Advertisement
ವಿಟ್ಲ: ವಿಟ್ಲ ಪ.ಪಂ.ಮತ್ತು ಸುತ್ತಮುತ್ತಲ ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಅಧಿಕೃತವಾಗಿ ನೀರು ಪೂರೈಕೆ ಆರಂಭವಾಗಿಲ್ಲ. ಆದರೆ ಮಳೆ ಇನ್ನೂ ಕೆಲವು ದಿನಗಳ ಕಾಲ ಬಾರದಿದ್ದಲ್ಲಿ ಟ್ಯಾಂಕರ್ ನೀರು ವಿಟ್ಲ ಪ.ಪಂ.ವ್ಯಾಪ್ತಿಯಲ್ಲಿ ಮಾತ್ರವಲ್ಲ ಸುತ್ತಮುತ್ತಲ ಗ್ರಾ.ಪಂ.ಗಳಿಗೂ ಅನಿವಾರ್ಯವಾಗಬಹುದು.
ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ 8 ಅಣೆಕಟ್ಟೆಗಳು ಬರಿದಾಗಿವೆ. ವಿಟ್ಲ ದೇವಸ್ಥಾನ ರಸ್ತೆ, ಮೇಗಿನಪೇಟೆ, ಶಿವಾಜಿನಗರ, ಪಳಿಕೆ, ಪುಚ್ಚೆಗುತ್ತು, ದರ್ಬೆ ಇತ್ಯಾದಿ ಕಡೆಗಳಲ್ಲಿ ನೀರಿಗೆ ತತ್ವಾರ ಆರಂಭವಾಗಿದೆ. ಬಾವಿಗಳಲ್ಲಿ ನೀರು ಆರಿದೆ. ಕೆಲವು ಕಡೆಗಳಲ್ಲಿ ಪಂ. ನೀರು 2ದಿನಗಳಿಗೊಮ್ಮೆ ತಲುಪುತ್ತಿದೆ. ನೀರು ಬಿಡುವ ಅವಧಿಯನ್ನೂ ಕಡಿತಗೊಳಿಸ ಲಾಗುತ್ತಿದೆ. ಸೇರಾಜೆಯಲ್ಲಿ ಶಾಫಿ ಅವರು ತನ್ನ ಕೊಳವೆಬಾವಿಯಿಂದ ಪೈಪ್‌ಲೈನ್‌ಗೆ ನೀರು ಒದಗಿಸುತ್ತಿರುವುದು ಜನತೆಗೆ ಅನುಕೂಲವಾಗಿದೆ. ಕನ್ಯಾನ – ಕರೋಪಾಡಿ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇರುವ ಕನ್ಯಾನ ಮತ್ತು ಕರೋಪಾಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿದ್ಯುತ್ ಸಮಸ್ಯೆಯೇ ಪ್ರಮುಖವಾಗಿದ್ದು, ಫಲಾನುಭವಿಗಳಿಗೆ ನೀರು ತಲುಪುತ್ತಿಲ್ಲ. ಶಿರಂಕಲ್ಲು ಇಚ್ಛೆ, ವಿವಿಧ ಕಾಲನಿಗಳು ನೀರಿಲ್ಲದೇ ಕಂಗಾಲಾಗಿವೆ. ಕೆಲವು ಕಡೆಗಳಲ್ಲಿ ಅರ್ಧ ಕಿ.ಮೀ. ದೂರ ನೀರು ಹೊತ್ತೂಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
ಮಾಣಿಲ ಗ್ರಾಮದಲ್ಲಿ 2 ದಿನಗಳಿಗೊಮ್ಮೆ ನೀರು ತಲುಪುತ್ತಿದೆ. ಪರಸ್ಪರ ಹೊಂದಾಣಿಕೆ ಮೂಲಕ ನೀರಿನ ಸಮಸ್ಯೆ ಬಿಗಡಾಯಿಸದಂತೆ ನಿಭಾಯಿಸಲಾಗು ತ್ತಿದೆ. ಪೆರುವಾಯಿ ಸ್ಥಿತಿಯೂ ಭಿನ್ನವಾಗಿಲ್ಲ. ಸಾಲೆತ್ತೂರು ಗ್ರಾಮದಲ್ಲಿ ನೀರೂ ಇಲ್ಲ, ವಿದ್ಯುತ್ ಕೂಡಾ ಇಲ್ಲ.
