Advertisement

ಪಶುಪಾಲನಾ ಆಸ್ಪತ್ರೆಗಳಲ್ಲಿ ಕಾಡುತ್ತಿದೆ ಸಿಬಂದಿ ಸಮಸ್ಯೆ

10:20 AM Feb 24, 2020 | mahesh |

ಹೈನುಗಾರಿಕೆಯೊಂದಿಗೆ ಜನರು ತಮ್ಮ ಜೀವನವನ್ನು ರೂಪಿಸಿಕೊಂಡರೂ ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ತುರ್ತು ಅಗತ್ಯಕ್ಕೆ ಪಶುವೈದ್ಯರ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದೆ.

Advertisement

ಕುಂದಾಪುರ: ಹೈನುಗಾರಿಕೆಯಲ್ಲಿ ಅವಿಭಜಿತ ಕುಂದಾಪುರ ತಾಲೂಕು ಪ್ರಮುಖವಾಗಿ ಗುರುತಿಸಿಕೊಂಡಿದೆ. ಆದರೆ ಹೈನುಗಾರರಿಗೆ ಸಕಾಲದಲ್ಲಿ ನೆರವಾಗಬೇಕಿರುವ ಪಶು ಪಾಲನಾ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ತೀವ್ರವಾಗಿದೆ. ತಾಲೂಕಿನಲ್ಲಿ ಪಶು ವೈದ್ಯಕೀಯ ಸೇವೆ ನೀಡುವ ಸಲುವಾಗಿ ಒಟ್ಟು 27 ಪಶು ಪಾಲನಾ ಸಂಸ್ಥೆಗಳಿದ್ದು, ಇದರಲ್ಲಿ ನಿಯೋಜಿಸಲಾದ ಒಟ್ಟು 106 ಹುದ್ದೆಗಳಲ್ಲಿ ಕೇವಲ 29 ಹುದ್ದೆಯಷ್ಟೇ ಭರ್ತಿಯಾಗಿದ್ದು, ಬಾಕಿ 77 ಹುದ್ದೆಗಳು ಖಾಲಿಯಿವೆ.

ಕುಂದಾಪುರ ಹಾಗೂ ಬೈಂದೂರು ತಾಲೂಕು ಗಳನ್ನೊಳಗೊಂಡ ಅವಿಭಜಿತ ತಾಲೂಕಲ್ಲಿ ಪಶು ಚಿಕಿತ್ಸಾಲಯ, ಪಶು ಆಸ್ಪತ್ರೆ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳೆಲ್ಲ ಸೇರಿ ಒಟ್ಟು 27 ಪಶು ಪಾಲನಾ ಕೇಂದ್ರಗಳಿವೆ. ಈ ಪೈಕಿ 4 ಪಶು ವೈದ್ಯಾಧಿಕಾರಿ, 7 ಹಿರಿಯ ಪಶು ಪಾಲನಾ ಪರಿವೀಕ್ಷಕರ ಹುದ್ದೆಗಳು ಸೇರಿ 77 ಹುದ್ದೆಗಳು ಖಾಲಿಯಿವೆ. 29 ಹುದ್ದೆಗಳು ಭರ್ತಿಯಾಗಿದ್ದು, ಬಿ ದರ್ಜೆಯ ಹುದ್ದೆಯಲ್ಲಿ 11 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ.

14 ರಲ್ಲಿ 6 ಭರ್ತಿ
ಕುಂದಾಪುರ ತಾಲೂಕು ಪಶು ಆಸ್ಪತ್ರೆಯಲ್ಲಿ 14 ಹುದ್ದೆಗಳಿದ್ದು, ಇದರಲ್ಲಿ 6 ಮಾತ್ರ ಭರ್ತಿಯಾಗಿದೆ. ಬಾಕಿ 8 ಹುದ್ದೆ ಖಾಲಿಯಿದೆ. ಬೈಂದೂರು ಹಾಗು ವಂಡ್ಸೆ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಹುದ್ದೆ ಮಾತ್ರ ಭರ್ತಿಯಾಗಿದ್ದು, ಬಾಕಿ 3 ಹುದ್ದೆಗಳು ಖಾಲಿಯಿವೆ. ಶಂಕರನಾರಾಯಣದಲ್ಲಿ ವೈದ್ಯಾಧಿಕಾರಿ, ಸಹಾಯಕ ಹುದ್ದೆ ಭರ್ತಿಯಾಗಿದ್ದು, 2 ಹುದ್ದೆ ಖಾಲಿಯಿವೆ.

