ಬೆಂಗಳೂರು: ತಿಂಗಳಿಗೆ ಸುಮಾರು 7 ಸಾವಿರ ರೂ. ಬಾಡಿಗೆಯ ಕೊಠಡಿಯಲ್ಲಿ ಕುಳಿತು ಟೆಕ್ಕಿಯೊಬ್ಬ ತನ್ನ ತಾಂತ್ರಿಕ ನೈಪುಣ್ಯತೆಯಿಂದ ಬಿಎಸ್‌ಎನ್‌ಎಲ್‌ಗೆ 9.50 ಕೋಟಿ ರೂ .ನಷ ಹಾಗೂ ಕೇಂದ್ರ ಸರ್ಕಾರಕ್ಕೆ 75 ಲಕ್ಷ ರೂ. ತೆರಿಗೆ ವಂಚನೆ ಮಾಡಿದ ಪ್ರಕರಣವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ.
ಬಿಎಸ್‌ಎನ್‌ಎಲ್ ಕಂಪೆನಿಗೆ ಉಂಟಾಗುತ್ತಿದ್ದ ನಷ್ಟ ಸಂಬಂಧ ದಾಖಲಾಗಿದ್ದ ದೂರು ಆಧರಿಸಿ ತನಿಖೆ ಆರಂಭಿಸಿದ್ದ ಸಿಸಿಬಿ ಸಂಚಾರ ಭದ್ರತಾ ವಿಭಾಗದ ಪೊಲೀಸರು, ತೆಲಂಗಾಣ ಮೂಲದ ಗೋಪಾಲಕೃಷ್ಣ ವರ್ಮಾ (35) ಎಂಬಾತನನ್ನು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ಕುಕ್ಕಟಪಲ್ಲಿಯ ನಿವಾಸಿ ವರ್ಮಾ, ಡಿಪ್ಲೋಮಾ ಇನ್ ಮೆಕ್ಯಾನಿಕ್ ಎಂಜಿನಿಯರ್ ಪದವೀಧರ. ಈ ಹಿಂದೆ ಪ್ರತಿಷ್ಠಿ ಕಂಪೆನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿದ್ದು, ಮೂರು ವರ್ಷಗಳ ಹಿಂದೆ ಕೆಲಸ ತೊರೆದಿದ್ದ. ಬಳಿಕ ತಿಳಿದಿರುವ ಗಣಕ ಜ್ಞಾನದಿಂದಲೇ ಈ ದಂಧೆ ಪ್ರಾರಂಭಸಿದ್ದ ಎಂದು ಪೊಲೀಸರು ತಿಳಿಸಿದರು.
ಆರೋಪಿಗೆ ಅಮೆರಿಕಾ ಕಂಪೆನಿ ಸಾಥ್!: ಆರೋಪಿ ಗೋಪಾಲಕೃಷ್ಣ ವರ್ಮಾ ತನ್ನ ದಂಧೆ ನಡೆಸಲು ಅಮೆರಿಕಾದ ಗುಡ್‌ವಿನ್ ಎಂಬಾತನ ಸಹಾಯದೊಂದಿಗೆ ಚಿಕಾಗೋನಲ್ಲಿರುವ ಯುನಿಟೆಲ್ ಕಂಪೆನಿಯ ಸಂಪರ್ಕ ಸಾಧಿಸಿದ್ದ. ಆ ಕಂಪೆನಿಯ ಸಹಾಯದೊಂದಿಗೆ ಅಮೆರಿಕಾ ಸೇರಿದಂತೆ ವಿದೇಶಿ ಕರೆಗಳನ್ನು ತನ್ನ ಬಳಿಯಿರುವ ಸಿಮ್ ಬಾಕ್ಸ್, ಮೋಡೆಮ್ ಗಳನ್ನು ಬಳಸಿಕೊಂಡು ಸ್ಥಳೀಯ ಕರೆಗಳನ್ನಾಗಿ ಡಿ’ಕೋಡ್ ಮಾಡುತ್ತಿದ್ದ.
ಇದರಿಂದ ಅಂತಾರಾಷ್ಟ್ರೀಯ ಕರೆಗಳನ್ನು ನಿಗದಿತ ದರಕ್ಕಿಂತ ಕಡಿಮೆ ವೆಚ್ಚಕ್ಕೆ ಮಾಡಬಹುದಾಗಿತ್ತು. ಅದೇ ರೀತಿ ವಿದೇಶಗಳಿಂದ ಇಂಟರ್‌ನೆಟ್ ಕರೆ ಮಾಡುವವರನ್ನು ಸಂಪರ್ಕಿಸಿ ಈ ಅನುಕೂಲ ಮಾಡಿಕೊಡುತ್ತಿದ್ದ. ಇದರಿಂದ ತಾನೂ ಲಾಭ ಮಾಡಿಕೊಳ್ಳುತ್ತಿದ್ದ. ಈ ದಂಧೆಗೆ ಆರೋಪಿ ಬಿಎಸ್‌ಎನ್‌ಎಲ್ ಸಿಮ್‌ಗಳನ್ನು ಬಳಸುತ್ತಿದ್ದುದರಿಂದ ಸಂಸ್ಥೆಗೆ ನಷ್ಟವುಂಟಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಸದ್ಯ ಆರೋಪಿ ವಾಸವಿದ್ದ ಕೊಠಡಿಯಲ್ಲಿ ನಾಲ್ಕು ಸಿಮ್ ಬಾಕ್ಸ್‌ಗಳಲ್ಲಿದ್ದ 40ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು, ಕರೆಗಳ ಪರಿವರ್ತನೆಗೆ ಬಳಸುತ್ತಿದ್ದ ಮೂರು ಡಿ-ಲಿಂಕ್ ಉಪಕರಣಗಳು, ಒಂದು ಕಂಪ್ಯೂಟರ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ತೆಲಂಗಾಣದಲ್ಲಿಯೂ ವಂಚನೆ ನಡೆಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ನಷ್ಟ ಆದದ್ದು ಹೇಗೆ?: ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದ ಮೂರಂತಸ್ತಿನ ಮನೆಯೊಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿದ್ದ ಗೋಪಾಲಕೃಷ್ಣ , ಅಲ್ಲಿಯೇ ಕುಳಿತು ಅನ್‌ಲಿಮಿಟೆಡ್ ಕರೆಗಳ ಬಿಎಸ್‌ಎನ್‌ಎಲ್ ಸಿಮ್‌ಗಳನ್ನು ಖರೀದಿಸಿ ಅದರ ಸಹಾಯದೊಂದಿಗೆ ಅಮೆರಿಕಾ ಸೇರಿದಂತೆ ವಿದೇಶಗಳಿಂದ ಬರುತ್ತಿದ್ದ ಅಂತಾರಾಷ್ಟ್ರೀಯ ಕರೆಗಳನ್ನು ಇಂಟರ್‌ನೆಟ್ ಬಳಸಿ, ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಬಿಎಸ್‌ಎನ್‌ಎಲ್‌ಗೆ ನಷ್ಟವುಂಟು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.