ಮಹಾನಗರ, ಮೇ 12: ನಗರದ ಪಚ್ಚನಾಡಿಯಲ್ಲಿ ರೈಲ್ವೇ ಇಲಾಖೆಯು ನಿರ್ಮಿಸಲು ಉದ್ದೇಶಿಸಿರುವ ನೂತನ ಮೇಲ್ಸೇತುವೆ ಕಾಮಗಾರಿ ಹಲವು ತಿಂಗಳಿನಿಂದ ನಿಧಾನವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ನಿತ್ಯ ಸಮಸ್ಯೆ ಉಂಟಾಗುತ್ತಿದೆ.
ಹಳೆ ಸೇತುವೆಯ ಪಿಲ್ಲರ್ ಇದ್ದ ಸ್ಥಳದಲ್ಲೇ ರೈಲ್ವೇ ಹೊಸ ಹಳಿ ಸಾಗುತ್ತಿದ್ದು, ಹೀಗಾಗಿ ಸೇತುವೆಯನ್ನು ವಿಸ್ತರಿಸುವ ಜತೆಗೆ ಕೊಂಚ ಎತ್ತರಕ್ಕೆ ಏರಿಸಲು ಈ ಹಿಂದೆ ಯೋಜನೆ ರೂಪಿಸಲಾಗಿತ್ತು.
ನೂತನ ಮೇಲ್ಸೇತುವೆ ಕಾಮಗಾರಿ 2018ರ ಜನವರಿಯಲ್ಲಿ ಆರಂಭಗೊಂಡಿತ್ತು. ಕೇವಲ ಆರು ತಿಂಗಳಿನಲ್ಲಿ ಸೇತುವೆ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಬಿಟ್ಟುಕೊಡುತ್ತೇವೆ ಎಂದು ಸಂಬಂಧಪಟ್ಟ ಇಲಾಖೆ ಸ್ಥಳೀಯರಿಗೆ ಭರವಸೆ ನೀಡಿತ್ತಾದರೂ ಇನ್ನೂ ಪೂರ್ಣಗೊಂಡಿಲ್ಲ. ಸ್ಥಳದಲ್ಲಿ ಸದ್ಯ ಮೂರರಿಂದ ನಾಲ್ಕು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದಿನ ಮಳೆಗಾಲ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಎನ್ನುತ್ತಾರೆ ಸ್ಥಳೀಯರು.
ರೈಲ್ವೇ ಗೇಟ್ ಹಾಕಿದರೆ ಸವಾರರ ಪರದಾಟ:
Advertisement
ಮಂಗಳೂರು ಜಂಕ್ಷನ್‌ನಿಂದ ತೋಕೂರು ವರೆಗಿನ ಹಳಿ ದ್ವಿಪಥ, ವಿದ್ಯುದೀಕರಣ ಕಾಮಗಾರಿ ಉದ್ದೇಶ ದಿಂದಾಗಿ ಪಚ್ಚನಾಡಿಯಲ್ಲಿನ ಹಳೆ ಸೇತುವೆಯನ್ನು ಒಂದೂವರೆ ವರ್ಷಗಳ ಹಿಂದೆಯೇ ತೆರವುಗೊಳಿಸಲಾಗಿತ್ತು.
Related Articles
Advertisement
ಹಳೆ ಸೇತುವೆಯ ತೆರವಿನಿಂದ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ರೈಲ್ವೇ ಇಲಾಖೆಯು ಇನ್ನೊಂದು ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿ, ತಾತ್ಕಾಲಿಕ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮಾಡಿ ಗೇಟ್ ಅಳವಡಿಸಿದೆ. ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ಸ್ಥಳೀಯರು ದಿನಂಪ್ರತಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ಒಂದು ಬಾರಿ ಗೇಟ್ ಹಾಕಿದರೆ ಸುಮಾರು ಒಂದು ಕಿ.ಮೀ. ವರೆಗೆ ವಾಹನಗಳು ಸಾಲು ನಿಂತಿರುತ್ತವೆ. ಕೆಲವೊಮ್ಮೆ ಇದೇ ರೈಲ್ವೇ ಹಳಿಯಲ್ಲಿ ಗೂಡ್ಸ್ ರೈಲು ಸೇರಿದಂತೆ ಅರ್ಧ ಗಂಟೆಯಲ್ಲಿ ಸುಮಾರು 4-5 ರೈಲು ಸಂಚರಿಸುತ್ತದೆ.