4 ಕಡೆ ವೈದ್ಯಾಧಿಕಾರಿಗಳೇ ಇಲ್ಲ
ಬೆಳ್ವೆ, ಅಮಾಸೆಬೈಲು, ಬಿದ್ಕಲ್‌ಕಟ್ಟೆ, ಹುಣ್ಸೆಮಕ್ಕಿ, ಕೆರಾಡಿ, ಹಳ್ಳಿಹೊಳೆ, ಜಡ್ಕಲ್‌, ಕೊಲ್ಲೂರು, ನಾಡ, ಹೆಮ್ಮಾಡಿ, ಕಿರಿಮಂಜೇಶ್ವರ ಹಾಗೂ ಗುಜ್ಜಾಡಿ ಸೇರಿ ಒಟ್ಟು 12 ಪಶು ಚಿಕಿತ್ಸಾಲಯಗಳಿವೆ. ಈ ಪೈಕಿ ನಾಡ, ಹಳ್ಳಿಹೊಳೆ, ಜಡ್ಕಲ್‌ ಹಾಗೂ ಬಿದ್ಕಲ್‌ಕಟ್ಟೆಯಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿಯಿವೆ.

Advertisement

ಪ್ರಸ್ತಾವನೆ ಸಲ್ಲಿಸಲಾಗಿದೆ
ತಾಲೂಕು ವ್ಯಾಪ್ತಿಯ ಖಾಲಿಯಿರುವ ಹುದ್ದೆ ಭರ್ತಿಗೆ ಪ್ರತಿ ವರ್ಷವೂ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಕಳುಹಿಸಲಾಗುತ್ತಿದೆ. ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಪಶು ವೈದ್ಯಕೀಯ ಕ್ಷೇತ್ರದ ಕುರಿತಂತೆ ಜಿಲ್ಲೆಯ ಜನ ಆಸಕ್ತಿ ವಹಿಸದೇ ಇರುವುದರಿಂದ ಹುದ್ದೆ ಭರ್ತಿ ಮಾಡಲು ಸಮಸ್ಯೆಯಾಗುತ್ತಿದೆ.
– ಡಾ| ಸೂರ್ಯನಾರಾಯಣ ಉಪಾಧ್ಯಾಯ, ಸಹ ನಿರ್ದೇಶಕರು, ಕುಂದಾಪುರ ತಾ| ಪಶುಪಾಲನಾ ಇಲಾಖೆ

ಮನವಿ ಸಲ್ಲಿಸಲಾಗಿದೆ
ಉಡುಪಿ ಜಿಲ್ಲೆಯಲ್ಲಿಯೇ ಶೇ. 28 ಹುದ್ದೆ ಮಾತ್ರ ಭರ್ತಿಯಾಗಿದ್ದು, ಶೇ.78 ರಷ್ಟು ಖಾಲಿಯಿದೆ. ಪ್ರತಿ ಸಭೆಗಳಲ್ಲಿಯೂ ಈ ಬಗ್ಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ ಭರ್ತಿ ಪ್ರಕ್ರಿಯೆ ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಕಳೆದ 10 ವರ್ಷಗಳಿಂದಲೂ ಈ ಸಮಸ್ಯೆಯಿದೆ. ವರ್ಷದಲ್ಲಿ ನಿವೃತ್ತಿಯಾದಷ್ಟು ಹುದ್ದೆಗಳು ಭರ್ತಿಯಾಗುತ್ತಿಲ್ಲ. – ಡಾ| ಹರೀಶ್‌ ಥಾಮನ್‌ಕರ್‌, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ ಉಡುಪಿ

