ ಪಂಗಡದ ಮನೆಗಳಿಗೆ ಇಂದಿಗೂ ವಿದ್ಯುತ್‌ ಸಂಪರ್ಕವಿಲ್ಲ
ಅರಮನೆ ಗ್ರಾಪಂ ವ್ಯಾಪ್ತಿಯಲ್ಲಿ ನೆಟ್ವರ್ಕ್‌ ಸಮಸ್ಯೆಯಿಂದ ಕಾರ್ಯನಿರ್ವಹಣೆ ಕಷ್ಟ ಸಾಧ್ಯವಾಗಿದೆ. 2ಜಿಯಿಂದ 3ಜಿ ಪರಿವರ್ತನೆ ಆಗಬೇಕಿದೆ.
ಪ್ರತಿನಿತ್ಯ ಶಾಲಾ ಕಾಲೇಜು ಮಕ್ಕಳು ಸಂಪರ್ಕ ಸಾಧಿಸುವ ಬಿಲ್ಸಾಗರ ಲಾಂಚ್ ದುರ್ಬಲವಾಗಿದ್ದು, ದುರಸ್ಥಿಗೊಳ್ಳುವುದು ಅನಿವಾರ್ಯವಾಗಿದೆ.
ಗ್ರಾಮ ಠಾಣಾ ಪ್ರದೇಶದಲ್ಲಿ ಹಕ್ಕುಪತ್ರಗಳನ್ನೇ ನೀಡಿಲ್ಲ:
ಹೋಬಳಿ ಕೇಂದ್ರ ನಗರ ಮೂಡುಗೊಪ್ಪ ಗ್ರಾಮಪಂಚಾಯ್ತಿಯ ಗ್ರಾಮಠಾಣಾ ಪ್ರದೇಶದಲ್ಲಿ ನೂರಾರು ಜನ ಸಾಕಷ್ಟು ವರ್ಷಗಳಿಂದ ವಾಸವಾಗಿದ್ದಾರೆ. 200ಕ್ಕಿಂತಲೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರೂ ಈ ವರೆಗೆ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದಾಗಿ ಬಡ ಕೂಲಿಕಾರ್ಮಿಕರು ಹಕ್ಕುಪತ್ರದಿಂದ ದೊರಕುವ ಅನೇಕ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಮೊರಾರ್ಜಿ ಶಾಲೆ ಆರಂಭಗೊಳ್ಳಲಿ:

ಮುಳುಗಡೆಯಿಂದ ನಲುಗಿ ಹೋದ ಈ ಹೋಬಳಿ ಜನ ಮೊರಾರ್ಜಿ ಶಾಲೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಈ ಭಾಗಕ್ಕೆ ಇದರ ಅಗತ್ಯ ಕೂಡ ಹೆಚ್ಚಿದೆ. ಚಕ್ರಾನಗರದ ಪ್ರದೇಶದಲ್ಲಿ ಮೊರಾರ್ಜಿ ಶಾಲೆ ನಿರ್ಮಾಣಗೊಳ್ಳುವ ಭರವಸೆ ಸಿಕ್ಕಿತ್ತು. ಆದರೆ ಈವರೆಗೂ ಭರವಸೆಯಾಗಿಯೇ ಉಳಿದಿದೆ.
ಬೆಳೆಯಲಿ ಪ್ರವಾಸೋದ್ಯಮ:

ನಗರ ಹೋಬಳಿ ಪ್ರವಾಸಿ ಕೇಂದ್ರ. ಐತಿಹಾಸಿಕ ಬಿದನೂರು ಕೋಟೆ, ದೇವಗಂಗೆ ಕೊಳ, ಅರಸರ ಸಮಾಧಿ ಸ್ಥಳ. ವೇಣುಗೋಪಾಲ ದೇಗುಲ, ಭುವನಗಿರಿ ಕೊಡಚಾದ್ರಿ, ಬಾಳೆಬರೆ ಫಾಲ್ಸ್, ಯಡೂರು ಅಬ್ಬಿಫಾಲ್ಸ್, ಹಿಡ್ಲಮನೆ ಜಲಪಾತ, ಬರೇಕಲ್ಬತೇರಿ ಗಳಿಗೆಬಟ್ಟಲು ಹೀಗೆ ಸಾಲುಸಾಲು ಪ್ರವಾಸಿ ತಾಣಗಳಿವೆ. ಇಲ್ಲಿಯ ಅಭಿವೃದ್ಧಿಗೆ ಇರುವ ಏಕೈಕ ಆಶಾಕಿರಣ ಎಂದರೆ ಪ್ರವಾಸೋದ್ಯಮ. ಇದಕ್ಕೆ ಉತ್ತೇಜನ ಅಗತ್ಯವಾಗಿದೆ.
•ಕುಮುದ ಬಿದನೂರು
Advertisement

Udayavani is now on Telegram. Click here to join our channel and stay updated with the latest news.

Next