ವೈದ್ಯರ ವೃತ್ತಿ ಜೀವನದಲ್ಲಿ ಆಗಾಗ ವಿಚಿತ್ರ ಎನ್ನುವಂñಹ ಸಂಗತಿಗಳು ಕಾಣ ಸಿಗುವುದುಂಟು. ಅಂತಹ ಒಂದು ವಿಷಯವನ್ನು ಜನರ ಮಾಹಿತಿಗಾಗಿ ಈ ಕೆಳಗೆ ಪ್ರಸ್ತಾವಿಸಲಾಗಿದೆ.
57 ವಯಸ್ಸಿನ ಮಹಿಳೆಯೋರ್ವರು ಮೂಗಿನ ಹೊಳ್ಳೆಯ ಸಮಸ್ಯೆಯಿಂದಾಗಿ ಉಸಿರೆಳೆದುಕೊಳ್ಳುವಲ್ಲಿ ಕಷ್ಟಪಡುತ್ತಿದ್ದು, ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಗೆ ಬಂದರು. ಅಲ್ಲಿನ ಕಿವಿ, ಮೂಗು, ಗಂಟಲು ತಜ್ಞರಾದ ನನ್ನನ್ನು ಭೇಟಿ ಮಾಡಿದಾಗ ಅವರು ಮೂಗಿನ ಹೊಳ್ಳೆಯ ಪರಿಶೀಲನೆ ಮಾಡಿ ಅಲ್ಲಿ ಗೆಡ್ಡೆಯಂತಹಾ ಬೆಳವಣಿಗೆಯೊಂದನ್ನು ಪತ್ತೆ ಹಚ್ಚಲಾಯಿತು. ರೋಗಿ ನಶ್ಯ ಹುಡಿಯನ್ನು ಮೂಗಿಗೆ ಏರಿಸುವ ಅಭ್ಯಾಸವುಳ್ಳವರಾದುದರಿಂದ ಕಾಯಿಲೆಯ ಸ್ವರೂಪವನ್ನು ಖಚಿತವಾಗಿ ತಿಳಿಯುವಲ್ಲಿ ಅಡ್ಡಿಯಾಯ್ತು.
ಆದುದರಿಂದ ಇದರ ಮೂಲ ತಿಳಿಯುವುದಕ್ಕಾಗಿ ವೈದ್ಯರು ರೋಗಿಗೆ ಸಿಟಿ ಸ್ಕ್ಯಾನ್ ಮಾಡುವ ಸಲಹೆ ನೀಡಿದರು. ಮೂಗಿನ ಒಳಗೆ ಇರುವುದು ಕ್ಯಾನ್ಸರ್ ಕಾರಕ ದುರ್ಮಾಂಸವೋ ಅಥವಾ ನಶ್ಯ ಹುಡಿಯ ಪರಿಣಾಮದಿಂದ ಉಂಟಾದ ಅಡಚಣೆಯೋ ಎಂಬುದು ಪ್ರಶ್ನೆಯಾಗಿತ್ತು. ವೈದ್ಯರ ಸಲಹೆಯಂತೆ ಸಿಟಿ ಸ್ಕ್ಯಾನ್ ಮಾಡಿಸಿದ ರೋಗಿ ರಿಪೋರ್ಟ್ ನೊಂದಿಗೆ ವೈದ್ಯರನ್ನು ಪುನಃ ಕಂಡಾಗ ಅವರಿಗೆ ಅಚ್ಚರಿ ಕಾದಿತ್ತು. ದುರ್ಮಾಂಸವೇನೂ ಇಲ್ಲದೆ ಇರುವುದು ರೋಗಿಯ ಮಟ್ಟಿಗೆ ಸಂತೋಷದ ವಿಷಯವೇ ಆದರೂ ವರ್ಷಾನುಗಟ್ಟಲೆ ನಶ್ಯ ಹುಡಿಯ ಬಳಕೆಯಿಂದಾಗಿ ಸ್ವಲ್ಪ ಸ್ವಲ್ಪವೇ ಹುಡಿ ಒಂದು ಕಡೆ ಶೇಖರಣೆಯಾಗಿ ಕಲ್ಲಿನಂತೆ ಗಟ್ಟಿಯಾಗಿ ಇಡಿಯ ಮೂಗಿನ ಹೊಳ್ಳೆಯನ್ನು ಮುಚ್ಚಿ ಬಿಟ್ಟಿತ್ತು. ನಶ್ಯದ ಹುಡಿಯಿಂದಾಗಿ ಅಲ್ಪಸ್ವಲ್ಪ ಅಡಚಣೆಯಾಗುವುದು ಸಾಮಾನ್ಯವಾದರೂ ಈ ರೀತಿಯಲ್ಲಿ ಇಡಿಯ ಮೂಗಿನ ಹೊಳ್ಳೆ ಮುಚ್ಚಿ ಹೋಗುವುದು ಅಪರೂಪ.
