Advertisement

ಪಾಲಿಕೆ ಸದಸ್ಯರಿಗೆ ಸಿಗದ ಧ್ವಜಾರೋಹಣ ಭಾಗ್ಯ

03:25 PM Aug 14, 2022 | Team Udayavani |

ಬೆಳಗಾವಿ: ಸ್ವಾತಂತ್ರ್ಯ ಮಹೋತ್ಸವದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡುವ ಸೌಭಾಗ್ಯ ಪಾಲಿಕೆಯ ಸದಸ್ಯರಿಗೆ ಒಲಿದು ಬರಲಿಲ್ಲ. ಈ ವಿಷಯದಲ್ಲಿ ಸರಕಾರ ಮತ್ತು ಸ್ಥಳೀಯ ಬಿಜೆಪಿ ಶಾಸಕರ ಭರವಸೆ ಮತ್ತೂಮ್ಮೆ ಹುಸಿಯಾಗಿದೆ.

Advertisement

ಶಾಸಕರ ಮಾತು ನಂಬಿ ಮೇಯರ್‌ ಅಗುವ ಮೂಲಕ ದ್ವಜಾರೋಹಣ ಮಾಡುವ ಕನಸು ಕಂಡಿದ್ದ ಸದಸ್ಯರಿಗೆ ನಿರಾಸೆಯಾಗಿದೆ. ಜೊತೆಗೆ ಈ ನಿರಾಸೆಯ ಬೆನ್ನಲ್ಲೇ ಬಿಜೆಪಿ ಸದಸ್ಯರಲ್ಲಿ ಶಾಸಕರ ನಡೆಯ ಬಗ್ಗೆ ಅಸಮಾಧಾನ ಸಹ ಉಂಟಾಗಿದೆ.

ಪಾಲಿಕೆಗೆ ಚುನಾವಣೆ ನಡೆದು 11 ತಿಂಗಳಾಯಿತು. ಆದರೆ ಇದುವರೆಗೆ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಿಲ್ಲ. ಅಲ್ಲದೆ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದ ನಂತರ ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಆಗಸ್ಟ್‌ 12ರೊಳಗೆ ಮಹಾಪೌರ ಚುನಾವಣೆ ಆಗಲಿದ್ದು, ನೂತನ ಮಹಾಪೌರರು ಪಾಲಿಕೆಯ ಮೇಲೆ ಧ್ವಜಾರೋಹಣ ಮಾಡಲಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದರು. ಅಷ್ಟೇ ಅಲ್ಲ ಕಾಂಗ್ರೆಸ್‌ ಮುಖಂಡರ ಟೀಕೆಗೆ ಸ್ಪಷ್ಟನೆ ನೀಡಿದ್ದರು.

ಆದರೆ ಶಾಸಕರ ಈ ಭರವಸೆ ಹುಸಿಯಾಗಿದೆ. ಶಾಸಕರ ಮಾತು ನಂಬಿ ಮಹಾಪೌರರ ಚುನಾವಣೆಯ ಬಗ್ಗೆ ಆಸೆ ಹೊಂದಿದ್ದ ಸದಸ್ಯರಿಗೆ ಭ್ರಮ ನಿರಸನವಾಗಿದೆ. ಹುಸಿಯಾದ ಈ ಭರವಸೆ ಬಿಜೆಪಿ ವಲಯದಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಎಡೆಮಾಡಿ ಕೊಟ್ಟಿದೆ. ಶಾಸಕರು ಉದ್ದೇಶ ಪೂರ್ವಕವಾಗಿ ಮಹಾಪೌರರ ಚುನಾವಣೆ ವಿಳಂಬ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಮಹಾನಗರ ಪಾಲಿಕೆಯ ಸದಸ್ಯರು ಚುನಾವಣೆಯಲ್ಲಿ ಗೆದ್ದುಬಂದು ಬರುವ ಸೆ.6ಕ್ಕೆ ಒಂದು ವರ್ಷವಾಗಲಿದೆ. ಆದರೆ ಇವತ್ತಿಗೂ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರವಾಗಿಲ್ಲ. ಮಹಾಪೌರರ ಆಯ್ಕೆಯಾಗಿಲ್ಲ. ಸಾಮಾನ್ಯ ಸಭೆ ನಡೆದಿಲ್ಲ. ಹೇಳಿಕೊಳ್ಳಲು ಪಾಲಿಕೆ ಸದಸ್ಯರು ಎನ್ನುವಂತಿದ್ದರೂ ಅದರ ಅಧಿಕಾರ ಅನುಭವಿಸಲಾರದ ಸ್ಥಿತಿ ಇದೆ.

Advertisement

ಶಾಸಕರ ನಡೆ ಪಾಲಿಕೆಯ ಬಿಜೆಪಿ ಸದಸ್ಯರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ. ಆ.15ರಂದು ನಾವು ಧ್ವಜಾರೋಹಣ ಮಾಡಬೇಕಿತ್ತು ಎಂದು ಕನಸು ಕಂಡಿದ್ದ ಸದಸ್ಯರು ಈಗ ತಮ್ಮ ನಾಯಕರ ವಿರುದ್ಧವೇ ಕೆಂಡಕಾರುತ್ತಿದ್ದಾರೆ. ಅದರೆ ಪಕ್ಷದ ಚೌಕಟ್ಟಿನಲ್ಲಿ ಯಾರೂ ಬಹಿರಂಗವಾಗಿ ಹೇಳಿಕೆ ನೀಡಲು ಮುಂದೆ ಬರುತ್ತಿಲ್ಲ.

