ಬೆಂಗಳೂರು: ಸನ್ನಡತೆ ಆಧಾರದಲ್ಲಿ ಬಿಡುಗಡೆಗಾಗಿ ಈ ಬಾರಿಯ ಗಣರಾಜ್ಯೋತ್ಸವವನ್ನು ಎದುರು ನೋಡುತ್ತಿದ್ದ 100ಕ್ಕೂ ಜೈಲುಹಕ್ಕಿಗಳಿಗೆ ಮತ್ತೆ ನಿರಾಸೆ ಮೂಡಿದೆ. ಪರಪ್ಪನ ಅಗ್ರಹಾರ, ರಾಜ್ಯದ 8 ಕೇಂದ್ರ ಕಾರಾಗೃಹಗಳು ಸೇರಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಶಿಫಾರಸುಗೊಂಡಿರುವ ಕೈದಿಗಳ ಪಟ್ಟಿಗೆ ರಾಜ್ಯಪಾಲರ ಅಂಕಿತ ಇನ್ನೂ ಬಿದ್ದಿಲ್ಲ. ಹೀಗಾಗಿ ಗಣರಾಜ್ಯೋತ್ಸವಕ್ಕೆ ಕೈದಿಗಳು ಬಿಡುಗಡೆಯಾಗುವ ನಿರೀಕ್ಷೆ ಹುಸಿಯಾಗಿದೆ.
ಬಿಡುಗಡೆ ಪಟ್ಟಿಯಲ್ಲಿರುವ ಸಜಾಕೈದಿಗಳ ಪೈಕಿ ಕೆಲವರ ಹೆಸರು ಕಳೆದ ವರ್ಷವೇ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಬಿಡುಗಡೆ ಪಟ್ಟಿಯಲ್ಲಿದ್ದವು. ಈ ಬಾರಿಯಾದರೂ ತಮ್ಮ ಬಿಡುಗಡೆಯಾಗಬಹುದೆನ್ನುವ ನಿರೀಕ್ಷೆಯಲ್ಲಿದ್ದ ಕೈದಿಗಳು ಹಾಗೂ ಅವರನ್ನು ಬರಮಾಡಿಕೊಳ್ಳಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸಂಬಂಧಿಕರು, ಸ್ನೇಹಿತರು ಮತ್ತಷ್ಟು ದಿನಗಳ ಕಾಲ ಕಾಯಬೇಕಿದೆ.
ಕೇಂದ್ರ ಪರಪ್ಪನ ಅಗ್ರಹಾರದಿಂದ 14 ವರ್ಷ ಜೈಲು ಶಿಕ್ಷೆ ಪೂರೈಸಿರುವ 43 ಮಂದಿ ಪುರುಷ ಕೈದಿಗಳು, ಓರ್ವ ಮಹಿಳೆ , ಬಳ್ಳಾರಿ ಜೈಲಿನಿಂದ 12, ಬಿಜಾಪುರ ಜೈಲಿಂದ 11, ಮೈಸೂರು ಕಾರಾಗೃಹದಿಂದ 16, ಬೆಳಗಾವಿ ಜೈಲಿಂದ 16 ಮಂದಿ, ಧಾರವಾಡ ಜೈಲಿಂದ 8 ಹಾಗೂ ತುಮಕೂರಿನ ಮಹಿಳಾ ಬಂಧಿಖಾನೆಯಿಂದ ಓರ್ವ ಸಜಾಕೈದಿ ಮಹಿಳೆ ಸೇರಿ ವಿವಿಧ ಕಾರಾಗೃಹಗಳಿಂದ 100ಕ್ಕೂ ಅಧಿಕ ಕೈದಿಗಳ ಪಟ್ಟಿಯನ್ನು ರಾಜ್ಯಸರ್ಕಾರಕ್ಕೆ ಡಿಸೆಂಬರ್ ತಿಂಗಳಿನಲ್ಲಿಯೇ ಕಳುಹಿಸಿಕೊಡಲಾಗಿತ್ತು ಎಂದು ಉನ್ನತ ಮೂಲಗಳಿಂದ “ಉದಯವಾಣಿ’ಗೆ ತಿಳಿದು ಬಂದಿದೆ.
ಪ್ರತಿಬಾರಿಯಂತೆ ಈ ಬಾರಿಯೂ ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಸಿದ್ಧಪಡಿಸಲಾಗಿರುವ ಕೈದಿಗಳ ಶಿಫಾರಸು ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಸರ್ಕಾರ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿದ ಬಳಿಕವೇ ಬಿಡುಗಡೆ ಮಾಡುತ್ತೇವೆ. ಆದರೆ, ಇದುವರೆಗೂ ಅಂತಹ ಯಾವುದೇ ಆದೇಶ ಬಂದಿಲ್ಲ ಎಂದು ಕಾರಾಗೃಹ ಇಲಾಖೆಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ವಿಳಂಬ ಧೋರಣೆ ಕಾರಣವೇ?: ರಾಜ್ಯಸರ್ಕಾರಕ್ಕೆ ಡಿಸೆಂಬರ್‌ನಲ್ಲಿಯೇ ಕೈದಿಗಳ ಪಟ್ಟಿ ಕಳುಹಿಸಿಕೊಡಲಾಗಿದೆ. ನಿಯಮಗಳ ಪ್ರಕಾರ ಈ ಪಟ್ಟಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ ಬಳಿಕ ರಾಜ್ಯಪಾಲರ ಅಂಕಿತ ಹಾಕಬೇಕು. ಆದರೆ, ಡಿಸೆಂಬರ್ 28 ಹಾಗೂ ಜನವರಿ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪಟ್ಟಿಯನ್ನು ಮಂಡಿಸುವ ಗೋಜಿಗೆ ಹೋಗಿಲ್ಲ. ಜ.17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 105 ಪುರುಷ ಸಜಾಕೈದಿಗಳು ಹಾಗೂ ನಾಲ್ವರು ಮಹಿಳಾ ಕೈದಿಗಳ ಬಿಡುಗಡೆಗೆ ಅನುಮತಿ ನೀಡಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಹೀಗಾಗಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
“ಗಣರಾಜ್ಯೋತ್ಸವಕ್ಕೆ ಸನ್ನಡತೆ ಆಧಾರದಲ್ಲಿ ಶಿಫಾರಸು ಮಾಡಲಾಗಿದ್ದ ನೂರಕ್ಕೂ ಹೆಚ್ಚು ಕೈದಿಗಳ ಪಟ್ಟಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ರಾಜ್ಯಪಾಲರ ಅನುಮತಿಗೆ ಕಳುಹಿಸಿಕೊಡಲಾಗಿದೆ.ರಾಜ್ಯಪಾಲರು ಒಪ್ಪಿಗೆ ಸೂಚಿಸಿದ ಬಳಿಕ ಬಿಡುಗಡೆ ಮಾಡಲಾಗುವುದು’
-ರಾಮಲಿಂಗಾರೆಡ್ಡಿ, ಗೃಹಸಚಿವ
* ಮಂಜುನಾಥ್ ಲಘುಮೇನಹಳ್ಳಿ