ಅದೇನಿದ್ದರೂ ಕ್ಯಾನ್ಸರ್ ಇಲ್ಲ ಎಂದು ದೃಢಪಟ್ಟ ಮೇಲೆ ತಕ್ಕ ಸಲಕರಣೆಗಳ ಸಹಾಯದಿಂದ ವೈದ್ಯರು ನಶ್ಯ ಹುಡಿಯ ಬಂಡೆಯನ್ನು ಪುನಃ ಹುಡಿ ಮಾಡಿ ಆಚೆ ತೆಗೆದರು. ಹೊರಗೆ ತೆಗೆದ ನಶ್ಯದ ಕಲ್ಲಿನ ಚೂರುಗಳನ್ನು ಒಟ್ಟು ಸೇರಿಸಿ ನೋಡಿದಾಗ ಅಷ್ಟು ಚಿಕ್ಕ ಮೂಗಿನ ಒಳಗೆ ಇಷ್ಟೊಂದೆಲ್ಲ ಆಗಿದ್ದು ಹೇಗೆ ಎಂಬ ಜಿಜ್ಞಾಸೆ ಮೂಡದಿರದು.
ಒಟ್ಟಾರೆಯಾಗಿ ಹೇಳುವುದಾದರೆ ನಶ್ಯ ಸಹಿತ ತಂಬಾಕಿನ ಉಪಯೋಗ ಯಾವುದೇ ರೀತಿಯಲ್ಲಿ ಮಾಡಿದರೂ ಸಮಸ್ಯೆ ತಪ್ಪಿದ್ದಲ್ಲ. ಅದೃಷ್ಟವಶಾತ್ ಕಟೀಲು ದುರ್ಗಾ ಸಂಜೀವನೀ ಮಣಿಪಾಲ (ಕಟೀಲು ಕೆ.ಎಂ.ಸಿ.) ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಹಾಗೂ ಸಿಟಿ ಸ್ಕ್ಯಾನ್ ಎರಡೂ ಲಭ್ಯವಿದ್ದುದರಿಂದ ಸೂಕ್ತ ಸಮಯದಲ್ಲಿ ಪತ್ತೆಯಾಗಿ ಸಮಸ್ಯೆ ಪರಿಹಾರವಾಗಿದ್ದು ರೋಗಿ ಹಾಗೂ ವೈದ್ಯರು ಇಬ್ಬರೂ ನಿಟ್ಟುಸಿರು ಬಿಡುವಂತಾಯಿತು.
–
ಡಾ| ಉಣ್ಣಿಕೃಷ್ಣನ್ ನಾಯರ್
ಪ್ರೊಫೆಸರ್,
ಇಎನ್ಟಿ ಸರ್ಜನ್ ದುರ್ಗಾ ಸಂಜೀವನಿ
ಮಣಿಪಾಲ ಆಸ್ಪತ್ರೆ, ಕಟೀಲು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇಎನ್ಟಿ ವಿಭಾಗ, ಕೆಎಂಸಿ, ಮಂಗಳೂರು)