ಈ ವೇಳೆ ಒಂದು ಬಾರಿ ಮುಚ್ಚಿದ ರೈಲ್ವೇ ಗೇಟ್ ತೆರೆಯುವುದು ಸುಮಾರು ಅರ್ಧ ಗಂಟೆತಗಲುತ್ತದೆ.
ಈ ರಸ್ತೆಯ ಮುಖೇನ ಕಟೀಲು, ಪಿಲಿಕುಳ, ಮೂಡಬಿದಿರೆ, ಸುರತ್ಕಲ್, ಪಣಂಬೂರು, ವಾಮಂಜೂರು ಸಹಿತ ಇತರ ಪ್ರದೇಶಗಳನ್ನು ಸಂಪರ್ಕಿಸಲು ಹತ್ತಿರವಾಗುತ್ತದೆ. ಜತೆಗೆ ರಸ್ತೆ ಅಗಲ ಮತ್ತು ಉತ್ತಮವಾಗಿರುವುದರಿಂದ ಹೆಚ್ಚಿನ ವಾಹನ ಸವಾರರು ಇದೇ ರಸ್ತೆ ಆಯ್ಕೆ ಮಾಡುತ್ತಾರೆ.
ಇನ್ನು ಮೂಡುಬಿದಿರೆ ಕಡೆಗೆ ತೆರಳುವ ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು, ಕಾಲೇಜು ವಾಹನಗಳು ಕೂಡ ಇದೇ ರಸ್ತೆಯಲ್ಲಿ ತೆರಳುತ್ತವೆ. ಇದರಿಂದಾಗಿ ಈ ರಸ್ತೆ ಸದಾ ವಾಹನ ಸಂಚಾರವಿರುತ್ತದೆ. ಈ ಸಮಯ ರೈಲ್ವೇ ಗೇಟ್ ಹಾಕಿದರೆ ಮಾರುದ್ದದ ವಾಹನಗಳ ಸಾಲು ನಿಂತಿರುತ್ತದೆ.
ಅರ್ಧಕ್ಕೆ ತಿರುಗುವ ಸಿಟಿ ಬಸ್:
ಈ ಭಾಗದ ಸುತ್ತಮುತ್ತಲು ಸ್ವಂತ ವಾಹನ ಇಲ್ಲದ ಮಂದಿ ಸಿಟಿ ಬಸ್‌ಗಳನ್ನು ಅವಲಂಭಿಸಿದ್ದಾರೆ. ಸ್ಟೇಟ್ಬ್ಯಾಂಕ್ ಮತ್ತು ಕಂಕನಾಡಿಯಿಂದ ಪಚ್ಚನಾಡಿ ಕಡೆಗೆ ಸಿಟಿ ಬಸ್‌ಗಳು ಪ್ರಯಾಣಿಸುತ್ತದೆ. ಆದರೆ ರೈಲ್ವೇ ಗೇಟ್ ಹಾಕುವುದರಿಂದ ಪಚ್ಚನಾಡಿ ಕಡೆಗೆ ಬರುವ ಕೆಲವು ಸಿಟಿ ಬಸ್‌ಗಳು ಬೋಂದೆಲ್ನಲ್ಲಿಯೇ ತಿರುಗಿ ಹೋಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ರಮೇಶ್ ರೈ.
ತ್ವರಿತ ಕಾಮಗಾರಿಗೆ ಸೂಚನೆ:
ಪಚ್ಚನಾಡಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ಬಗ್ಗೆ ಈ ಹಿಂದೆ ಕೂಡ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿಗೆ ವೇಗ ನೀಡಬೇಕು ಎಂಬ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಜತೆ ಈ ಹಿಂದೆ ಸಭೆ ನಡೆಸಿದ್ದೇನೆ. ಚುನಾವಣ ನೀತಿ ಸಂಹಿತೆಯ ಬಳಿಕ ಈ ಬಗ್ಗೆ ಪರಿಶೀಲನೆ ನಡೆಸಿ ತ್ವತರಿತವಾಗಿ ಕಾಮಗಾರಿ ನಡೆಸಲು ಸೂಚನೆ ನೀಡುತ್ತೇನೆ. – ಡಾ| ವೈ. ಭರತ್ ಶೆಟ್ಟಿ , ಶಾಸಕ
3 ತಿಂಗಳಲ್ಲಿ ಪೂರ್ಣ:
ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಮುಂದಿನ ಆಗಸ್ಟ್ ವೇಳೆಗೆ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡುತ್ತೇವೆ. – ಮುತ್ತು, ಸೈಟ್ ಎಂಜಿನಿಯರ್