Advertisement
ಕೊಳ್ನಾಡಿನಲ್ಲಿ 2 ಹೊಸ ಕೊಳವೆ ಬಾವಿಕೊಳ್ನಾಡು ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಸ್ಥಳೀಯ ಕೊಳವೆಬಾವಿ ಇನ್ನಿತರ ನೀರಿನ ಯೋಜನೆಗಳ ಮೂಲಕ ನೀರು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಗಂಭೀರ ಸಮಸ್ಯೆಯಿಲ್ಲ. 2 ಹೊಸ ಕೊಳವೆಬಾವಿಗಳನ್ನು ನಿರ್ಮಿಸಲಾಗಿದೆ. ಪ್ರತಿದಿನವೂ ನೀರು ಒದಗಿಸ ಲಾಗುತ್ತದೆ. ಪಂಪ್ ಕೆಟ್ಟುಹೋದರೆ/ವಿದ್ಯುತ್ ಕಡಿತ ದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಸ್ತವ್ಯಸ್ತಗೊಂಡಾಗ ಸಮಸ್ಯೆ ಉಂಟಾಗುತ್ತದೆ ಹೊರತು ಸದ್ಯ ನೀರಿನ ಅಭಾವವಿಲ್ಲ. ಇತರ ಕಡೆ ಸಮಸ್ಯೆ ಇದೆ
ಪುಣಚ, ವಿಟ್ಲಮುಟ್ನೂರು, ಅಳಿಕೆ, ವಿಟ್ಲಪಟ್ನೂರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಮಳೆಗಾಗಿ ಎಲ್ಲೆಡೆ ಪ್ರಾರ್ಥನೆ ಆರಂಭವಾಗಿದೆ. ನೀರಿಲ್ಲದೇ ಗಂಭೀರ ಸ್ಥಿತಿ ನಿರ್ಮಾಣವಾಗಿದೆ. ಅಕ್ಕಪಕ್ಕದಲ್ಲಿ ನೀರಿನ ಮೂಲ ಹೊಂದಿದವರು ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯೆಯನ್ನು ನಿಭಾಯಿಸುತ್ತಿದ್ದಾರೆ. ಕೃಷಿ ಕಷ್ಟ
ಕೃಷಿಗೂ ನೀರು ಇಲ್ಲದಾಗಿದೆ. ಗಂಟೆಗಟ್ಟಲೆ ಹಾರಾ ಡುತ್ತಿದ ಸ್ಪ್ರಿಂಕ್ಲರ್‌ಗಳು ಅವಧಿಯನ್ನು ಕಡಿತಗೊಳಿಸಿವೆ. ಅಡಿಕೆ, ತೆಂಗು, ಬಾಳೆಗಳು ಕೆಂಪಗಾಗಿವೆ. ಎಲ್ಲರೂ ನೀರನ್ನು ಹಿತಮಿತವಾಗಿ ಬಳಸಬೇಕು
ಪಶ್ಚಿಮ ಘಟ್ಟದಲ್ಲಿ ಮರ ಕಡಿದ ಪರಿಣಾಮ, ನೇತ್ರಾವತಿ ನದಿ ತಿರುಗುವ ಯೋಜನೆಗಳನ್ನು ರೂಪಿಸಿದ ಪರಿಣಾಮ ಏನೆಂಬುದನ್ನು ಈಗ ಅರ್ಥೈಸುವುದಕ್ಕೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಗಿಡ ನೆಟ್ಟು, ಬೆಳೆಸಬೇಕು. ನೀರಿಂಗಿಸುವ ಯೋಜನೆಯನ್ನು ಜಾರಿಗೊಳಿಸ ಬೇಕು. ಎಲ್ಲರೂ ನೀರನ್ನು ಹಿತಮಿತವಾಗಿ ಬಳಸಬೇಕು. ಇತರರಿಗೆ ಉಪಕರಿಸಬೇಕು.
- ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಕೇಪುವಿಗೆ ಟ್ಯಾಂಕರ್ ನೀರು ಅನಿವಾರ್ಯ
ಕೇಪು ಗ್ರಾಮದ ನೀರ್ಕಜೆ, ಕುಕ್ಕೆಬೆಟ್ಟು, ಕುದ್ದುಪದವು, ಕುಂಡಕೋಳಿ, ಅಡ್ಯನಡ್ಕ ಮೊದಲಾದೆಡೆ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೊಳವೆಬಾವಿಗಳಲ್ಲಿ ನೀರಿಲ್ಲ. ಹೊಸ ಎರಡು ಕೊಳವೆಬಾವಿಗಳೂ ಪ್ರಯೋಜನವಾಗಿಲ್ಲ. ಮಳೆ ತಡವಾದರೆ ಟ್ಯಾಂಕರ್ ನೀರು ಅನಿವಾರ್ಯ. ಆದರೆ ನೀರು ಪೂರೈಕೆಗೆ ಟ್ಯಾಂಕರ್ ದೊರಕುವುದು ಕಷ್ಟವಾಗಿದೆ. ಬಿಲ್ ಪಾವತಿ ವ್ಯವಸ್ಥೆಯೂ ಸಂದಿಗ್ಧ ಸ್ಥಿತಿಯನ್ನು ಉಂಟುಮಾಡುತ್ತದೆ.
– ತಾರಾನಾಥ ಆಳ್ವ ಕುಕ್ಕೆಬೆಟ್ಟು
ಕೇಪು ಗ್ರಾ.ಪಂ. ಅಧ್ಯಕ್ಷರು ಕೊಳವೆಬಾವಿಯಲ್ಲಿ ನೀರು ಕಡಿಮೆ
ಕುಡಿಯುವುದಕ್ಕೆ ಈಗ ನೀರಿದೆ. ಮಳೆ ಶೀಘ್ರದಲ್ಲಿ ಬರದಿದ್ದಲ್ಲಿ ಕಷ್ಟಪಡಬೇಕಾಗುತ್ತದೆ. ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆ. ಅಡಿಕೆ, ತೆಂಗಿನ ಮರಗಳು ಬಾಡಿ ಹೋಗಿವೆ.
– ಪಶುಪತಿ ಭಟ್, ಬಾಳೆಕೋಡಿ, ಕನ್ಯಾನ ಬಾವಿಗಳು ಕಡಿಮೆ
ವಿಟ್ಲ ಪ.ಪಂ. ವ್ಯಾಪ್ತಿಯ ಆವೆತ್ತಿಕಲ್ಲು ಒಕ್ಕೆತ್ತೂರು ಮಾಡ ಸುತ್ತಮುತ್ತ ಬಾವಿಗಳು ಕಡಿಮೆಯಿದೆ. ಎಲ್ಲರೂ ಪಂ. ನೀರನ್ನೇ ಅವಲಂಬಿಸಿದ್ದಾರೆ. ಸದ್ಯಕ್ಕೆ ನೀರು ಬರುತ್ತಿದೆ. ಆದರೆ ಹಲವರು ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಕಡಿತ, ಪಂಪ್ ಕೆಟ್ಟುಹೋದಾಗ ಶೋಚನೀಯ ಸ್ಥಿತಿಯಿದೆ.
– ಸಿ.ಕೆ. ಗೌಡ, ವಿಟ್ಲ ನಿವಾಸಿಗಳ ಬೇಡಿಕೆಗಳು
· ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
· ವಿದ್ಯುತ್ ಕಡಿತದ ಸಮಸ್ಯೆಯನ್ನು ನಿವಾರಿಸಬೇಕು.
· ಸಾರ್ವಜನಿಕ ಕೆರೆಗಳ ಹೂಳೆತ್ತಬೇಕು.
· ಗ್ರಾಮಗಳಲ್ಲಿ ಮಳೆಗಾಲದಲ್ಲಿ ನೀರಿಂಗಿಸಲು ಕ್ರಮ ಕೈಗೊಳ್ಳಬೇಕು. ಉದಯವಾಣಿ ಆಗ್ರಹ
ವಿಟ್ಲ ಪ.ಪಂ. ಅಥವಾ ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಪ್ರಯತ್ನ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕು. ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಬಾವಿ, ಕೆರೆ, ಅಣೆಕಟ್ಟೆಗಳನ್ನು ಹೆಚ್ಚು ಕಡೆಗಳಲ್ಲಿ ನಿರ್ಮಿಸಬೇಕು. ನೀರಿನ ಸಮಸ್ಯೆ ಜಾಸ್ತಿ ಇರುವ ಪ್ರದೇಶಕ್ಕೆ ನೀರಿನ ಯೋಜನೆಗಳನ್ನು ಅನುಷ್ಠಾನಿಸಬೇಕು. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವ ಬಗ್ಗೆ ಜಾಗೃತರಾಗಬೇಕು. - ಉದಯಶಂಕರ್ ನೀರ್ಪಾಜೆ