Advertisement

ಸಮಸ್ಯೆ ಕರಾವಳಿಯದ್ದು; ಪರಿಹಾರ ಚೆನ್ನೈಯಲ್ಲಿ!

10:19 AM Nov 24, 2022 | Team Udayavani |

ಮಹಾನಗರ: ರಾಜ್ಯದ ಕರಾವಳಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಚಟುವಟಿಕೆಗಳಿಗೆ ಸುಲಭದಲ್ಲಿ ಸಿಆರ್‌ಝಡ್‌ ಅನುಮತಿ ಪಡೆಯುವ ಉದ್ದೇಶದಿಂದ ಸುಸ್ಥಿರ ಕರಾವಳಿ ನಿರ್ವಹಣ ರಾಷ್ಟ್ರೀಯ ಕೇಂದ್ರವನ್ನು (ಎನ್‌ಸಿಎಸ್‌ ಸಿಎಂ) ಮಂಗಳೂರಿನಲ್ಲೇ ಸ್ಥಾಪಿಸುವ ಬಹುಕಾಲದ ಯೋಜನೆ ಆರಂಭಕ್ಕೆ ಸರಕಾರ ಇನ್ನೂ ಮೀನಮೇಷ ಎಣಿಸುತ್ತಿದೆ!

Advertisement

ಹೀಗಾಗಿ ಕರಾವಳಿ ಭಾಗದ ಹಲವು ಯೋಜನೆಗಳು ಸಿಆರ್‌ಝಡ್‌ ಅನುಮತಿ ಗಾಗಿ ಚೆನ್ನೈಯನ್ನೇ ಅವ ಲಂಬಿಸಬೇಕಾಗಿದೆ. ತಿಂಗಳುಗಟ್ಟಲೆ ಕಾಯಬೇಕಾಗಿದೆ.

ಕಡಲ ತೀರ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಸಹಿತ ಸಣ್ಣ ಪುಟ್ಟ ನಿರ್ಮಾಣ ಕಾಮಗಾರಿಗೆ ಆಯಾ ಜಿಲ್ಲಾಡಳಿತ ಅನುಮತಿ ನೀಡುತ್ತದೆ. ಅದಕ್ಕೂ ಮಿಗಿಲಾದ ಕಾಮಗಾರಿಗೆ ಸಿಆರ್‌ಝಡ್‌ ಬೆಂಗಳೂರು ಕೇಂದ್ರ ಕಚೇರಿಯ ಅನುಮೋದನೆ ಬೇಕಾಗುತ್ತದೆ. ಅದರಲ್ಲಿಯೂ ಸೇತುವೆ ನಿರ್ಮಾಣ, ಕೈಗಾರಿಕೆ ಸ್ಥಾಪನೆ, ಉದ್ಯಮ ಸ್ಥಾಪನೆ ಸಹಿತ ವಿವಿಧ ಸಂದರ್ಭ ಸಿಆರ್‌ ಝಡ್‌ ಅನುಮೋದನೆಗೂ ಮುನ್ನ ಚೆನ್ನೈ ಕಚೇರಿಯ ಮ್ಯಾಪ್‌ ಅಂತಿಮ ಗೊಳಿಸಬೇಕಾಗುತ್ತದೆ. ಇದಕ್ಕೆ ಕೆಲವು ತಿಂಗಳು ಅಗತ್ಯವಿರುವ ಕಾರಣದಿಂದ ಸಂಬಂಧಪಟ್ಟವರು ಕಾಯುವ ಪ್ರಮೇಯವೇ ಅಧಿಕ.

ಹೀಗಾಗಿ ಚೆನ್ನೈ ಕೇಂದ್ರ ವನ್ನು ರಾಜ್ಯದ ಕರಾವಳಿ ಭಾಗಕ್ಕೆ ಅನ್ವಯವಾಗುವಂತೆ ಹೆಚ್ಚುವರಿಯಾಗಿ ತೆರೆಯಲು ಅವಕಾಶ ನೀಡುವಂತೆ ಸರಕಾರವೇ ಒಂದೊಮ್ಮೆ ಹೇಳಿಕೆ ನೀಡಿದ್ದರೂ ಇಲ್ಲಿಯವರೆಗೆ ಇದು ಜಾರಿಗೆ ಬಂದಿಲ್ಲ.

ಕಡತದಲ್ಲೇ ಬಾಕಿ ಸಚಿವರ ಹೇಳಿಕೆ!

Advertisement

ರಾಜ್ಯದ 320 ಕಿ.ಮೀ. ವ್ಯಾಪ್ತಿಯ ಕರಾವಳಿ ವಲಯದ ವಿವಿಧ ನಿರ್ವಹಣ ಯೋಜನೆಗಳಿಗೆ ಅನುಮತಿ ನೀಡುವ ಸುಸ್ಥಿರ ಕರಾವಳಿ ನಿರ್ವಹಣ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್‌ಸಿಎಂ) ಅನ್ನು ಸುರತ್ಕಲ್‌ ಎನ್‌ಐಟಿಕೆ ಸಹಯೋಗದಲ್ಲಿ ಮಂಗಳೂರಿನಲ್ಲಿ ಆರಂಭಿಸುವ ಬಗ್ಗೆ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದರು. ಆದರೆ ಸಚಿವರ ಹೇಳಿಕೆ ಕಡತದಲ್ಲಿಯೇ ಬಾಕಿಯಾಗಿದೆ!