ಪಾಲಿಕೆಯ ಒಟ್ಟು 58 ಸದಸ್ಯರಲ್ಲಿ ಬಿಜೆಪಿ 35 ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್‌ 10, ಎಐಎಂಐಎಂ ಒಂದು ಹಾಗೂ ಪಕ್ಷೇತರರು 12 ಜನ ಸದಸ್ಯರಿದ್ದಾರೆ. ಬಿಜೆಪಿ ಸಂಪೂರ್ಣ ಬಹುಮತ ಹೊಂದಿದ್ದರೂ ಪಕ್ಷದ ಸದಸ್ಯರಿಗೆ ಅಧಿಕಾರ ಇಲ್ಲ. ಮಹಾಪೌರರ ಚುನಾವಣೆ ನಡೆಸದೆ ವಿಳಂಬ ಧೋರಣೆ ಆನುಸರಿಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಹಾನಗರ ಪಾಲಿಕೆಯಲ್ಲಿ ಶಾಸಕ ಅಭಯ ಪಾಟೀಲ ಮಹಾಪೌರ ಮತ್ತು ಅನಿಲ ಬೆನಕೆ ಉಪಮಹಾಪೌರ ಎಂದು ವ್ಯಂಗವಾಗಿ ಹೇಳಿದ್ದರು. ಅಷ್ಟೇ ಅಲ್ಲ ಕಾಂಗ್ರೆಸ್‌ ವತಿಯಿಂದ ಅವರಿಗೆ ಮಹಾಪೌರ ಮತ್ತು ಉಪಮಹಾಪೌರ ಗೌನು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದ್ದರು.

ಹಿಂದಿನ ಸದಸ್ಯರ ಅವಧಿ 2019ರ ಮಾಚ್‌ ìದಲ್ಲಿ ಕೊನೆಗೊಂಡಿತ್ತು. ನಂತರ ಮೀಸಲಾತಿ ನಿಗದಿ ಮತ್ತು ಕೊರೊನಾ ಕಾರಣಗಳಿಂದ ಚುನಾವಣೆ ವಿಳಂಬವಾಗಿ ಕೊನೆಗೆ 2021ರ ಸೆ.3ರಂದು ಚುನಾವಣೆ ನಡೆದು ದಿನಾಂಕ 6ರಂದು ಫಲಿತಾಂಶ ಪ್ರಕಟವಾಗಿತ್ತು. ಆದರೆ ನೂತನ ಸದಸ್ಯರು ಇದುವರೆಗೆ ಪ್ರಮಾಣ ವಚನ ಸ್ವೀಕಾರ ಮಾಡಿಲ್ಲ. ನೂತನ ಮಹಾಪೌರ ಮತ್ತು ಉಪಮಹಾಪೌರರ ಆಯ್ಕೆ ನಡೆದಿಲ್ಲ ಎಂಬುದು ವಿಚಿತ್ರವಾದರೂ ಸತ್ಯ.

ನಿಜಕ್ಕೂ ಇದು ಬೆಳಗಾವಿ ಜನರ ದುರ್ದೈವ. ಪಾಲಿಕೆಯ ಚುನಾವಣೆ ನಡೆದು ವರ್ಷವಾಗುತ್ತ ಬಂದಿದೆ. ಇನ್ನೂ ಸದಸ್ಯರಿಗೆ ಅ ಧಿಕಾರ ಇಲ್ಲ. ಮಹಾಪೌರರ ಆಯ್ಕೆಯಾಗಿಲ್ಲ ಎಂದರೆ ಇದಕ್ಕಿಂತ ಬೇರೆ ನಿರ್ಲಕ್ಷದ ಉದಾಹರಣೆ ಇಲ್ಲ. ಸರಕಾರ ಹಾಗೂ ಸ್ಥಳೀಯ ಶಾಸಕರು ಈ ವಿಷಯದಲ್ಲಿ ಅಸಡ್ಡೆ ವಹಿಸಿದ್ದಾರೆ. ಆ.12ಕ್ಕೆ ನೂತನ ಮಹಾಪೌರರ ಆಯ್ಕೆಯಾಗಲಿದೆ ಎಂದು ಶಾಸಕರು ಹೇಳಿದ್ದಾಗ ನಾವು ನಂಬಿದ್ದೆವು. ಈಗ ಈ ನಂಬಿಕೆ ಹುಸಿಯಾಗಿದೆ. ಹೀಗಾಗಿ ನಾವು ಬರುವ ಸೆ.7ರಂದು ಚುನಾವಣೆಯ ವಾರ್ಷಿಕೋತ್ಸವ ಆಚರಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ. ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ನಡೆದು ಮೂರು ವರ್ಷಗಳೇ ಆಗಿವೆ. ಚುನಾಯಿತ ಪ್ರತಿನಿಧಿಗಳಿದ್ದರೂ ಅಧಿಕಾರ ನಡೆಸುವುದು ಸದಸ್ಯರಿಗೆ ಸಾಧ್ಯವಾಗಿಲ್ಲ. ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳಿಗೆ ಮೀಸಲಾತಿ ಪ್ರಕಟಮಾಡಿ ಹಲವು ತಿಂಗಳು ಕಳೆದಿದ್ದರೂ ಇದರ ಚುನಾವಣೆಗೆ ಮುಹೂರ್ತ ಕೂಡಿಬಂದಿಲ್ಲ. ಈಗ ಶಾಸಕರು ನೀಡಿದ ಭರವಸೆ ಸಹ ಸುಳ್ಳಾಗಿದೆ.

-ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next