11 ರಲ್ಲಿ 7 ಖಾಲಿ
ಮಾಂಡಿ – ಮೂರುಕೈ, ಕೊರ್ಗಿ, ಕುಂಭಾಸಿ, ಬಸ್ರೂರು, ಅಂಪಾರು, ಆಜ್ರಿಯ ಪಶು ಪಾಲನಾ ಕೇಂದ್ರಗಳಲ್ಲಿ ಹಿರಿಯ ಪಶು ಪಾಲನಾ ಪರಿವೀಕ್ಷಕರ ಹುದ್ದೆ ಖಾಲಿಯಿವೆ. ಸಿದ್ದಾಪುರದಲ್ಲಿ ಭರ್ತಿಯಾಗಿದ್ದರೂ, ಅವರು ಬೇರೆಡೆಗೆ ನಿಯೋಜನೆಗೊಂಡಿದ್ದರಿಂದ ಖಾಲಿಯಿವೆ. ಇನ್ನುಳಿದಂತೆ ಕಾಲೊ¤àಡು, ಗಂಗೊಳ್ಳಿ, ಕಂಡೂರು, ಕಾಳಾವರದಲ್ಲಿ ಹಿರಿಯ ಪಶು ಪಾಲನಾ ಪರಿವೀಕ್ಷಕರ ಹುದ್ದೆ ಭರ್ತಿಯಾಗಿದೆ. ಇತ್ತೀಚಿಗಿನ ದಿನಗಳಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ರೋಗಗಳ ಸಂಖ್ಯೆಯೂ ಹೆಚ್ಚಿದ್ದು, ಕೃತಕ ಗರ್ಭಧಾರಣೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ತಜ್ಞ ಸರಕಾರಿ ಪಶು ವೈದ್ಯರಿದ್ದರೆ ಉತ್ತಮ. ಆದರೆ ಪಶು ವೈದ್ಯರ ಸಂಖ್ಯೆ ಕಡಿಮೆ ಇರುವುದರಿಂದ ಖಾಸಗಿಯವರನ್ನೇ ಅವಲಂಬಿಸುವಂತಾಗಿದೆ.

ಕೊರತೆಗೇನು ಕಾರಣ?
ಪಶು ಆಸ್ಪತ್ರೆ ಹಾಗೂ ಪಶು ಪಾಲನಾ ಕೇಂದ್ರಗಳಲ್ಲಿ ಈ ಮಟ್ಟಿಗಿನ ಸಿಬಂದಿ ಕೊರತೆಗೆ ಅವಿಭಜಿತ ದ.ಕ. ಜಿಲ್ಲೆಗಳಿಂದ ಪಶು ವೈದ್ಯಕೀಯ ಕ್ಷೇತ್ರದ ಕುರಿತಂತೆ ಯುವಕರು ನಿರಾಸಕ್ತಿ ವಹಿಸುತ್ತಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದವರು ವೃತ್ತಿ ಜೀವನದ ಆರಂಭದಲ್ಲಿ ಇಲ್ಲಿಗೆ ಬಂದರೂ, ಆ ಬಳಿಕ ತಮ್ಮ ಊರಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಇದರಿಂದ ಇಲ್ಲಿನ ಹುದ್ದೆಗಳು ಖಾಲಿಯಾಗಿಯೇ ಉಳಿಯುತ್ತದೆ ಎನ್ನುವುದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

ಸಿಬಂದಿ ಸಮಸ್ಯೆ
ಕುಂದಾಪುರ ತಾಲೂಕಲ್ಲಿ ಒಟ್ಟು 1.10 ಲಕ್ಷ ಜಾನುವಾರು (ದನ, ಎಮ್ಮೆ, ಹಂದಿ)ಗಳಿವೆ. ದಿನಕ್ಕೆ 75 ರಿಂದ 80 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಇದರಂತೆ ವಾರ್ಷಿಕ 2.70 ಕೋಟಿ ಲೀಟರ್‌ಗೂ ಅಧಿಕ ಪ್ರಮಾಣದ ಹಾಲು ಉತ್ಪಾದನೆಯಾಗುತ್ತಿದೆ. ಇಲಾಖೆಯ ಲೆಕ್ಕ ಪ್ರಕಾರ 5 ಸಾವಿರ ಜಾನುವಾರುಗಳಿಗೆ 1 ಪಶು ಪಾಲನಾ ಸಂಸ್ಥೆ ಇರಬೇಕಿದ್ದು, ಅದರ ಸಮಸ್ಯೆ ಏನಿಲ್ಲ. ಆದರೆ ಇರುವಂತಹ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ.

106 ಹುದ್ದೆಗಳಲ್ಲಿ 29 ಭರ್ತಿ, 77 ಹುದ್ದೆ ಖಾಲಿ. 11 ಮಂದಿ ಹೊರಗುತ್ತಿಗೆ ಆಧಾರದಲ್ಲಿ ನಿಯೋಜನೆ
ಕುಂದಾಪುರ ತಾ| ಪಶು ಆಸ್ಪತ್ರೆಯಲ್ಲಿ 14 ರಲ್ಲಿ 6 ಹುದ್ದೆ ಭರ್ತಿ, 8 ಖಾಲಿ.
4 ಪಶು ವೈದ್ಯಾಧಿಕಾರಿ, 7 ಹಿರಿಯ ಪಶು ಪಾಲನಾ ವೈದ್ಯಾಧಿಕಾರಿ ಹುದ್ದೆಗಳು ಖಾಲಿ.

Advertisement

Udayavani is now on Telegram. Click here to join our channel and stay updated with the latest news.

Next