ಲಾಭವೇನು?

ಎನ್‌ಐಟಿಕೆ ಅಥವಾ ಕರ್ನಾಟಕ ಸ್ಟೇಟ್‌ ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಶನ್‌ ಸೆಂಟರ್‌ ಮುಖೇನ ಕರಾವಳಿಯಲ್ಲಿಯೇ ಎನ್‌ಸಿಎಸ್‌ಸಿಎಂ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಇದು ಜಾರಿಯಾದರೆ, ಕರಾವಳಿ ಭಾಗದಲ್ಲಿ ದೊಡ್ಡ ಯೋಜನೆ ಜಾರಿಗೊಳಿಸುವ ಆವಶ್ಯಕತೆಯಿದ್ದರೆ ಸಿಆರ್‌ ಝಡ್‌ ಸರ್ವೇ, ಮಾರ್ಕ್‌ ಮಾಡುವುದು, ಮ್ಯಾಪ್‌ ಮಾಡಿಕೊಡಲು ಅಧ್ಯಯನ ತಂಡ ಮಂಗಳೂರಿನಲ್ಲಿಯೇ ಇರಲಿದ್ದಾರೆ. ಈ ಮೂಲಕ ಸುಲಭ, ಕಡಿಮೆ ಅವಧಿಯಲ್ಲಿ ಮ್ಯಾಪ್‌ ಪಡೆಯಬಹುದು.

ಕೆಎಸ್‌ಆರ್‌ಎಸ್‌ಎ’ ಅನುಮೋದನೆಗೆ ಒಲವು

ಹೊಸ ಸಿಆರ್‌ಝಡ್‌ ನಕ್ಷೆ ಲಭ್ಯವಾದ ಅನಂತರ, ರಾಜ್ಯದಲ್ಲಿರುವ “ಕರ್ನಾಟಕ ಸ್ಟೇಟ್‌ ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಶನ್‌ ಸೆಂಟರ್‌’ನವರಿಗೆ ಕೇಂದ್ರದಿಂದ ಅನುಮೋದನೆ ಪಡೆದು ನಕ್ಷೆಯನ್ನು ಸೆಂಟರ್‌ ಮುಖೇನವೇ ಜಾರಿಗೆ ಅನ್ವಯಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಈ ಮೂಲಕ ಚೆನ್ನೈ ಅಲೆದಾಟ ತಪ್ಪಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಉನ್ನತ ಮಟ್ಟದ ಅಧಿಕಾರಿಗಳ ತಂಡ ಈ ಬಗ್ಗೆ ಪರಾಮರ್ಶೆ ನಡೆಸುತ್ತಿದೆ. ಇದಕ್ಕೆ ಪ್ರತೀ ಗ್ರಾಮದ ಪ್ರತ್ಯೇಕವಾಗಿ ಜಿಯೋ ರೆಫರಿಂಗ್‌ ಮಾಡಬೇಕಾಗುತ್ತದೆ.

ಕರಾವಳಿಯಲ್ಲೇ ಆದರೆ ಅನುಕೂಲ: ರಾಜ್ಯದ ಕರಾವಳಿ ಭಾಗದಲ್ಲಿ ಯಾವುದಾದರೂ ಯೋಜನೆ ಜಾರಿಗೊಳಿಸುವುದಾದರೆ ಸಿಆರ್‌ ಝಡ್‌ ಸಹಿತ ವಿವಿಧ ಅನುಮತಿ ಪಡೆಯಲು ಚೆನ್ನೈನಲ್ಲಿರುವ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೀಗಾಗಿ ಹಲವು ಯೋಜನೆ ಅನುಷ್ಠಾನ ಸಂದರ್ಭ ಚೆನ್ನೈಗೆ ತೆರಳಬೇಕಾಗಿದೆ. ಇದರ ಬದಲು ಕೇಂದ್ರ ಸರಕಾರದ ವಿಶೇಷ ಅನುಮತಿ ಪಡೆದುಕೊಂಡು ಎನ್‌ ಐಟಿಕೆ ಅಥವಾ ಕರ್ನಾಟಕ ಸ್ಟೇಟ್‌ ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಶನ್‌ ಸೆಂಟರ್‌ ಮುಖೇನ ಅನುಮೋದನೆ ಪಡೆಯುವ ಕಾರ್ಯ ನಡೆದರೆ ಹೆಚ್ಚು ಅನುಕೂಲವಾಗಲಿದೆ. – ಡಾ| ದಿನೇಶ್‌ ಕುಮಾರ್‌ ವೈ.ಕೆ. ಉಪಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next