ಅಲಹಾಬಾದ್: ಎಲ್ಲ ನಾಗರಿಕರಿಗೂ ನ್ಯಾಯ ಹಾಗೂ ಸಕಲ ಸೌಕರ್ಯಗಳನ್ನು ಕಲ್ಪಿಸುವುದೇ ಸರ್ಕಾರಗಳ ಜವಾಬ್ದಾರಿಯಾಗಿದ್ದು, ಅದುವೇ “ಸಬ್‌ಕಾ ಸಾಥ, ಸಬ್‌ಕಾ ವಿಕಾಸ್ ಮತ್ತು ಸಬ್‌ಕಾ ವಿಶ್ವಾಸ್’ಗೆ ಮೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಶನಿವಾರ ದಿವ್ಯಾಂಗರು ಹಾಗೂ ಹಿರಿಯ ನಾಗರಿಕರಿಗೆ ಸಹಾಯಕ ಸಾಧನಗಳನ್ನು ವಿತರಿಸುವ ಕಾರ್ಯ ಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ದೇಶದ 130 ಕೋಟಿ ಜನರ ಸೇವೆಯೇ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ, ಈ ಹಿಂದಿನ ಸರ್ಕಾರಗಳು ಜನರ ಬಗ್ಗೆ ಕಾಳಜಿಯನ್ನೇ ವಹಿಸಿರಲಿಲ್ಲ ಎಂದು ಆರೋಪಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ನಮ್ಮ ಸರ್ಕಾರ ದೇಶದ ವಿವಿಧೆಡೆ ಇಂತಹ 9 ಸಾವಿರ ಶಿಬಿರಗಳನ್ನು ಆಯೋಜಿಸಿದೆ.
900 ಕೋಟಿ ರೂ.ಗೂ ಹೆಚ್ಚು ವೆಚ್ಚದ ಸಾಧನಗಳನ್ನು ದಿವ್ಯಾಂಗರಿಗೆ ವಿತರಿಸಲಾಗಿದೆ ಎಂದೂ ಮೋದಿ ಹೇಳಿದ್ದಾರೆ. ಅಲ್ಲದೆ, ಹಿರಿಯ ನಾಗರಿಕರು ಹಾಗೂ ದಿವ್ಯಾಂಗರಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಕುರಿತೂ ಅವರು ವಿವರಿಸಿದ್ದಾರೆ.
ಎಕ್ಸ್‌ಪ್ರೆಸ್‌ವೇಗೆ ಅಡಿಗಲ್ಲು:
ಚಿತ್ರಕೂಟದಲ್ಲಿ 15 ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ 296 ಕಿ.ಮೀ. ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಗೆ ಶಿಲಾನ್ಯಾಸವನ್ನೂ ಪ್ರಧಾನಿ ಮೋದಿ ನೆರವೇ ರಿಸಿದ್ದಾರೆ. ಈ ಎಕ್ಸ್‌ಪ್ರೆಸ್‌ವೇ ಉತ್ತರಪ್ರದೇಶದ ಚಿತ್ರಕೂಟ, ಬಂದಾ, ಹಮೀರ್‌ಪುರ ಮತ್ತು ಜಲೌನ್ ಜಿಲ್ಲೆಗಳಲ್ಲಿ ಹಾದುಹೋಗಲಿದ್ದು, ಇದು ಈ ಪ್ರದೇಶದ ಅಭಿವೃದ್ಧಿಯ ಎಕ್ಸ್‌ಪ್ರೆಸ್‌ವೇ ಆಗಿ ಹೊರಹೊಮ್ಮಲಿದೆ ಎಂದು ಮೋದಿ ಹೇಳಿದ್ದಾರೆ.